ಬೆಳಗಾವಿ ಗ್ರಾಮೀಣದಲ್ಲಿ ಮರಾಠಾ ಸಮುದಾಯಕ್ಕೆ ಆದ್ಯತೆ ನೀಡಲು ಅಭ್ಯರ್ಥಿಯೊಂದಿಗೆ ದಿಲ್ಲಿಯಲ್ಲಿ ರಮೇಶ ಜಾರಕಿಹೊಳಿ !
ಬೆಳಗಾವಿ : ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಮರಾಠಾ ಸಮಾಜಕ್ಕೆ ವಿಧಾನ ಸಭಾ ಚುನಾವಣೆಯಲ್ಲಿ ಮಣೆ ಹಾಕುವ ನಿಟ್ಟಿನಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಇದೀಗ ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ ಅವರು ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನ್ನೋಳ್ಕರ್ ಅವರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಭೇಟಿ ಮಾಡಿಸಿದ್ದರು. ಇದರ ಮುಂದುವರಿದ ಭಾಗವಾಗಿ ಅವರು ದೆಹಲಿಗೆ ತೆರಳಿ ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ ಸಿಂಗ್ ಅವರನ್ನು ಸಹಾ ಭೇಟಿ ಮೂಡಿಸುವಲ್ಲಿ ಸಫಲರಾಗಿದ್ದಾರೆ. ಬೆಳಗಾವಿ ಗ್ರಾಮೀಣ ಮತ ಕ್ಷೇತ್ರ ಮರಾಠಾ ಸಮುದಾಯದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರವಾಗಿದೆ. ಹೀಗಾಗಿ ಈ ಬಾರಿ ಇಲ್ಲಿ ಮರಾಠಾ ಸಮುದಾಯಕ್ಕೆ ಆದ್ಯತೆ ನೀಡುವಂತೆ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಹೈಕಮಾಂಡ್ ನ್ನು ಒತ್ತಾಯಿಸಿರುವುದಾಗಿ ಮೂಲಗಳು ತಿಳಿಸಿವೆ.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ಭಜರಂಗದಳ ಹಿನ್ನೆಲೆಯಿಂದ ಬಂದಿರುವ ಯುವ ನಾಯಕ ಧನಂಜಯ ಜಾಧವ, ದೀಪಾ ಕುಡಚಿ ಸೇರಿದಂತೆ ಇತರರು ಸ್ಪರ್ಧಿಸಲು ಕ್ಷೇತ್ರಾದ್ಯಂತ ಸಂಚಾರ ಕೈಗೊಂಡಿದ್ದಾರೆ. ಈ ನಡುವೆ ಇದೀಗ ರಮೇಶ್ ಜಾರಕಿಹೊಳಿ ಅವರು ದೆಹಲಿ ಮಟ್ಟದಲ್ಲಿ ಮರಾಠಾ ಸಮುದಾಯಕ್ಕೆ ಅದ್ಯತೆ ನೀಡುವಂತೆ ಒತ್ತಾಯಿಸಿರುವುದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಬಿಸಿ ಮುಟ್ಟಿಸಲು ಕಾರಣವಾಗಿದೆ.