Breaking News

ಸುವರ್ಣ ವಿಧಾನಸೌಧ ಆವರಣದಲ್ಲಿ ಸಾವಿರಾರು ಜನರಿಂದ “ಯೋಗ”ಥಾನ್ : ಗಿನ್ನಿಸ್ ದಾಖಲೆ ನಿರ್ಮಾಣದ ಗುರಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

Spread the love

ಸುವರ್ಣ ವಿಧಾನಸೌಧ ಆವರಣದಲ್ಲಿ ಸಾವಿರಾರು ಜನರಿಂದ “ಯೋಗ”ಥಾನ್ :ಗಿನ್ನಿಸ್ ದಾಖಲೆ ನಿರ್ಮಾಣದ ಗುರಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಯುವ ಭಾರತ ಸುದ್ದಿ ಬೆಳಗಾವಿ :ಸೂರ್ಯದೇವನು ಪಥ ಬದಲಾಯಿಸಿದ ಸಂಕ್ರಮಣದ ಶುಭ ದಿನದಂದು ರಾಜ್ಯವನ್ನು ದೇಶದ ಮೊದಲ “ಯೋಗ ಸಾಕ್ಷರತಾ ರಾಜ್ಯ”ವನ್ನಾಗಿಸುವುದರ ಜತೆಗೆ ಯೋಗ ಪ್ರದರ್ಶನದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸುವ ಭಾಗವಾಗಿ ಇಲ್ಲಿನ ಸುವರ್ಣ ವಿಧಾನಸೌಧದ ಆವರಣದಲ್ಲಿ ಭಾನುವಾರ (ಜ.15) ಬೃಹತ್ ಯೋಗಥಾನ್-2023 ಕಾರ್ಯಕ್ರಮ ನಡೆಯಿತು.

ಮುಂಜಾನೆಯ ಮಂಜು ಮುಸುಕಿದ ವಾತಾವರಣದಲ್ಲಿ ನೇಸರನ ಹೊಂಗಿರಣಗಳ ಮಧ್ಯೆ ಸುವರ್ಣ ವಿಧಾನಸೌಧದ ಪಶ್ಚಿಮದ್ವಾರದ ಮೆಟ್ಟಿಲುಗಳ ಎದುರು ಸಾವಿರಾರು ಜನರು ಯೋಗ ಪ್ರದರ್ಶಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಆಯುಷ್ ಇಲಾಖೆ, ನೆಹರು ಯುವಕೇಂದ್ರ, ಎನ್.ಎಸ್.ಎಸ್., ಎನ್.ಸಿ.ಸಿ., ಆಯುಷ್ ಟಿವಿ ಹಾಗೂ ವಿವಿಧ ಯೋಗ ಸಂಸ್ಥೆಗಳ ಆಶ್ರಯದಲ್ಲಿ ಯೋಗಥಾನ್ ಹಮ್ಮಿಕೊಳ್ಳಲಾಗಿತ್ತು.

ನಾಡಗೀತೆಯೊಂದಿಗೆ ಆರಂಭಗೊಂಡ ಯೋಗಥಾನ್ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

ಯೋಗಥಾನ್ ಗೆ ಚಾಲನೆ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಯೋಗದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಲು ರಾಜ್ಯದಾದ್ಯಂತ ಯೋಗಥಾನ್ ಹಮ್ಮಿಕೊಳ್ಳಲಾಗಿದೆ ಎಂದರು.ಯೋಗಸಾಧನೆಯಲ್ಲಿ ಗಿನ್ನಿಸ್ ದಾಖಲೆ ಮಾಡಲು ರಾಜ್ಯದಲ್ಲಿ ಏಕಕಾಲದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುತ್ತಿದ್ದಾರೆ.ಯೋಗದಿಂದ ಆರೋಗ್ಯಕರ ಮತ್ತು ಸಂತೋಷಕರ ಬದುಕು ಸಾಧ್ಯವಾಗಲಿದೆ ಎಂದರು.ಇಂದಿನ ಯೋಗಥಾನ್ ಮೂಲಕ ಕರ್ನಾಟಕ ರಾಜ್ಯವನ್ನು ದೇಶದ ಮೊದಲ “ಯೋಗ ಸಾಕ್ಷರತಾ ರಾಜ್ಯ” ವನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿ‌ ನಿತೇಶ್ ಪಾಟೀಲ, ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಸಿಓ 25 ಕರ್ನಾಟಕ ಬಟಾಲಿಯನ್ ಲೆಫ್ಟಿನೆಂಟ್ ಕರ್ನಲ್ ನಂದಕುಮಾರ್, ಸುಬೇದಾರ್ ಮೇಜರ್ ಹರ್ ದೇವ್ ಸಿಂಗ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ, ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪ ನಿರ್ದೇಶಕ ದೊಡ್ಡಮನಿ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ನಾಲತವಾಡ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಜಿನೇಶ್ವರ ಪಡನಾಡ, ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ, ಜಿಲ್ಲಾ ಯೋಗಾ ಸಂಯೋಜಕಿ ಆರತಿ ಸಂಕೇಶ್ವರಿ ಮತ್ತು ಯೋಗ ಸಂಸ್ಥೆಗಳ ಪದಾಧಿಕಾರಿಗಳು, ಯೋಗ ತರಬೇತುದಾರರು, ಎನ್.ಸಿ.ಸಿ. ಕೆಡೆಟ್ ಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಕೆಡೆಟ್ ಗಳು ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದರು.ಸುನೀತಾ ದೇಸಾಯಿ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.

45 ನಿಮಿಷಗಳ ಕಾಲ ನಡೆದ ಯೋಗ ಪ್ರದರ್ಶನದಲ್ಲಿ ನಗರದ ವಿವಿಧ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ವಿವಿಧ ಆಸನಗಳನ್ನು ಪ್ರದರ್ಶಿಸುವ ಮೂಲಕ ಗಮನಸೆಳೆದರು.ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಯೋಗಥಾನ್ ಕಾರ್ಯಕ್ರಮಕ್ಕೆ ನೋಂದಾಯಿಸಿದ ಶಾಲೆ, ಕಾಲೇಜುಗಳಿಗೆ ಬಹುಮಾನ ನೀಡಲಾಯಿತು.
ಶಾಲಾ ವಿಭಾಗದಲ್ಲಿ ಲಿಟಲ್ ಸ್ಕಾಲರ್ ಸ್ಕೂಲ್, ಬೆಳಗಾವಿ,ಕಾಲೇಜು ವಿಭಾಗದಲ್ಲಿ ಸರಕಾರಿ ಸರಸ್ವತಿ ಪದವಿಪೂರ್ವ ಕಾಲೇಜು, ಶಹಾಪುರ ಇವರಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬಹುಮಾನ ನೀಡಿದರು.

ಗಾಲ್ಪ್ ಮೈದಾನದಲ್ಲೂ ಯೋಗಥಾನ್:ಇದೇ ರೀತಿಯ ಇನ್ನೊಂದು ಕಾರ್ಯಕ್ರಮವು ಜಿಲ್ಲಾಡಳಿತದ ಸಹಯೋಗದಲ್ಲಿ ಬೆಳಗಾವಿ ನಗರದ ಗಾಲ್ಪ್ ಮೈದನಾದಲ್ಲಿ ಕೂಡ ನಡೆಯಿತು.ಜಿಲ್ಲಾ ಆಯುಷ್ ಡಾ.ಶ್ರೀಕಾಂತ ಸುಣಧೋಳಿ ಅವರ ನೇತೃತ್ವದಲ್ಲಿ ಅಲ್ಲಿಯೂ ಕೂಡ ಸಾವಿರಾರು ಜನರು ಪಾಲ್ಗೊಂಡಿದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

18 + 12 =