ಕಾರ್ಮಿಕರ ಏಳಿಗೆಗಾಗಿ ಇಲಾಖೆ ನಿರಂತರವಾಗಿ ಶ್ರಮಿಸಲಿದೆ; ವೆಂಕಟೇಶ ಶಿಂದಿಹಟ್ಟಿ
ಯುವ ಭಾರತ ಸುದ್ದಿ ಬೆಳಗಾವಿ:
ರಾಷ್ಟ್ರದ ಪ್ರಗತಿಯಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖವಾದದ್ದು, ಪ್ರಸ್ತುತ ದಿನಮಾನಗಳಲ್ಲಿ ಅವರ ಸೇವೆಯನ್ನು ಪರಿಗಣಿಸಿ ಸರ್ಕಾರ ಸೌಲಭ್ಯಗಳ ಭತ್ಯೆ ಹೆಚ್ಚಿಸಿರುವುದು ಸ್ವಾಗತಾರ್ಹ ನಡೆ ಎಂದು ಕಾರ್ಮಿಕ ಉಪ ಆಯುಕ್ತ ವೆಂಕಟೇಶ ಅಪ್ಪಯ್ಯ ಶಿಂದಿಹಟ್ಟಿ ಸಂತಸ ವ್ಯಕ್ತಪಡಿಸಿದರು.
ನಗರದ ಕಾರ್ಮಿಕ ಭವನದಲ್ಲಿ ರಾಜಾ ಲಖಮಗೌಡ ಕಾನೂನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ “ಕಾರ್ಮಿಕ ರಕ್ಷಣೆಯಲ್ಲಿ ಕಾನೂನು” ಎಂಬ ಎರಡು ದಿನಗಳ ಕಾರ್ಯಾಗಾರದಲ್ಲಿ ಉಪನ್ಯಾಸ ಮಾರ್ಗದರ್ಶಕರಾಗಿ ಭಾಗವಹಿಸಿದ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಮಿಕರ ಅಹವಾಲುಗಳಿಗೆ ವಕೀಲರು ಧ್ವನಿಯಾದಾಗ; ಸಮಸ್ಯೆಗೆ ಶೀಘ್ರವೇ ಪರಿಹಾರ ದೊರೆಯುತ್ತದೆ. ಹಾಗಾಗಿ ಮುಂದಿನ ವೃತ್ತಿ ಜೀವನದಲ್ಲಿ ಕಾರ್ಮಿಕರ ಸೇವೆಗಾಗಿ ಸಮಯವನ್ನು ಮೀಸಲಿಡಲು ಸಲಹೆ ನೀಡಿದರು.
ಕಾರ್ಯಗಾರದಲ್ಲಿ ಇಲಾಖೆಯ ಪ್ರಮುಖ ಕರ್ತವ್ಯ ಹಾಗೂ ಯೋಜನೆಗಳ ಬಗ್ಗೆ ಸ್ಥೂಲವಾಗಿ ಮಾಹಿತಿ ನೀಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ತರನಂ ಬೆಂಗಾಲಿ ವಿದ್ಯಾರ್ಥಿಗಳೊಂದಿಗೆ ಔಪಚಾರಿಕವಾಗಿ ಸಮಾಲೋಚಿಸಿದರು.
ಕಾರ್ಯಾಗಾರದಲ್ಲಿ ಉಪನ್ಯಾಸಕ ಪ್ರೊ. ಚೇತನ್ ಕುಮಾರ್ ಎಂ, ಕಾರ್ಯನಿರ್ವಾಹಕ ಅಧಿಕಾರಿಯಾದ ಶಿವಾನಂದ ಕೊಳಕಿ, ಪ್ರಥಮ ದರ್ಜೆ ಸಹಾಯಕ ಎಲ್.ಎಸ್. ಭೂಷಣ್ಣನವರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.