ಬೆಳಗಾವಿ :
ಮೂಲಭೂತಗಳ ಸೌಲಭ್ಯಗಳ ಕೊರತೆ ಅನುಭವಿಸುತ್ತಿರುವ ಮಹಾರಾಷ್ಟ್ರಕ್ಕೆ ಸೇರಿರುವ ಅಚ್ಚಗನ್ನಡ ಪ್ರದೇಶಗಳು ಇದೀಗ ಕರುನಾಡು ಸೇರುವ ಠರಾವ್ ಅಂಗೀಕರಿಸಿವೆ. ಕನ್ನಡಿಗರು ಹೆಚ್ಚಾಗಿ ವಾಸಿಸುವ ಮಹಾರಾಷ್ಟ್ರದ ಗಡಿಭಾಗದ ಕನ್ನಡ ಪ್ರದೇಶಗಳಿಗೆ ಆ ರಾಜ್ಯ ಸರ್ಕಾರ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿ ಹಲವು ಗ್ರಾಮ ಪಂಚಾಯಿತಿಗಳು ಇದೀಗ ಮಹಾರಾಷ್ಟ್ರದ ವಿರುದ್ಧ ಸಮರ ಸಾರಿವೆ. ಸುಮಾರು 11 ಗ್ರಾಮ ಪಂಚಾಯಿತಿಗಳು ಈಗ ಠರಾವ್ ಅಂಗೀಕರಿಸಿದ್ದು ನಾವು ನಾವು ಕರ್ನಾಟಕ ಸೇರುವುದಾಗಿ ಪ್ರಸ್ತಾಪಿಸಿವೆ.
ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ 11 ಗ್ರಾಮ ಪಂಚಾಯಿತಿಗಳು ಕರ್ನಾಟಕ ಸೇರುವ ಠರಾವ್ ಪಾಸ್ ಮಾಡಿದೆ. ಈ ಬಗ್ಗೆ ಸೊಲ್ಲಾಪುರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿವೆ. ಅಕ್ಕಲಕೋಟೆ ತಾಲೂಕಿನ ಉಡಗಿ ಗ್ರಾಮದ ಕನ್ನಡಿಗರು ಈಗಾಗಲೇ ಠರಾವ್ ಅಂಗೀಕರಿಸಿದ್ದಾರೆ. ಕರ್ನಾಟಕ ಪರ ಘೋಷಣೆ ಕೂಗಿರುವ ಗ್ರಾಮಸ್ಥರಿಗೆ ಅಲ್ಲಿನ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಮೂಲಕ ಕನ್ನಡಿಗರನ್ನು ಹತ್ತಿಕ್ಕಲು ಮುಂದಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಐವತ್ತಕ್ಕೂ ಹೆಚ್ಚು ಗ್ರಾಮಗಳು ಇಂಥ ಠರಾವ್ ಅಂಗೀಕರಿಸುವ ಬಗ್ಗೆ ಮಾಹಿತಿ ಲಭಿಸಿದೆ.