Breaking News

ವಸ್ತು ಸಂಗ್ರಹಾಲಯಗಳು ಗತವೈಭವದ ದಿಕ್ಸೂಚಿ : ಡಾ. ಎಸ್. ಕೆ. ಮೇಲಕಾರ

Spread the love

ವಸ್ತು ಸಂಗ್ರಹಾಲಯಗಳು ಗತವೈಭವದ ದಿಕ್ಸೂಚಿ : ಡಾ. ಎಸ್. ಕೆ. ಮೇಲಕಾರ

ಬೆಳಗಾವಿ :
ವಸ್ತುಸಂಗ್ರಹಾಲಯಗಳು ಗತಕಾಲದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತವೆ. ನಮ್ಮ ಪೂರ್ವಜರ ಭವ್ಯ ಸಂಸ್ಕೃತಿಯ ವೈಭವಕ್ಕೆ ಸಂಬಂಧಿಸಿದ ವಸ್ತುಗಳನ್ನು ರಕ್ಷಿಸಿ, ಸಂಗ್ರಹಿಸಿ ಮುಂದಿನ ಜನಾಂಗಕ್ಕೆ ವರ್ಗಾಯಿಸುವುದು ನಮ್ಮ ಆದ್ಯತೆಯಾಗಬೇಕು. ಪ್ರತಿ ತಾಲ್ಲೂಕು, ಹಳ್ಳಿಗಳಲ್ಲಿ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಸ್. ಕೆ. ಮೇಲಕಾರ ಕರೆ ನೀಡಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕಾಲೇಜು ಇತಿಹಾಸ ಅಧ್ಯಾಪಕರ ಸಂಘದ ವತಿಯಿಂದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ವಸ್ತು ಸಂಗ್ರಹಾಲಯಗಳು ಐತಿಹಾಸಿಕ ದಾಖಲೆಗಳಾಗಿವೆ. ಗತಕಾಲದ ಪ್ರತಿಯೊಂದು ವಸ್ತುವಿನ ಹಿಂದೆ ಅಗಾಧವಾದ ಚರಿತ್ರೆಯಿದೆ. ಇತಿಹಾಸದ ಪುನರಚನೆಗೆ ವಸ್ತು ಸಂಗ್ರಹಾಲಯಗಳು ಪೂರಕವಾಗಿವೆ. ನಮ್ಮಲ್ಲಿನ ಇತಿಹಾಸ ಪ್ರಜ್ಞೆಯ ಕೊರತೆಯಿಂದ ಇತಿಹಾಸಕ್ಕೆ ಸಂಬಂಧಿಸಿದ ಅದೆಷ್ಟೋ ವಸ್ತುಗಳು, ದಾಖಲೆಗಳನ್ನು ಕಳೆದುಕೊಂಡೆವು. ಇತಿಹಾಸದ ಸಂಶೋಧನೆಯ ಅಭಿರುಚಿ ಮತ್ತು ಅದರ ಬಗೆಗೆ ಪ್ರಜ್ಞೆ ಇರುವ ನಾವು ಅದರ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಡುವ ಪ್ರಯತ್ನ ಮಾಡಬೇಕು. ಇತಿಹಾಸದ ಅರಿವನ್ನು ಸಮಾಜದಲ್ಲಿ ಮೂಡಿಸುವುದರ ಮೂಲಕ ಅದನ್ನು ಸಂರಕ್ಷಿಸುವ ಪ್ರಜ್ಞೆ ಬೆಳೆಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಇತಿಹಾಸ ಪ್ರಾಧ್ಯಾಪಕ ಡಾ. ಎಸ್. ಎ. ಕರ್ಕಿ ಮಾತನಾಡಿ, ಇತಿಹಾಸದ ವಸ್ತುಗಳು ನಾಡಿನ ಚರಿತ್ರೆಯ ದಿಕ್ಸೂಚಿಯಾಗಿವೆ. ನಾಡಿನ ದಿವ್ಯ ಸಂಸ್ಕೃತಿಯ ಆಳ- ಅಗಲಗಳ ಶೋಧನೆಗೆ ದಾರಿ ಮಾಡಿಕೊಡುತ್ತವೆ. ಇತಿಹಾಸದ ಆಕರಗಳನ್ನು ಒಳಗೊಂಡ ವಸ್ತು ಸಂಗ್ರಹಾಲಯಗಳು ಸಂಶೋಧಕರಿಗೆ, ಆಸಕ್ತರಿಗೆ ಜ್ಞಾನದ ಭಂಡಾರ. ಅದನ್ನು ರಕ್ಷಿಸದೇ ಇದ್ದರೆ ತೆರೆಮರೆಗೆ ಸರಿಯುವ ಸಾಧ್ಯತೆ ಇದೆಯೆಂದು ಕಳವಳ ವ್ಯಕ್ತಪಡಿಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್ ಎಸ್ ತೇರದಾಳ ಅವರು ವಸ್ತು ಸಂಗ್ರಹಾಲಯದ ಚಾರಿತ್ರಿಕ ಪದರುಗಳನ್ನು ವಿವರಿಸಿದರು. ಎಲ್ಲಾ ಜ್ಞಾನ ಶಿಸ್ತುಗಳಿಗೆ ಇತಿಹಾಸ ಭೂಮಿಕೆಯನ್ನು ಒದಗಿಸುತ್ತದೆ. ನಮ್ಮ ಅವಜ್ಞೆಯಿಂದ ನಾವು ಕಳೆದುಕೊಂಡ ಐತಿಹಾಸಿಕ ಸಂಪತ್ತನ್ನು ಮರಳಿ ಪಡೆಯಲಾರೆವು. ಆದರೆ, ನಮ್ಮ ಹಿರಿಯರಿಂದ ರಕ್ಷಿಸಿದ ಇತಿಹಾಸದ ಪ್ರತಿ ವಸ್ತುಗಳನ್ನು ಸಂರಕ್ಷಿಸುವ ಬಹು ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಡಾ. ರಮೇಶ ಕಾಂಬ್ಳೆ, ಪ್ರೊ. ಕೆ. ಎಸ್. ಮೂಡಗಿ, ಪ್ರೊ. ಪ್ರಭಯ್ಯನವರಮಠ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಸಾಧನೆ ಮಾಡಿದ ಇತಿಹಾಸ ಉಪನ್ಯಾಸಕರಾದ ಪ್ರಕಾಶ ಕುರ್ಪಿ, ಶಂಕರ ನಿಂಗನೂರು, ಡಾ. ರಮೇಶ ಕುಂಬಾರ, ಡಾ. ಕೃಷ್ಣ ಮೂರ್ತಿ ಇವರನ್ನು ಸನ್ಮಾನಿಸಲಾಯಿತು.
ಡಾ. ರಾಧಾ ಬಿ. ಆರ್. ನಿರೂಪಿಸಿದರು. ಮಹೇಶ ಅಂಗಡಿ ವಂದಿಸಿದರು. ಶಿಲ್ಪಾ ಮುದುಕಪ್ಪಗೋಳ ಪ್ರಾರ್ಥಿಸಿದರು. ಡಾ. ಬಿ. ಎಸ್. ಮಠ ಸ್ವಾಗತಿಸಿದರು. ಪ್ರೊ. ಶಂಕರ ಹೂಗಾರ ಪರಿಚಯಿಸಿದರು. ಡಾ. ಮಂಜುನಾಥ ಎನ್. ಬೆನ್ನೂರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಚಾರ ಸಂಕಿರಣದಲ್ಲಿ ವಿವಿಧ ಮಹಾವಿದ್ಯಾಲಯದ ಬೋಧಕ ಸಿಬ್ಬಂದಿ ಮತ್ತು ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

four × one =