ಜೊತೆ ಜೊತೆಯಲಿ..ಗಂಗಾ-ರಂಗ..
ಬಡತನದಿಂದ ಬಂದ ಮಹಿಳೆಗೆ ಮುಖ್ಯಮಂತ್ರಿ ಪದಕದ ಗರಿ !
ಯುವ ಭಾರತ ವಿಶೇಷ ಗೋಕಾಕ :
ಬಡತನದ ಭವಣೆಯಲ್ಲಿ ನೊಂದು ಬೆಂದಿದ್ದ ಮಹಿಳೆಯೊಬ್ಬರಿಗೆ ಇದೀಗ ಮುಖ್ಯಮಂತ್ರಿಯವರ ಸೇವಾ ಪದಕ ಹುಡುಕಿಕೊಂಡು ಬಂದಿದೆ. ಇದು ಅವರ ಕುಟುಂಬ ಹಾಗೂ ಗ್ರಾಮಸ್ಥರ ಅಪಾರ ಮೆಚ್ಚುಗೆಗೆ ಕಾರಣವಾಗಿದೆ.
ಗಂಗವ್ವ ನಂದೆಣ್ಣವರ/ಗಂಗಾ ರಂಗನಾಥ ಪಾಟೀಲ ಎಂಬುವರ ಸೇವಾ ಕಾರ್ಯ ಇದೀಗ ಎಲ್ಲೆಡೆ ಅಪಾರ ಅಭಿಮಾನಕ್ಕೆ ಕಾರಣವಾಗಿದೆ. ಬೈಲಹೊಂಗಲ ಉಪಕಾರಾಗೃಹದಲ್ಲಿ ಮುಖ್ಯ ವೀಕ್ಷಕರಾಗಿರುವ ಅವರಿಗೆ ಕಾರಾಗೃಹ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನೀಡಲಾಗುವ ಮಾನ್ಯ ಮುಖ್ಯಮಂತ್ರಿ ಅವರ ಪದಕಗಳ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಲಾಗುತ್ತಿದೆ ಎಂದು ಬಿ. ಎನ್ .ದೇವರಾಜ್, ಸರಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಸೆರೆಮನೆ ಮತ್ತು ಸಿನಿಮಾ) ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಗಂಗವ್ವ ಅವರು ಮೂಲತಃ ಬೈಲಹೊಂಗಲ ತಾಲೂಕಿನವರು. ಅವರ ಪತಿ ರಂಗನಾಥ ಅವರು ಗೋಕಾಕ ತಾಲೂಕಿನ ಉಪ್ಪಾರಟ್ಟಿ ಗ್ರಾಮದವರು. ಈ ಹಿಂದೆ ಗೋಕಾಕ ಕಾರಾಗೃಹದಲ್ಲಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ರಂಗನಾಥ ಪಾಟೀಲ ಸದ್ಯ ಬೈಲಹೊಂಗಲ ಉಪ ಕಾರಾಗೃಹದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದಂಪತಿಗಳಿಬ್ಬರು ಜೊತೆ ಜೊತೆಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವುದು ಸಹಾ ಇನ್ನೊಂದು ವಿಶೇಷ.