ಸುಳೇಭಾವಿಯಲ್ಲಿ ಪುನೀತ್, ಕಾಂತಾರ ಹಾಡಿಗೆ ಮಕ್ಕಳ ಸಖತ್ ಸ್ಟೆಪ್ !
ಯುವ ಭಾರತ ಸುದ್ದಿ ಬೆಳಗಾವಿ : ವಿದ್ಯೆ ಎಂಬುದು ಯಾರೂ ಕಸಿದುಕೊಳ್ಳಲಾಗದ, ಬಳಸಿದಷ್ಟು ಸಮೃದ್ಧವಾಗಿ ಬೆಳೆಯುವ, ಎಲ್ಲ ಸಂಪತ್ತಿಗಿಂತ ಮಿಗಿಲಾದದ್ದು. ಹೀಗಾಗಿ ತಾಯಂದಿರರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದು ಗ್ರಾಪಂ ಅಧ್ಯಕ್ಷ ಮಹೇಶ ಸುಗಣೆನ್ನವರ ಹೇಳಿದರು. ತಾಲೂಕಿನ ಸುಳೇಭಾವಿ ಗ್ರಾಮದ ಶಾಂಭವಿ ಮಹಿಳಾ ಶಿಕ್ಷಣ ಸಂಸ್ಥೆಯ ಶ್ರೀ ವಾಣಿ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಜ್ಞಾನ ಭಂಡಾರದ ಶ್ರೀಮಂತಿಕೆ ಹೆಚ್ಚಿಸಬೇಕು. ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಹೇಳಿದರು. ಪರುಶರಾಮ ಹೊಳೆನ್ನವರ ಮಾತನಾಡಿ, ಮಕ್ಕಳ ಮನಸ್ಸು ಬಿಳಿ ಹಾಳೆ ಇದ್ದ ಹಾಗೆ. ಅದರಲ್ಲಿ ನಾವು ಏನು ಬರೆಯುತ್ತೆವೆಯೋ ಅದೇ ಮೂಡುತ್ತದೆ. ಬರೆಯುವ ಮೋದಲು ಯೋಚಿಸಬೇಕು. ಮಕ್ಕಳನ್ನು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗುವಂತೆ ಪ್ರೋತ್ಸಾಹಿಸಬೇಕು ಎಂದರು.
ಡಾ. ಆರ್.ಬಿ. ಕೋತಿನ ಮಾತನಾಡಿ, ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಜವಾಬ್ದಾರಿ ತಂದೆ-ತಾಯಿ ಮೇಲಿದೆ. ಮಕ್ಕಳ ಆಟ-ಪಾಠದ ಬಗ್ಗೆ ಗಮನಹರಿಸಿ ಜೀವನದಲ್ಲಿ ಸಾಧನೆ ಮಾಡುವಂತೆ ಬೆಳೆಸಬೇಕು ಎಂದು ಹೇಳಿದರು. ಉದ್ಘಾಟನೆ ಬಳಿಕ ಪುಟ್ಟ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ವಿವಿಧ ರಾಜ್ಯಗಳ ಸಂಪ್ರದಾಯದ ವೇಷ-ಭೂಷಣ ಗಮನಸೆಳೆದವು. ಡಾ. ಪುನೀತ ರಾಜಕುಮಾರ ಅವರ ಚಿತ್ರದ ಹಾಡು ಹಾಗೂ ಕಾಂತಾರ ಚಿತ್ರದ ಹಾಡುಗಳಿಗೆ ಮಕ್ಕಳು ಹೆಜ್ಜೆ ಹಾಕಿ ಗಮನಸೆಳೆದರು. ಕೆಲ ಮಕ್ಕಳು ರಾಷ್ಟ್ರ ಭಕ್ತಿ ಗೀತೆಗಳಿಗೆ ನೃತ್ಯ ಮಾಡಿದರು. ಗ್ರಾಪಂ ಸದಸ್ಯೆ ವೀಣಾ ಮಂಡು, ನಾಗರಾಜ ರಾಮಚನ್ನವರ, ಶಾಂಭವಿ ಶಿಕ್ಷಣ ಸಂಸ್ಥೆ ಸದಸ್ಯೆ ದಾಕ್ಷಾಯಿಣಿ ಇಂಗಳೆ ಶಾಕಂಭರಿ ದೇವಸ್ಥಾನ ಕಮಿಟಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಲ್ಲೂರ, ಪ್ರಕಾಶ ಇಂಗಳೆ, ಅಶ್ವಿನಿ ಇಂಗಳೆ, ಜ್ಯೋತಿ ಭಂಗಿ, ವಿನೋದ ಇಂಗಳೆ ಸೇರಿದಂತೆ ಇತರರು ಇದ್ದರು. ಅಶ್ವಿನಿ ಇಂಗಳೆ ವರದಿ ವಾಚಿಸಿದರು. ಪೂಜಾ ಕಲ್ಲೂರ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಕಿತಾ ಕೋಪರ್ಡೆ ನಿರೂಪಿಸಿದರು.