ಕಾದರವಳ್ಳಿ ಮಲಪ್ರಭಾ ನದಿ ತೀರದ ಚರಂತಿಮಠದ ಶ್ರೀ ಸದ್ಗುರು ಅದೃಶ್ಯಶಿವಯೋಗೀಶ್ವರರ 85 ನೇ ಸ್ಮರಣೋತ್ಸವದ ಆಧ್ಯಾತ್ಮ ಚಿಂತನೆ
ಯುವ ಭಾರತ ಸುದ್ದಿ ಇಟಗಿ : ಪಾಪ ಮಾಡಿದರೆ ದು:ಖ ಲಭಿಸುತ್ತದೆ. ಪಾಪದಿಂದ ದೂರವಿದ್ದಾಗ ಸುಖ ದೊರೆಯುತ್ತದೆ ಎಂದು ಗಂದಿಗವಾಡದ ಪ್ರವಚನಕಾರ ಶ್ರೀಮೃತ್ಯುಂಜಯ್ಯ ಸ್ವಾಮೀಜಿ ಹೇಳಿದರು.
ಕಾದರವಳ್ಳಿ ಗ್ರಾಮದ ಮಲಪ್ರಭಾ ನದಿ ತೀರದ ಚರಂತಿಮಠದ ಶ್ರೀ ಸದ್ಗುರು ಅದೃಶ್ಯಶಿವಯೋಗೀಶ್ವರರ 85 ನೇ ಸ್ಮರಣೋತ್ಸವದ ಆಧ್ಯಾತ್ಮ ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಪಕ್ಕೆ ಭಯ ಪಟ್ಟವರು ಸುಖ, ಸಂತೋಷ ಪಡೆಯಬಹುದು. ನಾವೆಲ್ಲ ಇಂದು ಪಾಪ ಪ್ರಜ್ಞೆಯಲ್ಲಿ ಸಾಗುತ್ತಿದ್ದೇವೆ. ನಾವು ಮಾಡಿದ ಪಾಪದಲ್ಲಿ ಹೆಂಡತಿ, ಮಕ್ಕಳು ಯಾರು ಭಾಗಿಯಾಗುವುದಿಲ್ಲ. ಅದನ್ನು ನಾವೇ ಅನುಭವಿಸಬೇಕು. ಆಧ್ಯಾತ್ಮ ದಾರಿಯಲ್ಲಿ ಬದುಕಿ ಸಾಗಬೇಕು. ದಾನ, ಧರ್ಮ, ಪುಣ್ಯದ ಕಾರ್ಯಗಳಲ್ಲಿ ಭಾಗಿಗಳಾಗಬೇಕು. ಪಣ್ಯಾತ್ಮರನ್ನು ನಾವು ನಿತ್ಯ ಸ್ಮರಿಸುತ್ತೇವೆ. ಪಾಪ ಕೃತ್ಯಗಳನ್ನು ಮಾಡಿದವರನ್ನು ಕಡೆಗಣಿಸಲಾಗುತ್ತದೆ. ಇದನ್ನು ನೆನಪಿಸಿಕೊಂಡು ನಾವು ಮಾಡುವ ಸತ್ಕಾರ್ಯಗಳಿಂದ ಸಂಸಾರ ನೆಮ್ಮದಿಯಿಂದ ಇರಬಹುದು ಎಂದರು.
ಆಧ್ಯಾತ್ಮ ಚಿಂತನೆಯಲ್ಲಿ ಅದೃಶ್ಯ ಶೀವಯೋಗೀಶ್ವರರ ವಚನ “ಮೊದಲು ಪಾಪಕ್ಕೆ ಭಯಪಡು” ವಿಷಯದ ಕುರಿತು ಎಲ್ಲ ಪೂಜ್ಯರು ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಜಿ.ಸಿ.ಕೋಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೈಲಹೊಂಗಲದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ದಾನಿಗಳು, ವಿವಿಧ ಕ್ಷೇತ್ರಗಳ ಸಾಧಕರಿಗೆ ಹಾಗೂ ಪ್ರತಿಭಾ ಪುರಸ್ಕಾರಗಳು ನಡೆದವು.
ಪಾಶ್ಚಾಪುರದ ಶ್ರೀ ಉಜ್ಜೇಶ್ವರ ಸಂಸ್ಥಾನ ಹಿರೇಮಠದ ಶ್ರೀ ವಿಶ್ವರಾಧ್ಯ ಶಿವಾವಾರ್ಯರು, ದೇವರಕೊಂಡದ ಶ್ರೀ ಸದ್ಗುರು ಬಾಲಯೋಗಿ ಚನ್ನವೃಷಬೇಂದ್ರ ಮಹಾಸ್ವಾಮೀಜಿ, ಬೆಳಗಾವಿ(ಕಾದರವಳ್ಳಿ)ಯ ಶ್ರೀ ಶಿವಜಾತಯ್ಯ ದಳವಾಯಿ ಅಜ್ಜನವರು, ಕಾಕತಿ ಶಿವಪೂಜಿಮಠದ ಶ್ರೀ ರಾಚಯ್ಯ ಸ್ವಾಮೀಜಿ, ಅಳ್ನಾವರದ ಶ್ರೀ ರವಿಶಾಸ್ತ್ರಿ, ಕಾದರವಳ್ಳಿಯ ಶ್ರೀ ದುಂಡಯ್ಯ ಸ್ವಾಮೀಜಿ, ಚರಂತಿಮಠದ ಶ್ರೀ ಜಗದೀಶ್ವರಯ್ಯ ಶ್ರೀಗಳು, ಶ್ರೀ ಸಂಗಯ್ಯ ಶ್ರೀಗಳು ಹಾಗೂ ಇತರರು ಉಪಸ್ಥಿತರಿದ್ದರು.
ಶಂಕರ ಕಳಸಣ್ಣವರ ನಿರೂಪಿಸಿ, ವಂದಿಸಿದರು.