ಸುಳೇಭಾವಿ ಶ್ರೀ ಮಹಾರಾಣಿ ದೇವಿ ಜಾತ್ರಾ ಮಹೋತ್ಸವ ಇಂದು
ಬೆಳಗಾವಿ: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾರಾಣಿ ದೇವಿಯ ಜಾತ್ರಾ ಮಹೋತ್ಸವ ಮೇ 30ರಂದು ಮಂಗಳವಾರ ಸಡಗರ-ಸಂಣ್ರಮದಿಂದ ನೆರವೇರಲಿದೆ.
ಬೆಳಗ್ಗೆ 6 ಗಂಟೆಗೆ ಶ್ರೀ ಮಹಾರಾಣಿ ದೇವಿಗೆ ಅಭಿಷೇಕ, ವಿಶೇಷ ಅಲಂಕಾರ, ಆರತಿ ಬೆಳಗಿ, ಪೂಜೆ ಸಲ್ಲಿಸಲಾಗುವುದು.
ನಂತರ ಗ್ರಾಮಸ್ಥರು ಸುಳೇಭಾವಿ ಗ್ರಾಮದ ಲಕ್ಷ್ಮೀ ಗಲ್ಲಿಯ ಶ್ರೀ ಯಲ್ಲಮ್ಮನ ದೇವಿಗೆ ಉಡಿ ತುಂಬಿ ನಂತರ ವಾದ್ಯ ಮೇಳದೊಂದಿಗೆ ಶ್ರೀ ಕಲ್ಮೇಶ್ವರ, ಶ್ರೀ ವೀರಭದ್ರೇಶ್ವರ, ಶ್ರೀ ಶಾಕಾಂಬರಿ, ಶ್ರೀ ಮಹಾಲಕ್ಷ್ಮೀ ದೇವಿ, ಶ್ರೀ ದುರ್ಗಾ ದೇವಿ, ಶ್ರೀ ಗಣಪತಿ, ವಿಠ್ಠಲ-ರುಕ್ಮಿಣಿ, ಶ್ರೀ ನುಮಾನ, ಶ್ರೀ ಬನಶಂಕರಿ, ಶ್ರೀ ಸಿದ್ದೇಶ್ವರ ದೇವರಿಗೆ ಪೂಜೆ ಸಲ್ಲಿಸಿ ನಂತರ ಶ್ರೀ ಮಹಾರಾಣಿ ದೇವಸ್ಥಾನಕ್ಕೆ ಬರುತ್ತಾರೆ. ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ದೇವಸ್ಥಾನ ಆವರಣದಲ್ಲಿ ಶ್ರೀ ಮಹಾರಾಣಿ ದೇವಿಯ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ದೇವಿಗೆ ಉಡಿ ತುಂಬಿದ ಬಳಿಕ ಮುತ್ತೈದೆಯರಿಗೆ ಉಡಿ ತುಂಬುವ ವಿಶೇಷ ಕಾರ್ಯಕ್ರಮ ನೆರವೇರಲಿದೆ. ಬಳಿಕ ಮಹಾಪ್ರಸಾದ ಇದೆ ಎಂದು ಶ್ರೀ ಮಹಾರಾಣಿ ದೇವಸ್ಥಾನ ಟ್ರಸ್ಟ್ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.