ಸಿಎಂಗೆ 24 ಗಂಟೆಗಳ ಗಡುವು ಕೊಟ್ಟ ಯತ್ನಾಳ
ಯುವ ಭಾರತ ಸುದ್ದಿ ಬೆಳಗಾವಿ :
ಪಂಚಮಸಾಲಿ ಮೀಸಲಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು 24 ಗಂಟೆಗಳ ಗಡುವು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಂಚಮಸಾಲಿ ಮೀಸಲಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ತಾಯಿ ಮೇಲೆ ಆಣೆ ಮಾಡಿದಂತೆ ನಡೆದುಕೊಳ್ಳಲಿ. ಇಲ್ಲದಿದ್ದರೆ ಅವರು ಮತ್ತು ಬಿಜೆಪಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಭವಿಷ್ಯದ ದೃಷ್ಟಿಯಿಂದ ಈ ಮಾತು ಹೇಳುತ್ತಿದ್ದೇನೆ. ನೀವು ಟಿಕೆಟ್ ಕೊಡದೆ ಇರಬಹುದು, ಇಲ್ಲ ಪಕ್ಷದಿಂದ ಉಚ್ಚಾಟಿಸಬಹುದು ಎಂದು ಅವರು ಪಕ್ಷಕ್ಕೆ ಇದೀಗ ಬಿಸಿ ಮುಟ್ಟಿಸಿದ್ದಾರೆ.
*ಸ್ವಾಮೀಜಿಯಿಂದಲೂ ಎಚ್ಚರಿಕೆ :*
ಪಂಚಮಸಾಲಿ ಸಮುದಾಯಕ್ಕೆ ಘೋಷಣೆ ಮಾಡಿರುವ 2 ಡಿ ಮೀಸಲಾತಿ ಗೊಂದಲಮಯವಾಗಿದೆ. ಈ ಕೂಡಲೇ 2 ಎ ಮೀಸಲಾತಿ ಘೋಷಿಸಬೇಕು ಎಂದು ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿಗಳು ಒತ್ತಾಯಿಸಿದರು.
ಗಾಂಧಿ ಭವನದಲ್ಲಿ ನಡೆದ ಪಂಚಮಸಾಲಿ ಹೋರಾಟದ ರಾಜ್ಯ ಕಾರ್ಯಕಾರಿಣಿ ಸಭೆಯ ನಂತರ ಅವರು ಪತ್ರಕರ್ತರ ಜೊತೆ ಮಾತನಾಡಿದರು. ಸರಕಾರದ 2 ಡಿ ಮೀಸಲಾತಿ ಪಂಚಮಸಾಲಿಗಳಿಗೆ ಬೇಡ ಎಂಬ ಸುದೀರ್ಘ ಚರ್ಚೆ ನಂತರ ಇಂದು ಈ ನಿರ್ಧಾರ ಮಾಡಿದ್ದೇವೆ. ನಮಗೆ ಏನೇ ಇದ್ದರೂ 2 ಎಮೀಸಲಾತಿ ಮತ್ತು ಅದರಲ್ಲಿ ಸಿಗುವ ಸೌಲಭ್ಯ ಸಿಗಬೇಕು ಎಂದು ಅವರು ಒತ್ತಾಯಿಸಿದರು. ಜನವರಿ 12ರ ವರೆಗೆ ಮುಖ್ಯಮಂತ್ರಿಗಳು 2ಎ ಮೀಸಲಾತಿ ಘೋಷಣೆ ಮಾಡದೇ ಇದ್ದರೆ ಹಾವೇರಿಯ ಅವರ ಮನೆಯ ಎದುರು ಒಂದು ದಿನದ ಬೃಹತ್ ಪ್ರತಿಭಟನೆ ನಡೆಸಲಾಗುವುದು. ನಂತರ ಮುಂದಿನ ಹೋರಾಟದ ರೂಪುರೇಷೆ ಘೋಷಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.