Breaking News

ನೆನೆ ನೆನೆ ಈ ದಿನವ…ಪ್ರತ್ಯಕ್ಷ ದೇವತೆ ಎಂದರೆ ಸ್ತ್ರೀ..!

Spread the love

ನೆನೆ ನೆನೆ ಈ ದಿನವ…ಪ್ರತ್ಯಕ್ಷ ದೇವತೆ ಎಂದರೆ ಸ್ತ್ರೀ..!

ಮಹಿಳೆ ಭಗವಂತನ ಅತ್ಯಂತ ಸುಂದರ ಮತ್ತು ಶ್ರೇಷ್ಠ ಸೃಷ್ಟಿ. ಸೂಕ್ಷ್ಮತೆ ಅಂತೆಯೇ ಕ್ಲಿಷ್ಟತೆಗಳನ್ನು ಮೇಳೈಸಿಕೊಂಡಿರುವ ನವರಸಗಳ ಪಾಕದಲ್ಲಿ ಅದ್ದಿದ ವಿಸ್ಮಯ. ಪರಶಿವನೇ ಮನಸೋತು ತನ್ನ ಶರೀರದ ಅರ್ಧ ಭಾಗವನ್ನು ಸ್ತ್ರೀ ರೂಪಕ್ಕೆ ಮೀಸಲಿಟ್ಟ ರಮ್ಯತೆ. ಭಾವನೆಗಳ ಬಿಂಬ, ಆಕಾಶಕ್ಕೆ ಏಣಿ ಹಾಕುವ ಛಲ, ಸಾಧನೆಯ ಶಿಖರಕ್ಕೇರಿ ಗರಿಬಿಚ್ಚಿ ಕುಣಿಯುವ ಮಯೂರಿ ಕುಟುಂಬದ ನೊಗ ಹೊತ್ತು ಪತ್ನಿ, ಮಗಳು, ತಾಯಿ ಅಕ್ಕ-ತಂಗಿ ಅತ್ತೆ ಅಜ್ಜಿಯಾಗಿ ಜವಾಬ್ದಾರಿಯ ವಿವಿಧ ಮಜಲುಗಳನ್ನು ನೈಪುಣ್ಯತೆಯಿಂದ ದಾಟಿಯೂ ತನ್ನಲ್ಲಿ ಅನೇಕ ಬೆರಗುಗಳನ್ನುಳಿಸಿಕೊಳ್ಳುವ, ಅರ್ಥಮಾಡಿಕೊಂಡಷ್ಟು ಅರಿವಿಗೆ ನಿಲುಕದ ಮಾಯಗನ್ನಡಿಗೆ ಸ್ತ್ರೀ ಎಂಬ ಹೆಸರು ಕೊಟ್ಟು ಸ್ತ್ರೀ ಎಂದರೆ ಅಷ್ಟೇ ಸಾಕೇ ಎಂದು ಕವಿಯೊಬ್ಬ ತನ್ನನ್ನು ತಾನೇ ಪ್ರಶ್ನಿಸಿಕೊಂಡು ಉತ್ತರಕ್ಕಾಗಿ ಪದಗಳನ್ನು ತಡಕಾಡಿ ತಾನೇ ತರ್ಕಕ್ಕೆ ಸಿಗದಂತೆ ಮೌನವಾಗುವ ಪರಿ ಹೆಣ್ಣು ಎಂಬ ಅದ್ಭುತ ಭಾವದ ಆಸ್ಮಿತೆಯನ್ನು ಬರೀ ‘ಲಿಂಗ’ಕಷ್ಟೇ ಸೀಮಿತಗೊಳಿಸುವವರು ಮೂರ್ಖರೇ ಸರಿ.

ಆದರೆ ಸ್ತ್ರೀಯ ಶ್ರೇಷ್ಠತೆಯನ್ನು ಅರ್ಥೈಸಿಕೊಳ್ಳುತ್ತ, ಕೊಂಡಾಡುತ್ತ ನಾವು ವಾಸ್ತವದ ಪರಿಸ್ಥಿತಿಯ ಕಡೆ ಗಮನಹರಿಸಿ ಚಿಂತನೆ ಮಾಡಬೇಕಾದದ್ದು ಇಂದಿನ ಅಗತ್ಯವಾಗಿದೆ. ಪ್ರತಿನಿತ್ಯದ ವರದಿ, ಉಲ್ಲೇಖಗಳು ನಮ್ಮನ್ನು ಬೆಚ್ಚಿ ಬೀಳಿಸುವಂಥ ವಾತಾವರಣ ಸೃಷ್ಟಿಯಾದದ್ದು ಸುಳ್ಳಲ್ಲ. ಜಾಗತಿಕ ನೆಲೆಗಟ್ಟಿನಲ್ಲಿ ನಿಂತು ನೋಡುವುದಾದರೆ ಬದಲಾಗುತ್ತಿರುವ ಈ ಮಜಲಿನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಲೈಂಗಿಕ ಶೋಷಣೆ, ಮಾನಸಿಕ ಮತ್ತು ದೈಹಿಕ ಕಿರುಕುಳ, ಯುದ್ಧಪೀಡಿತ ಪ್ರದೇಶಗಳಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳುವುದು, ಅತ್ಯಾಚಾರ ಮತ್ತು ಕೊಲೆ, ಹೆಣ್ಣುಬ್ರೂಣ ಹತ್ಯೆ, ಮಹಿಳೆಯರ-ಬಾಲಕಿಯರ ಅಪಹರಣ, ಮಾರಾಟ, ವೇಶ್ಯಾವಾಟಿಕೆಯ ಕಬಂದ ಬಾಹುಗಳಲ್ಲಿ ಸ್ತ್ರಿ ಕುಲ ನಲುಗುತ್ತಿರುವುದು ಎಲ್ಲಾ ದೇಶಗಳಲ್ಲಿ ಪ್ರಜ್ಞಾವಂತ ಸಮಾಜದ ಜವಾಬ್ದಾರಿಯನ್ನು ಅಭಿವೃದ್ಧಿಯನ್ನು ಅಣಕಿಸುತ್ತಿದೆ. ಕೋವಿಡ್ ಗಿಂತಲೂ ಭಯಾನಕವಾದ ಈ ರೋಗಕ್ಕೆ ಮಲಿನ ಮನಸ್ಸುಗಳಿಗೆ, ನೀಚ ಪ್ರವೃತ್ತಿಯ ಮಾನಸಿಕತೆಗೆ ಸಾರ್ವತ್ರಿಕ ಲಸಿಕೆ ತಯಾರಾಗಬೇಕು. ಅಂತಹ ಪರಿಹಾರಗಳನ್ನು ಕಂಡುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ವ್ಯವಸ್ಥೆಯಿಂದಾದ ಹಲವು ತೊಂದರೆಗಳನ್ನು ಅವಲೋಕಿಸುವ ಸಂದರ್ಭದಲ್ಲಿ ಮಹಿಳೆ ತನ್ನ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಪ್ರತಿಭಟಿಸುವ ನಿಟ್ಟಿನಲ್ಲಿ ಸದೃಢಳಾಗಬೇಕು, ಸಾಕ್ಷರಳಾಗಬೇಕು ಮತ್ತು ಸ್ವಾವಲಂಬಿ ಆಗಬೇಕು.

ಅಂತೆಯೇ ಅಂತಹ ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಸಿದ್ಧಾಂತಗಳನ್ನೆಲ್ಲ ಗಾಳಿಗೆ ತೂರಿ ವ್ಯಸನಗಳಿಗೆ ದಾಸರಾಗಿ ಸಾಮಾಜಿಕ ಜಾಲತಾಣಗಳ ಗೀಳು ಹಚ್ಚಿಕೊಂಡು ಜೀವನವನ್ನು ಕತ್ತಲೆಯತ್ತ ನೂಕುವ ಬದಲು ಕಲಿತ ಸಂಸ್ಕಾರ ಶಿಕ್ಷಣದ ಬೆಳಕಿನಲ್ಲಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡು ತನ್ನ ಸುತ್ತಮುತ್ತಲಿನ ಜನಗಳಿಗೆ, ಶೋಷಿತರಿಗೆ ಬೆಳಕಾಗಿ, ನೆರಳಾಗಿ ನೆಮ್ಮದಿಯನ್ನು ನೀಡಿ ಬದುಕುವ ದೇವತೆಗಳಾದಾಗ ಮಾತ್ರ ಸಮಾಜದಲ್ಲಿ ಮಹಿಳೆಯರ ಸ್ಥಾನ ಎತ್ತರಕ್ಕೆರಲು ಸಾಧ್ಯ.

ಯತ್ರ ನಾರ್ಯಸ್ತು ಪೂಜ್ಯತೆ ರಮಂತೆ ತತ್ರ ದೇವತಾ ಎನ್ನುವ ನಾಡಿನಲ್ಲಿ ಹೆಣ್ಣಾಗಿ ಹುಟ್ಟಿದ ಹೆಮ್ಮೆಯೊಂದಿಗೆ ಎಲ್ಲರಿಗೂ ಮಹಿಳಾ ದಿನದ ಶುಭಾಶಯಗಳು.

ಡಾ. ಶ್ರೀದೇವಿ ಆನಂದ ಪೂಜಾರಿ


Spread the love

About Yuva Bharatha

Check Also

ಬೆಳಗಾವಿ ಗಡಿಭಾಗ, ಉತ್ತರ ಕರ್ನಾಟಕ ಎಂದರೆ ಏಕೆ ತಾತ್ಸಾರ !

Spread the loveಬೆಳಗಾವಿ ಗಡಿಭಾಗ, ಉತ್ತರ ಕರ್ನಾಟಕ ಎಂದರೆ ಏಕೆ ತಾತ್ಸಾರ ! ಅಖಂಡ ಕರ್ನಾಟಕ ನಿರ್ಮಾಣವಾದ ದಿನದಿಂದಲೂ ಸರಕಾರಗಳು …

Leave a Reply

Your email address will not be published. Required fields are marked *

eighteen − six =