ಇಂಡಿ ರಿಂಗ್ ರೋಡ್ ಸರಕಾರದ ಮಟ್ಟದಲ್ಲಿ ಪ್ರಸ್ತಾಪ : ಯಶವಂತರಾಯ ಗೌಡ
ಯುವ ಭಾರತ ಸುದ್ದಿ ಇಂಡಿ: ಪಟ್ಟಣದ ಹೊರಭಾಗದಲ್ಲಿ ರಿಂಗ್ ರಸ್ತೆ (ಬೈಪಾಸ್ ರಸ್ತೆ) ನಿರ್ಮಾಣ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ.ಪ್ರಸ್ತಾವನೆಗೆ ಈಗಾಗಲೆ ರಾಷ್ಟ್ರೀಯ ಹೆದ್ದಾರಿ ವಲಯ ವ್ಯಾಪ್ತಿಯಿಂದ ರಾಷ್ಟ್ರೀಯ ಹೆದ್ದಾರಿ-೫೪೮ಬಿ ಕಿಮೀ.೦.೦೦ ದಿಂದ ಮಹಾರಾಷ್ಟ್ರ
ಗಡಿ ಮುರಮ್ ದಿಂದ ಕಿ,ಮೀ.೧೦೬ ವರೆಗೆ ಗಟ್ಟಿ ಬಾಹುಗಳುಳ್ಳ ದ್ವೀಪಥದ ರಸ್ತೆಯನ್ನು ಅಭಿವೃದ್ದಿ ಪಡಿಸುವ ಕಾಮಗಾರಿಯಲ್ಲಿ ಸೇರಿರುತ್ತದೆ.
ಕೇಂದ್ರ ಭೂ ಸಾರಿಗೆ ಮಂತ್ರಾಲಯದ ೨೦೨೨-೨೩ ನೇ ಸಾಲಿನ ವಾರ್ಷಿಕ ಯೋಜನೆಯಡಿ ೮೭೫ ಕೋಟಿ ರೂ.ಗಳಿಗೆ ಅನುಮೋದನೆ ದೊರೆತ್ತಿದ್ದು,ಕಾಮಗಾರಿಗೆ ತಾಂತ್ರೀಕ,ಆಡಳಿತಾತ್ಮಕ ಹಾಗೂ ಆರ್ಥಿಕ ಅನುಮೋದನೆ ಕೋರಿ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ಅಂದಾಜು ೯೯೮.೧೭ ಕೋಟಿಗಳಿಗೆ ದೇಹಲಿಯ ಕೇಂದ್ರ ಭೂಸಾರಿಗೆ ಮಂತ್ರಾಲಯಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ಲೋಕೊಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರು ಶಾಸಕ ಯಶವಂತರಾಯಗೌಡ ಪಾಟೀಲ ಅವರು ಕೇಳಿದ ಚುಕ್ಕೆಗುರುತ್ತಿಲ್ಲದ ಪ್ರಶ್ನೆಗೆ ಉತ್ತರಿಸಿದರು.
ಶಾಸಕ ಯಶವಂತರಾಯಗೌಡ ಪಾಟೀಲ ಅವರು,ಇಂಡಿ ಪಟ್ಟಣದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾವನೆ ಸರ್ಕಾರಕ್ಕಿದೆಯೇ,ಪ್ರಸುಸ್ತ ಪ್ರಸ್ತಾವನೆ ಯಾವ ಹಂತದಲ್ಲಿ ಇದೆ.ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ,ಕಾಮಗಾರಿ ಯಾವಾಗ ಪ್ರಾರಂಭಿಸಲಾಗುವುದು,ಯೋಜನಾ ವೆಚ್ಚ ಕುರಿತು ವಿವರ ನೀಡುವ ಎಂದು ವಿಧಾನಸಭೆ ಅಧಿವೇಶನದಲ್ಲಿ ಚುಕ್ಕೆಗುರುತಿಲ್ಲದ ಪ್ರಶ್ನೆಯನ್ನು ಲೋಕೊಪಯೋಗಿ ಸಚಿವ ಸಿ.ಸಿ.ಪಾಟೀಲ ಅವರಿಗೆ ಪ್ರಶ್ನೆ ಕೇಳಿದ್ದರು.
ಮಹಾರಾಷ್ಟ್ರ ಗಡಿ ಮುರಮ್‌ದಿಂದ ವಿಜಯಪುರ ನಗರ,ಕರಜಗಿ,ಮಾಶಾಳ,ಮಣ್ಣೂರ,ಇಂಡಿ,ಅಥರ್ಗಾ,ನಾಗಠಾಣ,ವಿಜಯಪುರ ಸೇರಿ ೧೦೬ ಕಿ.ಮೀ ರಸ್ತೆ ಉದ್ದದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು,ಇಂಡಿ ಪಟ್ಟಣದ ಬೈಪಾಸ್ ರಸ್ತೆಗೆ ೪೨.೨೮ ಕೋಟಿ ಆಗಿರುತ್ತದೆ ಎಂದು ಸಚಿವರು ಉತ್ತರಿಸಿದ್ದಾರೆ.
ರಾಜ್ಯದಲ್ಲಿ ಮದ್ಯಪಾನ ಚಟದಿಂದ ಬಡ ಮತ್ತು ಮದ್ಯಮ ವರ್ಗಗಳ ಕುಟುಂಬಗಳ ಜೀವನ ಹಾಳಾಗುತ್ತಿರುವುದು,ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಮದ್ಯಪಾನ ನಿಷೇಧ ಮಾಡುವಂತೆ ಬೇಡಿಕೆ ಇಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ,ಬೇರೆ ರಾಜ್ಯಗಳಲ್ಲಿ ಮದ್ಯಪಾನ ನಿಷೇಧ ಮಾಡಿ ಯಶಸ್ವಿಯಾಗಿರುವುದು ಸರ್ಕಾರ ಗಮನಿಸಿದೆಯೇ,ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡುವ ಆಸಕ್ತಿ ಸರ್ಕಾರಕ್ಕೆ ಇದೆಯೇ ಎಂಬುದು ಸ್ಪಷ್ಟನಿಲುವು ನೀಡುವ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ ಅವರು ಬೆಳಗಾವಿ ಅಧಿವೇಶನದಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರಿಗೆ ಚುಕ್ಕೆಗುರುತ್ತಿಲ್ಲದ ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಉತ್ತರಿಸಿ,ಸರ್ಕಾರದ ವತಿಯಿಂದ ಸ್ಥಾಪಿತವಾಗಿರುವ ಮದ್ಯದಂಗಡಿಗಳಿಂದ ಗುಣಮಟ್ಟದ ಮದ್ಯ ಪೊರೈಕೆ ಮಾಡಲಾಗುತ್ತಿದ್ದು,ಇದರಿಂದ ಮದ್ಯ ಬಯಸುವ ಪಾನೀಕರಿಗೆ ಉತ್ತಮ ಗುಣಮಟ್ಟದ ಮದ್ಯ ದೊರೆಯುವಂತಾಗಿದೆ.ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲ ಎಂದು ಉತ್ತರಿಸಿದರು.