ಇಂಡಿ ಪಶು ಆಸ್ಪತ್ರೆಗೆ ಅನಾರೋಗ್ಯ !
ಖಾಜು ಸಿಂಗೆಗೋಳ
ಯುವ ಭಾರತ ಸುದ್ದಿ ಇಂಡಿ : ತಾಲೂಕಿನ ನಾಟಿ ಹಸು ಹಾಗೂ ಎತ್ತುಗಳಲ್ಲಿ ಚರ್ಮ ಗಂಟುರೋಗ ಕಾಣಿಸಿಕೊಂಡಿದ್ದು,ಇದರಿಂದ ನಾಟಿ ಜಾನುವಾರುಗಳ ಆರ್ಥಿಕ ಮೌಲ್ಯ ಕುಸಿದಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.ತಾಲೂಕಿನಾದ್ಯಂತ ಸುಮಾರು 57 ಜಾನುವಾರುಗಳು ಈ ರೋಗದಿಂದ ಮೃತಪಟ್ಟಿದ್ದು,ಜಾನುವಾರುಗಳ ಚಿಕಿತ್ಸೆಗಾಗಿ ಪಶುಆಸ್ಪತ್ರೆಯಲ್ಲಿ ಸಿಬ್ಬಂದಿ ಬಾಧೆ ಕಾಡುತ್ತಿದ್ದು,ವಸ್ತುಸಂಗ್ರಹಾಲಯದಲ್ಲಿ ತಂದು ಇಟ್ಟಂತೆ ೩ ತಿಂಗಳಿನಿಂದ ಜಾನುವಾರುಗಳ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಆಸ್ಪತ್ರೆಯ ಮುಂದೆ ನಿಲ್ಲಿಸಿದ್ದಾರೆ. ಆಂಬ್ಯುಲೆನ್ಸ್ ಚಾಲಕ ಕೊಟ್ಟಿರುವುದಿಲ್ಲ. ಅದಕ್ಕೆ ಪ್ರತ್ಯೇಕ ವೈದ್ಯರನ್ನು ಸಹ ಒದಗಿಸಿರುವುದಿಲ್ಲ.ಹೀಗಾಗಿ ಜಾನುವಾರುಗಳ ಚಿಕಿತ್ಸೆಗೆ ವೈದ್ಯರು ಹರಸಾಹಸ ಪಡುತ್ತಿದ್ದಾರೆ.
ತಾಲೂಕಿನಲ್ಲಿ ೨ ಪಶು ಆಸ್ಪತ್ರೆ,15 ಪಶು ಚಿಕಿತ್ಸಾಲಯ,೩ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಸೇರಿದಂತೆ ಒಟ್ಟು 21 ಪಶು ಆಸ್ಪತ್ರೆಗಳು ಇವೆ.ಇಷ್ಟು ಆಸ್ಪತ್ರೆಗಳಿಗೆ ಒಟ್ಟು 250 ಸಿಬ್ಬಂದಿ ಬೇಕು.ಆದರೆ ಕೇವಲ 40 ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ವೈದ್ಯ ಹಾಗೂ ಇತರೆ ಸಿಬ್ಬಂದಿಗೆ ೪ ರಿಂದ ೫ ಹಳ್ಳಿಗಳು ಹಂಚಿಕೆಯಾಗುತ್ತವೆ.ಪ್ರತಿ ತೋಟಕ್ಕೆ ಭೇಟಿ ನೀಡಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು.ಇದು ಕಷ್ಟವಾಗುತ್ತಿದೆ.ಲಸಿಕೆ ಸಾಕಷ್ಟು ಇದ್ದರೂ ಸಿಬ್ಬಂದಿ ಕೊರತೆಯಿಂದ ಲಸಿಕೆ ಹಾಕುವ ಪ್ರಕ್ರೀಯೆ ಮಂದಗತಿಯಿಂದ ನಡೆದಿದ್ದು,ಇದ್ದುದರಲ್ಲಿಯೇ ಸಿಬ್ಬಂದಿಗಳ ಕಾಳಜಿಯಿಂದ ಈಗಾಗಲೆ ಶೇ.೮೫ ರಷ್ಟು ಲಸಿಕೆ ಹಾಕುವ ಕಾರ್ಯ ಮುಗಿಸಿದ್ದಾರೆ.
ಗಡಿಭಾಗ ಭೀಮಾನದಿ ತೀರದ ಗ್ರಾಮಗಳಲ್ಲಿ ಚರ್ಮಗಂಟುರೋಗ ಹೆಚ್ಚಾಗಿ ಕಾಣಿಸಿಕೊಂಡಿದ್ದು,ತಾಲೂಕಿನಾದ್ಯಂತ ಈ ರೋಗ ಕಾಣಿಸಿಕೊಂಡಿದ್ದರಿಂದ ರೈತರು ಭಯಗೊಂಡಿದ್ದಾರೆ. ಹಾಲು ವ್ಯಾಪಾರದಿಂದ ಬದುಕು ಸಾಗಿಸುತ್ತಿರುವ ರೈತರು ಚರ್ಮಗಂಟು ರೋಗದಿಂದ ಜಾನುವಾರುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ತಾಲೂಕಿನ ಭೀಮಾನದಿ ತೀರದ ಅಗರಖೇಡ,ಗುಬ್ಬೇವಾಡ,ಶಿರಗೂರ, ಖೇಡಗಿ, ರೋಡಗಿ,ಮಿರಗಿ,ಅಣಚಿ,ಬುಯ್ಯಾರ, ನಾಗರಳ್ಳಿ,ಹಿಂಗಣಿ ಭಾಗದಲ್ಲಿ ಹೆಚ್ಚಾಗಿ ಕೊಣಿಸಿಕೊಂಡಿರುವ ಈ ರೋಗ ಜಾನುವಾರುಗಳಿಗೆ ಮಾರಕವಾಗಿದೆ. ಗಡಿಭಾಗದ ಭೀಮಾನದಿ ದಂಡೆಯಲ್ಲಿರುವ ಗ್ರಾಮಗಳಲ್ಲಿ ನೀರು ಹಾಗೂ ಮೇವಿನ ಅನುಕೂಲವಾಗಿದ್ದರಿಂದ ಗಡಿ ಗ್ರಾಮದಲ್ಲಿ ನಾಟಿ ಹಸು ಹಾಗೂ ಎತ್ತುಗಳನ್ನು ಹೆಚ್ಚಾಗಿ ಸಾಕಲಾಗಿದೆ.ರೈತರು ವ್ಯವಸಾಯಕ್ಕಾಗಿ ಕೊಟ್ಟಿಗೆ ಗೊಬ್ಬರ ,ಹಾಲು ಹಾಗೂ ಕೃಷಿ ನಿರ್ವಹಣೆಗಾಗಿ ನಾಟಿ ಗೋವನ್ನು ಸಾಕುತ್ತಾರೆ.ಚರ್ಮಗಂಟು ರೋಗದಿಂದ ಈ ಜಾನುವಾರುಗಳ ಜೀವ ಹಿಂಡುತ್ತಿದ್ದು 50 ರಿಂದ 1 ಲಕ್ಷದವರೆಗಿನ ಕಿಮ್ಮತ್ತಿನ ಜಾನುವಾರುಗಳ ಸಾವಿನಿಂದ ರೈತರು ಕಂಗಾಲಾಗಿದ್ದಾರೆ.
ಈಗಾಗಲೆ ಇಂಡಿ ತಾಲೂಕಿನಲ್ಲಿ ಹಸು ಹಾಗೂ ಎತ್ತುಗಳು ಸೇರಿ ೫೭ ಜಾನುವಾರುಗಳು ಮೃತಪಟ್ಟಿವೆ.1050 ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಂಡು ಬಂದಿದೆ.ತಾಲೂಕಿನಲ್ಲಿ ಒಟ್ಟು 62 ಸಾವಿರ ಜಾನುವಾರುಗಳು ಇದ್ದು,ಇದರಲ್ಲಿ ಈಗಾಗಲೆ ಸರ್ಕಾರಿ ಪಶು ಆಸ್ಪತ್ರೆಯಿಂದ ಜಾನುವಾರು ಲಸಿಕೆ ಹಾಕಲಾಗಿದೆ.ಉಳಿದ ಜಾನುವಾರುಗಳಿಗೆ ಲಸಿಕೆ ಹಾಕುವ ಪ್ರಕ್ರಿಯೆ ನಡೆದಿದೆ ಎಂದು ಪಶು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.ಈ ರೋಗ ಹೆಚ್ಚಾಗಿ ಆಕಳು ಹಾಗೂ ಎತ್ತುಗಳಲ್ಲಿ ಹೆಚ್ಚಾಗಿ ಕಂಡು ಬಂದಿದ್ದು,ಎಮ್ಮೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಕಂಡು ಬಂದಿದೆ .
ಚಿಕಿತ್ಸೆಗೆ ಇದ್ದು ಇಲ್ಲದಂತಾದ ಆಂಬ್ಯುಲೆನ್ಸ್ : ಗ್ರಾಮಗಳಿಗೆ ಹೋಗಿ ಚಿಕಿತ್ಸೆ ನೀಡಲು ಅನುಕೂಲವಾಗಲು ಸರ್ಕಾರ ಪ್ರತಿ ತಾಲೂಕಿಗೆ ಒಂದು ಅಂಬ್ಯುಲೆನ್ಸ,ವೈದ್ಯರು,ಚಾಲಕರನ್ನು ಒದಗಿಸುವ ಯೋಜನೆ ಜಾರಿಗೆ ತಂದಿದ್ದು,ತಾಲೂಕಿನ ಪಶು ಆಸ್ಪತ್ರೆಯ ಮುಂದೆ ಅಂಬ್ಯುಲೆನ್ಸ ನಿಂತು ೩ ತಿಂಗಳಾಗಿದೆ.ಆದರೆ ಇಲ್ಲಿಯವರೆಗೆ ಅದಕ್ಕೆ ಚಾಲಕ ಹಾಗೂ ವೈದ್ಯರನ್ನು ಒದಗಿಸದೆ ಇರುವುದರಿಂದ ಅಂಬ್ಯುಲೆನ್ಸ ನಿಂತಲ್ಲೆ ಧೂಳು ತಿನ್ನುತ್ತಿದೆ.
ಸಿಬ್ಬಂದಿ ಬರ : ತಾಲೂಕಿನ ಒಟ್ಟು ೨೧ ಪಶು ಆಸ್ಪತ್ರೆ ಇದ್ದು,೨೫೦ ಸಿಬ್ಬಂದಿ ಬೇಕು.ಆದರೆ ತಾಲೂಕಿನ ಪಶು ಆಸ್ಪತ್ರೆಗಳು ಸೇರಿ ಕೇವಲ ೫೦ ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು,೨೦೦ ಸಿಬ್ಬಂದಿ ಕೊರತೆ ಇದೆ.ಲಸಿಕೆ ಸಾಕಷ್ಟು ಇದ್ದು,ಲಸಿಕೆ ಹಾಕಲು ಸಿಬ್ಬಂದಿ ಕೊರತೆ ಇದೆ.
“ತಾಲೂಕಿನ ಗಡಿಭಾಗದ ಗ್ರಾಮಗಳಲ್ಲಿ ಹೆಚ್ಚಾಗಿ ಚರ್ಮಗಂಟುರೋಗ ಕಂಡು ಬಂದಿದ್ದು,ಉಳಿದ ಗ್ರಾಮಗಳಲ್ಲಿ ಸ್ವಲ್ಪಪ್ರಮಾಣದಲ್ಲಿ ಇದೆ. ಇಂಡಿ ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ಒಟ್ಟು ೫೭ ಜಾನುವಾರುಗಳು ಈ ರೋಗದಿಂದ ಮೃತಪಟ್ಟಿವೆ.೧೦೫೦ ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದೆ. ಲಸಿಕೆ ಲಭ್ಯ ಇದೆ.ಈಗಾಗಲೆ ೫೨ ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ.ಸಿಬ್ಬಂದಿ ಕೊರತೆಯಿಂದ ಬೇಗನೆ ತೋಟಗಳಿಗೆ ಹೋಗಿ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ”- ಡಾ.ಅಡಕಿ,ಪಶುವೈದ್ಯಾಧಿಕಾರಿ,ಇಂಡಿ.
“ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟಿದ್ದು ಗಮನಕ್ಕೆ ಬಂದಿದೆ. ಆಕಳು,ಎತ್ತುಗಳನ್ನು ಸಾಕಿಕೊಂಡು ಕೃಷಿ ಮಾಡುತ್ತಿರುವ ರೈತ ಕುಟುಂಬಕ್ಕೆ ಜಾನುವಾರುಗಳು ಮೃತಪಟ್ಟಿರುವುದರಿಂದ ಹಾನಿಯಾಗಿದೆ. ಜಾನುವಾರುಗಳು ಕಳೆದುಕೊಂಡ ರೈತ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡಬೇಕು ಎಂದು ಅಧಿವೇಶನದ ಮೂಲಕವಾಗಲಿ,ಖುದ್ದಾಗಿ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಒತ್ತಾಯ ಮಾಡುತ್ತೇನೆ”-
ಯಶವಂತರಾಯಗೌಡ ಪಾಟೀಲ,ಶಾಸಕರು,ಇಂಡಿ.