ಸನಾತನ ಸಂಸ್ಕೃತಿ ಸಮಾವೇಶ ಗುರುವಾರ
ಯುವ ಭಾರತ ಸುದ್ದಿ ಇಟಗಿ:
ಖಾನಾಪುರ ತಾಲೂಕಿನ ಅವರೊಳ್ಳಿ-ಬಿಳಕಿ ಗ್ರಾಮದಲ್ಲಿನ ಶ್ರೀ ರುದ್ರಸ್ವಾಮಿ ಮಠದಲ್ಲಿ ಹಿಂದಿನ ಮಠಾಧೀಶ ಶ್ರೀ ಶಾಂಡಿಲ್ಯ ಮಹಾಸ್ವಾಮೀಜಿಯವರ 6ನೇ ಪುಣ್ಯಾರಾಧನೆ ಪ್ರಯುಕ್ತ ಮಾ. 2ರಂದು ಸನಾತನ ಸಂಸ್ಕೃತಿ ಸಮಾವೇಶ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾ. 2ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸನಾತನ ಸಂಸ್ಕೃತಿ ಸಮಾವೇಶವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೀಂದ್ರ ಉದ್ಘಾಟಿಸುವರು. ಮುಕ್ತಿಮಠದ ಶ್ರೀ ಶಿವಶಿದ್ಧ ಸೋಮೇಶ್ವರ ಶಿವಚಾರ್ಯ ಸ್ವಾಮೀಜಿ, ತೆಲಂಗಾಣದ ಪಶ್ಚಿಮಾದ್ರಿ ವಿರಕ್ತಮಠದ ಶ್ರೀ ಪಂಚಮ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಇದೇ ಸಂದರ್ಭದಲ್ಲಿ ಮಠದ ಆವರಣದಲ್ಲಿ ನಿರ್ಮಿಸಲು ಉದ್ದೇಶಿರುವ ಗೋಶಾಲೆ ಕಟ್ಟಡಕ್ಕೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಶಿಲಾನ್ಯಾಸ ನೆರವೇರಿಸುವರು. ಬೆಂಗಳೂರಿನ ಬಿಎಂಆರ್‌ಡಿಎ ಆಯುಕ್ತ ಗಿರೀಶ ಹೊಸೂರ, ಶಾಸಕ ಮಹಾಂತೇಶ ದೊಡಗೌಡರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕರಾದ ಮಹಾಂತೇಶ ಕವಟಗಿಮಠ, ದಿಗಂಬರರಾವ್ ಪಾಟೀಲ, ಅರವಿಂದ ಪಾಟೀಲ, ಮಹಾಲಕ್ಷ್ಮೀ ಗ್ರುಪ್ ಅಧ್ಯಕ್ಷ ವಿಠ್ಠಲ ಹಲಗೇಕರ, ಕೆಆರ್‌ಐಡಿಎಲ್ ಅಧ್ಯಕ್ಷ ಎಂ. ರುದ್ರೇಶ, ವಿಜಯಾ ಅರ್ಥೋ ಮತ್ತು ಟ್ರಾಮಾ ಸೆಂಟರ್‌ನ ಡಾ. ರವಿ ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು.
ಇದಕ್ಕೂ ಮೊದಲು ಬೆಳಗ್ಗೆ 9.30ಕ್ಕೆ ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶಾಸಕಿ ಅಂಜಲಿ ನಿಂಬಾಳ್ಕರ ಉದ್ಘಾಟಿಸುವರು. ಹಿರೇಮುನವಳ್ಳಿ ಶಾಂಡಿಲೇಶ್ವರ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಬೆನಕನಹಳ್ಳಿಯ ಶ್ರೀ ಪ್ರಭಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಿಬಿರದಲ್ಲಿ ವಿವಿಧ ತಜ್ಞರು ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡುವರು. ಬಳಿಕ 10.30ಕ್ಕೆ ಸಸಿ ವಿತರಣಾ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಪ್ರತಿಭಾ ಪುರಸ್ಕಾರ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಲಿವೆ. ಈಗಾಗಲೇ ಸನಾತನ ಸಂಸ್ಕೃತಿ ಸಮಾವೇಶದ ಪ್ರಯುಕ್ತ ಖಾನಾಪುರ ತಾಲೂಕಿನ ಭಾಗದಲ್ಲಿ ಸಾವಿರ ಕೇಸರಿ ಧ್ವಜ ಅಭಿಯಾನವನ್ನು ಸಹ ನಡೆಸಲಾಗಿದೆ ಎಂದು ಶ್ರೀ ಮಠದ ಮಠಾಧೀಶ ಶ್ರೀ ಚನ್ನಬಸವ ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.