ಸಿದ್ದೇಶ್ವರ ಶ್ರೀಗಳಿಗೆ ಭಾರತ ರತ್ನಕ್ಕೆ ಒತ್ತಾಯ
ಯುವ ಭಾರತ ಸುದ್ದಿ ವಿಜಯಪುರ :
ಶತಮಾನದ ಸಂತ , ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ವಿಜಯಪುರ ಸೇವಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕು ಎಂಬ ಕೂಗು ಕೇಳಿಬಂದಿದೆ.
ವಿಜಯಪುರದಲ್ಲಿ ಮಾತನಾಡಿರುವ ಇಳಕಲ್ ವಿಜಯಮಹಾಂತೇಶ ಮಠದ ಗುರುಮಹಾಂತ ಶ್ರೀಗಳು , ಸಿದ್ದೇಶ್ವರ ಶ್ರೀಗಳು ನಾಡಿನ ಮಹಾನ್ ಸಂತರು. ಯಾವುದೇ ಜಾತಿಭೇದ, ಪಂಥವಿಲ್ಲದೇ ಮನುಕುಲದ ಏಳಿಗೆ ಶ್ರಮಿಸಿದ್ದಾರೆ. ಆದ್ದರಿಂದ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕು. ಇದರಿಂದ ಪ್ರಶಸ್ತಿಗೂ ಗೌರವ ಹೆಚ್ಚಾಗುತ್ತದೆ ಎಂದಿದ್ದಾರೆ.
2018 ರಲ್ಲಿ ಕೇಂದ್ರ ಸರ್ಕಾರ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಪದ್ಮಶ್ರೀ ಪ್ರಶಸ್ತಿ ನೀಡುವ ಘೋಷಣೆ ಮಾಡಿತ್ತು. ಆದರೆ, ಸ್ವಾಮೀಜಿಗಳು ನಯವಾಗಿ ಪ್ರಶಸ್ತಿಯನ್ನು ನಿರಾಕರಿಸಿದ್ದರು. ನಾನು ಸನ್ಯಾಸಿ. ನನಗೇಕೆ ಪ್ರಶಸ್ತಿ ಎಂದು ಹೇಳಿದ್ದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಸಹ ಗೌರವ ಡಾಕ್ಟರೇಟ್ ನೀಡಲು ಮುಂದಾದಾಗ ಅದನ್ನೂ ನಿರಾಕರಿಸಿದ್ದರು. ಅಷ್ಟೊಂದು ಸರಳತೆಯ ಪ್ರತಿರೂಪವಾಗಿ ಸಿದ್ದೇಶ್ವರರು ಬದುಕಿದ್ದರು. ಅವರ ಜೀವನ ಶೈಲಿ ಕೋಟ್ಯಂತರ ಭಕ್ತರಿಗೆ ಮಾದರಿಯಾಗಿತ್ತು.