Breaking News

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಲ್ಲ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು: ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಮೂಡಲಗಿಯಲ್ಲಿ ಅರಭಾವಿ ಮಂಡಲದ ನೂತನ ಬಿಜೆಪಿ ಕಾರ್ಯಾಲಯವನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ.

ಯುವ ಭಾರತ ಸುದ್ದಿ, ಮೂಡಲಗಿ: ಡಿ.22 ರಂದು ನಡೆಯುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅರಭಾವಿ ಮತ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಇದರಿಂದ ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿಯೂ ನಮ್ಮ ಗುಂಪು ಅಧಿಕಾರದ ಚುಕ್ಕಾಣ ಹಿಡಿಯಲಿದೆ ಎಂದು ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರದಂದು ಪಟ್ಟಣದ ಕರೆಮ್ಮಾದೇವಿ ವೃತ್ತದಲ್ಲಿ ಅರಭಾಂವಿ ಮಂಡಲ ಭಾರತೀಯ ಜನತಾ ಪಕ್ಷದ ನೂತನ ಕಾರ್ಯಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ನಮ್ಮ ಸರಕಾರ ಇರುವದರಿಂದ ಸ್ಥಳೀಯ ಗ್ರಾಮ ಪಂಚಾಯತಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವಿನ ನಗೆ ಬೀರಲಿದ್ದಾರೆಂದು ಅವರು ಹೇಳಿದರು.

ಅರಭಾವಿ ವಿಧಾನಸಭಾ ಮತ ಕ್ಷೇತ್ರದಲ್ಲಿ ಒಟ್ಟು 33 ಗ್ರಾಮ ಪಂಚಾಯತಿಗಳಿದ್ದು, ಒಟ್ಟು 584 ಸ್ಥಾನಗಳಲ್ಲಿ ಈಗಾಗಲೇ 69 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 515 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದ್ದು, ಇದರಲ್ಲಿ ಎಲ್ಲ ಅಭ್ಯರ್ಥಿಗಳು ಎಲ್ಲ ಜಯಗಳಿಸಲಿದ್ದಾರೆ. ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ನಮ್ಮಲ್ಲಿಯೇ ಎರಡು ಗುಂಪುಗಳಾಗಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಎಲ್ಲ ಪಂಚಾಯತಿಗಳಲ್ಲಿ ನಮ್ಮ ಬಿಜೆಪಿ ಬೆಂಬಲಿತದವರು ಆಡಳಿತದ ಚುಕ್ಕಾಣ ಹಿಡಿಯಲಿದ್ದಾರೆ ಎಂದು ಅವರು ಹೇಳಿದರು.

ಮುಂಬರುವ ಲೋಕಸಭೆ, ತಾ.ಪಂ ಮತ್ತು ಜಿ.ಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ದುಡಿಯಬೇಕು. ಗ್ರಾಮ ಪಂಚಾಯತಿಯ ಚುನಾವಣೆ ಬಳಿಕ ಲೋಕಸಭೆಗೆ ಚುನಾವಣೆ ನಡೆಯಲಿದ್ದು, ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಪಕ್ಷವು ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಜನರಿಗೆ ಮುಟ್ಟಿಸಬೇಕು. ಜನರ ಮನೆ ಬಾಗಿಲಿಗೆ ತೆರಳಿ ಸರಕಾರದ ಯೋಜನೆಗಳನ್ನು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದು, ಎಲ್ಲ ರಂಗಗಳಲ್ಲೂ ಅತ್ಯತ್ತಮವಾಗಿ ಕೆಲಸ ಮಾಡುತ್ತಿದೆ. ಬಡವರು, ರೈತರು, ಶೋಷಿತರು, ಮಹಿಳೆಯರು, ಕಾರ್ಮಿಕರು, ವಿಧ್ಯಾರ್ಥಿಗಳ ಕಲ್ಯಾಣಕ್ಕಾಗಿ ಸಾಕಷ್ಟು ಪ್ರಗತಿಪರ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಭಾರತ ವಿಶ್ವದಲ್ಲಿಯೇ ಶಕ್ತಿಶಾಲಿ ರಾಷ್ಟ್ರವಾಗಲು ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿರುವ ಹಲವಾರು ಮಹತ್ತರ ಕಾರ್ಯಕ್ರಮಗಳಾದರೆ, ಇನ್ನೊಂದಡೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರಕಾರ ಜನಪರ ಹಾಗೂ ರೈತ ಪರ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಜನಮನ್ನನೆಗೆ ಪಾತ್ರವಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ ಭವನ ಶಿಲಾನ್ಯಾಸ ಮಾಡುವ ಕಾರ್ಯಕ್ರಮದಲ್ಲಿ ದೇಶದ ಪ್ರಜಾಸತ್ತಾತ್ಮಕ ಇತಿಹಾಸವನ್ನು ಸ್ಮರಿಸಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಜನಸಭೆಯ ಪರಿಕಲ್ಪನೆಯನ್ನು ಜಾರಿ ಮಾಡಿದ್ದರು ಎಂದು ಉಲ್ಲೇಖ ಮಾಡಿದ್ದಾರೆ. ಅದರಲ್ಲೂ ನಮ್ಮ ನಾಡಿನ ಬಸವಣ್ಣನವರ ಅನುಭವ ಮಂಟಪವನ್ನು ಕನ್ನಡ ಭಾಷೆಯಲ್ಲಿಯೇ ಪ್ರಸ್ತಾಪಿಸಿ ಇಡೀ ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ ಎಂದು ಪ್ರಧಾನಿಗಳ ಕನ್ನಡತನವನ್ನು ಶ್ಲಾಘಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಡವರ ಬಗ್ಗೆ ಅಪಾರ ಕಾಳಜಿವಿದೆ. ಕಳೆದ ವರ್ಷದಲ್ಲಿ ಸಂಭವಿಸಿದ ನೆರೆ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಮುಖ್ಯಮಂತ್ರಿಗಳ ಪಾತ್ರ ಅಪಾರವಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಫಲಾನುಭವಿಗಳ ಹೆಸರುಗಳು ಹೈಡ್ ಡಿಲಿಟ್ ಆಗಿದ್ದರಿಂದ ಸಮಸ್ಯೆಗಳು ಉದ್ಭವಿಸಿದ್ದವು. ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೆಟ್ಟಿ ಮಾಡಿ ಮನವಿ ಮಾಡಿಕೊಂಡಾಗ ತಕ್ಷಣವೇ ಸ್ಪಂದಿಸಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಬೆಳಗಾವಿ, ವಿಜಯಪೂರ ಹಾಗೂ ಬಾಗಲಕೋಟ ಜಿಲ್ಲೆಗಳ ಸಂತ್ರಸ್ತರಿಗೆ ಮನೆಗಳ ನಿರ್ಮಾಣವಾಗಲು ನಮ್ಮಿಂದಲೇ ಅನುಕೂಲವಾಯಿತು, ಸಂತ್ರಸ್ತರಿಗೆ ವಸತಿ ಸೌಲಭ್ಯ ಸಿಗುವಂತಾಯಿತು. ಇದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು. ಕ್ಷೇತ್ರದಲ್ಲಿ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ಮಾರ್ಚ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಅಧ್ಯಕ್ಷತೆಯನ್ನು ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಈರಣ್ಣಾ ಅಂಗಡಿ, ಪ್ರಕಾಶ ಮಾದರ, ವಿವಿಧ ಮೋರ್ಚಾಗಳ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪರಸಪ್ಪ ಬಬಲಿ ಕಾರ್ಯಕ್ರಮ ನಿರೂಪಿಸಿದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

3 × three =