ಬಸವನ ಬಾಗೇವಾಡಿಯಲ್ಲಿ ಎಳ್ಳಮಾವಾಸ್ಯೆ : ಹೊಲದಲ್ಲೇ ಸಹಭೋಜನ !
ಯುವ ಭಾರತ ಸುದ್ದಿ ಬಸವನಬಾಗೇವಾಡಿ : ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಎಳ್ಳು ಅಮಾವಾಸ್ಯೆಯಂಗವಾಗಿ ರೈತ ಬಾಂಧವರು ತಮ್ಮ ತಮ್ಮ ಹೊಲಗಳಲ್ಲಿ ಬೆಳೆದು ನಿಂತ ಬೆಳೆಗೆ ಮತ್ತು ಭೂತಾಯಿಗೆ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಚೆರಗ ಚೆಲ್ಲಿ ಸಂಭ್ರಮಿಸಿದರು.
ಎತ್ತಿನ ಬಂಡಿಗಳಲ್ಲಿ ಹೋಗುವದು ಅಷ್ಟಾಗಿ ಕಂಡುಬರಲಿಲ್ಲ. ಕೆಲ ರೈತ ಬಾಂಧವರು ತಮ್ಮ ಹೊಲಗಳಿಗೆ ತಮ್ಮ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ತೆರಳಿದರೆ, ಅಲ್ಪಸ್ವಲ್ಪ ಬೆಳೆ ಇದ್ದ ರೈತ ಬಾಂಧವರು ಮನೆಯವರೊಂದಿಗೆ ಹೋಗಿ ಚೆರಗ ಚೆಲ್ಲುವ ಹಬ್ಬ ಆಚರಿಸಿದರು.
ಬೆಳಗ್ಗೆಯಿಂದಲೇ ಮನೆಗಳಲ್ಲಿ ಮಹಿಳೆಯರು ಎಳ್ಳ ಅಮವಾಸ್ಯೆ ಹಬ್ಬಕ್ಕಾಗಿ ಸಜ್ಜಿ ಕಡಬು, ಹೂರಣದ ಕಡಬು, ಹೂರಣದ ಹೋಳಗಿ, ಶೇಂಗಾದ ಹೋಳಗಿ, ಸಜ್ಜಿ ರೊಟ್ಟಿ, ಚಪಾತಿ, ವಿವಿಧ ತರಹದ ಕಾಳು, ತರಕಾರಿ ಪಲ್ಯೆ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ನಂತರ ಊರ ದೇವರಿಗೆ ನೈವೇದ್ಯ ಹಿಡಿದು ಬುತ್ತಿ ಕಟ್ಟಿಕೊಂಡು ತಮ್ಮ ತಮ್ಮ ಹೊಲಗಳಿಗೆ ಎತ್ತಿನ ಬಂಡಿ, ಟ್ರ್ಯಾಕ್ಟರ್, ಟಂಟಂ ಸೇರಿದಂತೆ ಇತರೇ ವಾಹನಗಳ ಮೂಲಕ ಕುಟುಂಬ ಸದಸ್ಯರು ಹಾಗೂ ತಮ್ಮ ಬಂಧು ಬಳಗದೊಂದಿಗೆ ಹೊಲಗಳಿಗೆ ತೆರಳಿದರು. ಹೊಲದಲ್ಲಿ ಬೆಳೆದು ನಿಂತ ಬೆಳೆಗೆ , ಹೊಲದ ಬನ್ನಿ ಮರದ ಕೆಳಗಿರುವ ಲಕ್ಷ್ಮೀದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮನೆಯಿಂದ ತಂದ ನೈವೇದ್ಯವನ್ನು ಎಡೆ ಹಿಡಿದು ನಂತರ ಭೂತಾಯಿಗೆ ಧನ್ಯತಾ ಭಾವದೊಂದಿಗೆ ಸಾಮೂಹಿಕ ಚೆರಗ ಚೆಲ್ಲಿದರು. ನಂತರ ಸಾಮೂಹಿಕ ಭೋಜನದಲ್ಲಿ ಎಲ್ಲರೂ ಎಳ್ಳ ಅಮವಾಸ್ಯೆಯ ಊಟದ ಸವಿಯನ್ನು ಸವಿದರು.ಜೋಳದ ಬೆಳೆ ಇದ್ದರೆ ಎಳ್ಳ ಅಮವಾಸ್ಯೆಯ ಸಂಭ್ರಮವೇ ಬೇರೆ ಎಂದು ರೈತರೊಬ್ಬರು ಹೇಳಿದರು.
ಊಟದ ನಂತರ ಮಕ್ಕಳು ವಿವಿಧ ರೀತಿಯ ಆಟಗಳನ್ನು ಆಡುವದರೊಂದಿಗೆ ಸಂತಸಗೊಂಡರೆ ಹಿರಿಯರು ಕುಶಲೋಪರಿಯನ್ನು ಹಂಚಿಕೊಂಡರು. ಸಂಜೆ ಸೂರ್ಯಾಸ್ತ ಸಮಯ ಹತ್ತಿರವಾಗುತ್ತಿದ್ದಂತೆ ಮತ್ತೊಮ್ಮೆ ಭೂತಾಯಿಗೆ ನಮಸ್ಕರಿಸಿ ತಮ್ಮ ತಮ್ಮ ಮನೆ ಕಡೆಗೆ ತೆರಳಿದ ದೃಶ್ಯ ಕಂಡು ಬಂದಿತು.