Breaking News

19 ರಂದು ಸವದತ್ತಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಸಮಾವೇಶ -ಲಕ್ಷ ಜನ ಸೇರುವ ನಿರೀಕ್ಷೆ !

Spread the love

19 ರಂದು ಸವದತ್ತಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಸಮಾವೇಶ -ಲಕ್ಷ ಜನ ಸೇರುವ ನಿರೀಕ್ಷೆ !

ಯುವ ಭಾರತ ಸುದ್ದಿ ಸವದತ್ತಿ : ಮೀಸಲಾತಿ ನೀಡುವಂತೆ ಒತ್ತಾಯಿಸಿ ಸವದತ್ತಿ ತಾಲೂಕಿನ ಪಂಚಮಸಾಲಿ ಸಮಾಜದ ವತಿಯಿಂದ ಡಿ.19 ರಂದು ತಾಲೂಕು ಮಟ್ಟದ ಪಂಚಮಸಾಲಿ ಸಮಾಜದ ಸಮಾವೇಶವನ್ನು ಏರ್ಪಡಿಸಲಾಗುತ್ತದೆ ಎಂದು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸವದತ್ತಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಮಾಜ ಬಾಂಧವರೊಂದಿಗೆ ಸಭೆ ನಡೆಸಿ ಮಾತನಾಡಿದರು. ಸವದತ್ತಿಯಲ್ಲಿ ನಡೆಯಲಿರುವ ಪಂಚಮಸಾಲಿ ಸಮಾಜದ ಸಮಾವೇಶಕ್ಕೆ ಲಕ್ಷಕ್ಕೂ ಹೆಚ್ಚು ಜನ ಸೇರಬೇಕು. ಈ ಮೂಲಕ ಎಲ್ಲಾ ಗ್ರಾಮಗಳ ಜನತೆ ತಮ್ಮ ಒಗ್ಗಟ್ಟು ಪ್ರದರ್ಶಿಸಬೇಕು. ಸಮಾಜ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ನಡೆಯಲಿರುವ ಹೋರಾಟವನ್ನು ಅತ್ಯಂತ ಯಶಸ್ವಿಯಾಗಿ ಮಾಡಬೇಕು ಎಂದು ಹೇಳಿದರು.

ಸಮಾಜದ ಯುವ ಧುರೀಣ ರುದ್ರಣ್ಣ ಚಂದರಗಿ ಮಾತನಾಡಿ,ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಿದ್ದರಾಗಿದ್ದೇವೆ ಎಂದು ಹೇಳಿದರು.

ಪಂಚಮಸಾಲಿ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಡಿಸೆಂಬರ್ 19 ರಂದು ಸವದತ್ತಿ ತಾಲೂಕಿನ ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶವನ್ನು ಸವದತ್ತಿ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗುತ್ತಿದೆ. ತಾಲೂಕಿನ ಸರ್ವ ಪಂಚಮಸಾಲಿ ಸಮಾಜ ಬಾಂಧವರು ಈ ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಪಂಚಮಸಾಲಿ ಸಮಾಜದ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿಗಳು 751 ಕಿಲೋಮೀಟರ್ ಪಾದಯಾತ್ರೆ ಮಾಡಿ ಬೆಂಗಳೂರಿಗೆ ಹೋಗಿ ಪ್ರತಿಭಟನೆ ನಡೆಸಿದರೂ ಸರಕಾರ ಮಾತ್ರ ಇದುವರೆಗೆ ಮೀಸಲಾತಿ ಘೋಷಣೆ ಮಾಡಿಲ್ಲ. ಈ ನಿಟ್ಟಿನಲ್ಲಿ ಇಡೀ ಸಮಾಜ ಇದೀಗ ಒಂದಾಗಿದೆ.
2 ಎ ಮೀಸಲಾತಿ ಹೋರಾಟ ಕುರಿತು ಅಂತಿಮ ಹೋರಾಟಕ್ಕೆ ಸಜ್ಜಾಗಿದ್ದೇವೆ. ಪಂಚಮಸಾಲಿ ಸಮಾಜದ ಸುಮಾರು 25 ಲಕ್ಷ ಜನರು ಸೇರಿ ಡಿಸೆಂಬರ್ 22 ರಂದು ಬೆಳಗಾವಿ ಸುವರ್ಣ ವಿಧಾನಸೌಧದೆದುರು ಮಾಡು ಇಲ್ಲವೇ ಮಡಿ ಎಂಬ ತಾರ್ಕಿಕ ಹೋರಾಟಕ್ಕೆ ಸಿದ್ದರಾಗಿದ್ದೇವೆ. ಎಲ್ಲಾ ತಾಲೂಕುಗಳ ಪಂಚಮಸಾಲಿ ಸಮಾಜ ಬಾಂಧವರು ಈ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಸವದತ್ತಿ ತಾಲೂಕಿನ ಇನಾಮ್ ಹೊಂಗಲ, ಹಿರೇವಳ್ಳಿಗೇರಿ, ಚಿಕ್ ಉಳಗೇರಿ, ಯಡ್ರಾವಿ, ಬೆಡ್ಸೂರ, ಹಂಚಿನಾಳ, ಚುಳುಕಿ, ಚಿಕ್ಕುಂಬಿ, ಅಚ್ಮಳ್ಳಿ, ಹಳಕಟ್ಟಿ, ಕಗದಾಳ ಗ್ರಾಮಗಳಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದವರು ಜನ ಜಾಗೃತಿ ಪಾದಯಾತ್ರೆ ಮಾಡಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಲ್ಲಮಪ್ರಭು, ಜಿಲ್ಲಾಧ್ಯಕ್ಷ ಪಂಚನಗೌಡ್ರು. ವಿರೂಪಾಕ್ಷಪ್ಪ ಮಾಮನಿ, ಕಾರದಗಿ, ರಾಜು ನಿಡವನೆ, ಸುನಿಲ್ ಮಾಮನಿ, ಬಸವರಾಜ ಇಂಚಲ, ಉಮೇಶ ಕೊರಕೊಪ್ಪ, ಗುರಪ್ಪ ಚಿಕ್ಕುಂಬಿ, ರಾಜು ಕಗದಾಳ, ಪಟ್ಟೇದ, ವಕೀಲ ದ್ಯಾಮನಗೌಡ್ರ ಹಾಗೂ ಸ್ಥಳೀಯ ಊರಿನ ಪ್ರಮುಖರು ಭಾಗವಹಿಸಿದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

eleven − three =