ಕಿತ್ತೂರಲ್ಲಿ ಚನ್ನಮ್ಮಾಜಿ ಜ್ಯೋತಿಗೆ ಸ್ವಾಗತ
ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು :
ನಾಡಿನ ಸ್ವಾತಂತ್ರಕ್ಕಾಗಿ ಪ್ರಾಣ ಪಣಕ್ಕಿಟ್ಟು ಹೋರಾಡಿ ಮಡಿದವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಅಂಥ ವೀರರ ಸ್ಮರಣೆ ಅತ್ಯಗತ್ಯ ಎಂದು ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.
ಅವರು ಗುರುವಾರ ಚನ್ನಮ್ಮಾಜಿಯ ೧೯೪ನೇ ಪುಣ್ಯಸ್ಮರಣೆ ಅಂಗವಾಗಿ ಚನ್ನಮ್ಮಾಜಿ ತವರೂರಾದ ಕಾಕತಿಯಿಂದ ಕಿತ್ತೂರಿಗೆ ಆಗಮಿಸಿದ ವೀರಜ್ಯೋತಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಬಾಂಬೆ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಿದಂತೆ ಜಿಲ್ಲೆಯ ಸಾಂಬ್ರಾದಲ್ಲಿರುವ ವಿಮಾನ ನಿಲ್ದಾಣಕ್ಕೆ ಹಾಗೂ ಬೆಳಗಾವಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣಕ್ಕೆ ಚನ್ನಮ್ಮಾಜಿ ಹೆಸರು ನಾಮಕರಣ ಮಾಡಬೇಕು ಎಂದು ರಾಜ್ಯ ಸರಕಾರಕ್ಕೆ ಚನ್ನಮ್ಮಾಜಿ ಅಭಿಮಾನಿಗಳ ಪರವಾಗಿ ಒತ್ತಾಯಿಸುವುದಾಗಿ ಹೇಳಿದರು. ಇದರಿಂದ ಚನ್ನಮ್ಮಾಜಿ ಹೆಸರು ಅಜರಾಮರವಾಗಿ ಉಳಿದಂತಾಗುತ್ತದೆ ಹಾಗೂ ನಾಡಿನ ಪುಣ್ಯಾತ್ಮರನ್ನು ಸ್ಮರಣ ಮಾಡಿದಂತೆಯೂ ಆಗುತ್ತದೆ ಎಂದು ಹೇಳಿದರು.
ನಂತರ ವೀರಜ್ಯೋತಿಯು ಕೋಟೆ ಆವರಣಕ್ಕೆ ತೆರಳಿ ಕೋಟೆಯಲ್ಲಿನ ಪೂಜಾ ಗೃಹದಲ್ಲಿ ಪೂಜೆ ಸಲ್ಲಿಸಲಾಯಿತು. ಕಿತ್ತೂರಿನಿಂದ ಸಂಗೊಳ್ಳಿ, ಅಮಟೂರ ಮಾರ್ಗವಾಗಿ ಬೈಲಹೊಂಗಲದ ಚೆನ್ನಮ್ಮಾಜಿ ಸಮಾಧಿ ಸ್ಥಳಕ್ಕೆ ಜ್ಯೋತಿ ತೆರಳಿತು . ಕಂದಾಯ ಇಲಾಖೆ ಅಧಿಕಾರಿಗಳು, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸಂದೀಪ ದೇಶಪಾಂಡೆ ಪ ಪಂ ಸದಸ್ಯರಾದ ಕಿರಣ ಪಾಟೀಲ, ನಾಗೇಶ ಅಸುಂಡಿ, ಎಮ್ ಎಫ್ ಜಕಾತಿ, ಶಂಕರ ಬಡಿಗೇರ, ಬೈಲಹೊಂಗಲದ ಶ್ರೀಶೈಲ ಬೋಳನ್ನವರ, ರಾಜು ಕೂಡಸೋಮನ್ನವರ, ಎಫ್ ಎಸ್ ಸಿದ್ದನಗೌಡರ, ಪ್ರದೀಪ ವಣ್ಣೂರ, ಡಿ ಆರ್ ಪಾಟೀಲ ಹಾಗೂ ಅನೇಕ ಗಣ್ಯರು ಮಾನ್ಯರು ಉಪಸ್ಥಿತರಿದ್ದರು.