Breaking News

ಮಕರ ಸಂಕ್ರಾಂತಿಗೆ ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರತಿಷ್ಠಾಪನೆ

Spread the love

ಮಕರ ಸಂಕ್ರಾಂತಿಗೆ ಅಯೋಧ್ಯೆಯಲ್ಲಿ ಶ್ರೀ ರಾಮ
ಪ್ರತಿಷ್ಠಾಪನೆ

ಯುವ ಭಾರತ ಸುದ್ದಿ ಹುಬ್ಬಳ್ಳಿ:
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಮುಂದಿನ ವರ್ಷದ ಮಕರ ಸಂಕ್ರಾಂತಿಗೆ ರಾಮನ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ನೆರವೇರಲಿದೆ. ಮಂದಿರದ ಒಂದು ಹಂತದ ನಿರ್ಮಾಣ ಕಾರ್ಯ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಸೇವೆ ಮಾಡುವ ಸಂಕಲ್ಪ ಮಾಡೋಣ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಇಲ್ಲಿನ ದೇಶಪಾಂಡೆ ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ‘ರಾಮ ರಾಜ್ಯದ ಕನಸು ನನಸು ಮಾಡುವುದೇ ನಮ್ಮ ಮುಂದಿನ ಯೋಜನೆ. ಗೋಶಾಲೆಯಲ್ಲಿ ಹಸು ಸಾಕುವುದು, ಮಕ್ಕಳ ಶಿಕ್ಷಣ ವೆಚ್ಚ ಭರಿಸುವುದು, ಮನೆ ನಿರ್ಮಾಣ, ವೈದ್ಯಕೀಯ ಸೇವೆ ಸೇರಿದಂತೆ ಎಲ್ಲ ವಿಭಾಗದವರಿಂದಲೂ ಉಚಿತ ಸೇವೆ ಮಾಡಿಸಿ ರಾಮರಾಜ್ಯ ಹೀಗಿತ್ತು ಎಂಬುದನ್ನು ತೋರಿಸುವುದಾಗಿದೆ’ ಎಂದರು.

‘ಈ ಸಂಕಲ್ಪಕ್ಕಾಗಿ, ವರ್ಷವಿಡೀ ಸೇವಾ ಸಂಕಲ್ಪ ಅಭಿಯಾನ ಶುರು ಮಾಡಲಾಗುವುದು. ಅದರ ನೇತೃತ್ವ ವಹಿಸಿಕೊಳ್ಳುವಂತೆ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು. ಅಭಿಯಾನಕ್ಕೆ ಅವರೇ ಒಳ್ಳೆಯ ಮುಹೂರ್ತ ನಿಗದಿ ಮಾಡಬೇಕು. ಕೃಷ್ಣನ ನಾಡು ಉಡುಪಿಯಿಂದಲೇ ಅಭಿಯಾನ ಆರಂಭವಾಗಬೇಕೆಂಬ ಇಚ್ಛೆ ನಮ್ಮದು. ಹಿಂದೆ, ಶ್ರೀರಾಮ ಮಂದಿರ ನಿರ್ಮಾಣದ ನಿಲುವುಗಳು ಸಿದ್ಧವಾಗಿದ್ದು ಮತ್ತು ಸಂಕಲ್ಪ ಶುರುವಾಗಿದ್ದು ಸಹ ಉಡುಪಿಯಿಂದಲೇ’ ಎಂದು ಸ್ಮರಿಸಿದರು.

‘ನಾವು ನೀಡುವ ಉಚಿತ ಸೇವೆಗಳ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಎಷ್ಟು ಜನರಿಗೆ ತಲುಪಿದೆ ಎಂಬುದನ್ನು ತಿಳಿದುಕೊಳ್ಳಲು ಆ್ಯಪ್ ಸಿದ್ಧಪಡಿಸಬೇಕಿದೆ. ಮಾಡಿದ ಒಳ್ಳೆಯ ಕಾರ್ಯಗಳೆಲ್ಲವನ್ನೂ ಅದರಲ್ಲಿ ಹಾಕೋಣ. ಆಗ ನಮಗೆ ಲೆಕ್ಕ ಸಿಗಲಿದೆ. ಇದನ್ನು ರಾಮನ ಹೆಸರಿನಲ್ಲಿಯೇ ಮಾಡಬೇಕೆಂಬುದು ನಮ್ಮಿಚ್ಛೆ. ದೇಶದ ಅಭಿವೃದ್ಧಿ ಮತ್ತು ಜನರಿಗೆ ಒಳಿತಾಗುವುದಾದರೆ, ರಾಮನ ಅಥವಾ ರಾವಣನ ಹೆಸರಿನಲ್ಲಿ ಬೇಕಾದರೆ ಮಾಡಲಿ. ಒಟ್ಟಾರೆಯಾಗಿ ದೇಶಕ್ಕೆ ಪಕ್ಷಾತೀತವಾಗಿ ಒಳ್ಳೆಯದಾಗಬೇಕು’ ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದರು.

‘ಮಾರ್ಚ್ ತಿಂಗಳಿಂದ ನನಗೆ 60ನೇ ವಯಸ್ಸು ಆರಂಭವಾಗಲಿದೆ. ಅದರ ಅಂಗವಾಗಿ ಕನಿಷ್ಠ 6 ಮನೆಯನ್ನಾದರೂ ನಿರ್ಮಿಸಿ ಕೊಡುವ ಯೋಜನೆ ಹಾಕಿಕೊಂಡಿದ್ದೇನೆ’ ಎಂದರು.


Spread the love

About Yuva Bharatha

Check Also

ಸಂಚಲನಕ್ಕೆ ಕಾರಣವಾಯ್ತು ಚಾಣಕ್ಯನ ಭೇಟಿ : ಇಂದು ಹುಬ್ಬಳ್ಳಿ, ನಾಳೆ ಹುಬ್ಬಳ್ಳಿ-ಧಾರವಾಡ, ಕುಂದಗೋಳ, ಎಂ.ಕೆ.ಹುಬ್ಬಳ್ಳಿ ಕಾರ್ಯಕ್ರಮದಲ್ಲೂ ಭಾಗಿ !

Spread the loveಸಂಚಲನಕ್ಕೆ ಕಾರಣವಾಯ್ತು ಚಾಣಕ್ಯನ ಭೇಟಿ : ಇಂದು ಹುಬ್ಬಳ್ಳಿ, ನಾಳೆ ಹುಬ್ಬಳ್ಳಿ-ಧಾರವಾಡ, ಕುಂದಗೋಳ, ಎಂ.ಕೆ.ಹುಬ್ಬಳ್ಳಿ ಕಾರ್ಯಕ್ರಮದಲ್ಲೂ ಭಾಗಿ …

Leave a Reply

Your email address will not be published. Required fields are marked *

sixteen + two =