ಬೆಳಗಾವಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪ್ರಾಣ ಬೆದರಿಕೆ ಕರೆ
ಯುವ ಭಾರತ ಸುದ್ದಿ ನಾಗಪುರ : ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರಲ್ಲಿ ಜೀವ ಬೆದರಿಕೆ ಕರೆ ಹೋಗಿವೆ.ಕರೆ ಮಾಡಿದ ವ್ಯಕ್ತಿ ಗಡ್ಕರಿ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇರುವ ಕೈದಿ ಜೈಲಲ್ಲಿ ಮೊಬೈಲ್ ಸಂಪರ್ಕ ಹೊಂದಿದ್ದು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ ಈತ ಕೊಲೆ ಆರೋಪಿ ಎಂದು ದೃಢಪಟ್ಟಿದೆ.
ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಯ ಲ್ಯಾಂಡ್ ಲೈನ್ ದೂರವಾಣಿಗೆ ಶನಿವಾರ ಬೆಳಗ್ಗೆ 11:25, 11:32, 12:30 ಕ್ಕೆ 3 ಕರೆಗಳು ಹೋಗಿವೆ. ಕರೆ ಮಾಡಿದವ ದಾವೂದ್ ಗ್ಯಾಂಗ್ ನವನು ಎಂದು ಹೇಳಿಕೊಂಡಿದ್ದು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ತಾನು ಕರ್ನಾಟಕದ ವ್ಯಕ್ತಿ ಎಂದು ಹೇಳಿ ಫೋನ್ ನಂಬರ್, ವಿಳಾಸ ತಿಳಿಸಿದ್ದಾನೆ.ಈತನ ಬಂಧನಕ್ಕೆ ಮಹಾರಾಷ್ಟ್ರ ಪೊಲೀಸರು ಈಗ ಬೆಳಗಾವಿಗೆ ಆಗಮಿಸಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಭದ್ರತೆ ಸಹ ಹೆಚ್ಚಿಸಲಾಗಿದೆ.