ಕೃಷಿಕರ ಬದುಕಿಗೆ ಮನರೇಗಾ ವರದಾನ
ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು : ಕೃಷಿ ಹೊಂಡ, ತೆರೆದ ಬಾವಿ ಹಾಗೂ ಬದು ನಿರ್ಮಾಣ ಸೇರಿದಂತೆ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೃಷಿ ಚಟುವಟಿಕೆ ಹಾಗೂ ಪಶುಸಂಗೋಪನೆಗೆ ಪೂರಕವಾಗಿ ಹಲವು ಕಾಮಗಾರಿಗಳ ಪ್ರಯೋಜನ ಪಡೆದುಕೊಳ್ಳುವ ಮೂಲಕ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಐಇಸಿ ಸಂಯೋಜಕಿ ಎಸ್.ಬಿ.ಜವಳಿ ಹೇಳಿದರು.
ಬೆಳಗಾವಿ ಜಿಲ್ಲಾ ಪಂಚಾಯಿತಿ ಹಾಗೂ ಕಿತ್ತೂರು ತಾಲೂಕು ಪಂಚಾಯಿತಿ ವತಿಯಿಂದ ಐಇಸಿ ಚಟುವಟಿಕೆಯಡಿ ಚನ್ನಮ್ಮನ ಕಿತ್ತೂರ ತಾಲೂಕಿನ ಉಗರಖೋಡ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ರೈತ ದಿನಾಚರಣೆ’ ಹಾಗೂ ‘ಜಲ ಸಂಜೀವಿನಿ- ರೈತ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ, ತೆರೆದ ಬಾವಿ, ಬದು ನಿರ್ಮಾಣ, ಜಮೀನು ಸಮತಟ್ಟು, ಅಲ್ಪ ಆಳದ ಬಾವಿ, ಕುರಿ ಶೆಡ್ ಹಾಗೂ ದನದ ಶೆಡ್‌ಗಳನ್ನು ನಿರ್ಮಿಸಿಕೊಳ್ಳಬೇಕು. ಅಲ್ಲದೇ, ಗ್ರಾಮೀಣ ಜನರು ಕಾಮಗಾರಿಯಲ್ಲಿ ಕೆಲಸ ಮಾಡಿ ಗೌರವಯುತ ಕೂಲಿಯನ್ನು ಪಡೆಯಬಹುದಾಗಿದ್ದು, ಕೃಷಿಕರಿಗೆ ವರದಾನವಾಗಿದೆ, ಮಹಿಳೆಯರು ಮತ್ತು ಪುರುಷರು ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರೈತರಿಗೆ ಸಿಹಿ ವಿತರಿಸಿ, ಸಂಭ್ರಮಿಸಲಾಯಿತು. ಸದಸ್ಯ ಬಾಬು ಹುರಕನ್ನವರ, ಕಾರ್ಯದರ್ಶಿ ಆರ್.ಕೆ.ವನ್ನೂರ, ಸಿಬ್ಬಂದಿ ಬಿ.ಎ.ಅಂಬಡಗಟ್ಟಿ. ಎ.ಜಿ.ಮಾಂಡವೆ, ಎಸ್.ಎಸ್.ತೆಳಗಡೆ, ಬಿಎಫ್‌ಟಿ ಬಸವರಾಜ ಹೊಸಮನಿ, ಎಂ.ಐ.ತಿಗಡಿ ಹಾಗೂ ಕಸ್ತೂರಿ ಚಕಡಿ ಸೇರಿದಂತೆ ಇತರರಿದ್ದರು.