Breaking News

ಬೆಳಗಾವಿ ರಾಮಕೃಷ್ಣ ಮಿಶನ್ ಶ್ರೀ ವಿಶ್ವಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ಸಂಪನ್ನ : ಭಗವಂತನನ್ನು ನಂಬಿದರೆ ಎಂಥ ಕಷ್ಟದಲ್ಲೂ ಕೈ ಬಿಡಲಾರ- ಸ್ವಾಮಿ ಮಂಗಳನಾಥನಂದಜೀ ಮಹಾರಾಜ್

Spread the love

ಬೆಳಗಾವಿ ರಾಮಕೃಷ್ಣ ಮಿಶನ್ ಶ್ರೀ ವಿಶ್ವಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ಸಂಪನ್ನ : ಭಗವಂತನನ್ನು ನಂಬಿದರೆ ಎಂಥ ಕಷ್ಟದಲ್ಲೂ ಕೈ ಬಿಡಲಾರ- ಸ್ವಾಮಿ ಮಂಗಳನಾಥನಂದಜೀ ಮಹಾರಾಜ್

(ರಾಮನಂಥ ಪುತ್ರ, ಸುಗ್ರೀವನಂಥ ಮಿತ್ರ, ಭರತನಂಥ ತಮ್ಮ ಪ್ರಪಂಚದಲ್ಲಿ ಯಾರಿಗೂ ಸಿಗಲ್ಲ : ಸ್ವಾಮಿ ಮಂಗಳಾನಾಥನಂದಜೀ ಮಹಾರಾಜ್)

ಯುವ ಭಾರತ ಸುದ್ದಿ ಬೆಳಗಾವಿ :
ಆಧ್ಯಾತ್ಮಿಕತೆ ಬ್ರಹ್ಮಚರ್ಯ ಪರಿಪಾಲನೆಯಲ್ಲಿ ಅಡಗಿದೆ. ಭಗವಂತನಲ್ಲಿ ಅಚಲವಾದ ಶ್ರದ್ಧೆ ಇಟ್ಟು ಜೀವಿಸಿದರೆ ಭಗವಂತ ಎಂತಹ ಕಷ್ಟದಲ್ಲೂ ಕೈಬಿಡುವುದಿಲ್ಲ . ಭಗವಂತನನ್ನು ನಂಬು. ಭಗವಂತನು ನನ್ನವನೆಂದು ಭಾವಿಸು. ಆಗ ಭಗವಂತ ತನ್ನದೆಲ್ಲವನ್ನು ಧಾರೆ ಎರೆಯುತ್ತಾನೆ ಎಂದು ಬೆಂಗಳೂರು ಸಮೀಪದ ಶಿವನಹಳ್ಳಿ ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ಮಂಗಳನಾಥನಂದಜೀ ಮಹಾರಾಜ್ ಹೇಳಿದರು.

ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮದ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವ ಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ ಸ್ಮರಣಾರ್ಥ 19 ನೇ ವಾರ್ಷಿಕೋತ್ಸವದ ಅಂಗವಾಗಿ ಮೂರನೇ ಮತ್ತು ಕೊನೆಯ ದಿನವಾದ ಭಾನುವಾರ ನಡೆದ ಆಧ್ಯಾತ್ಮಿಕ ಸಮ್ಮೇಳನದಲ್ಲಿ ಅವರು ಆಧ್ಯಾತ್ಮಿಕ ಜೀವನದ ಮೂಲಭೂತ ತತ್ವಗಳು ವಿಷಯವಾಗಿ ಮಾತನಾಡಿದರು.

ಭಗವಂತನ ನಾಮಸ್ಮರಣೆಗಿಂತ ಮತ್ತೊಂದು ದೊಡ್ಡ ಕೆಲಸ ಇಲ್ಲ. ಭಗವಂತನ ಮೇಲಿನ ನಂಬಿಕೆಯಿಂದ ಜೀವನ ನಡೆಸಿದರೆ ಆತ ನಮ್ಮನ್ನು ಎಂದೂ ಕೈ ಬಿಡಲು ಸಾಧ್ಯವೇ ಇಲ್ಲ. ಭಗವಂತನ ಜೊತೆಗೆ ನಮ್ಮ ಸಂಬಂಧ ಗಾಢವಾಗಿರಿಸಿಕೊಳ್ಳಬೇಕು
ಎಂದು ಒತ್ತಿ ಹೇಳಿದರು.

ಭಗವಂತ ಸರ್ವಶಕ್ತ. ಆತ ಇಡೀ ಪ್ರಪಂಚವನ್ನೇ ನೋಡಿಕೊಳ್ಳುತ್ತಾನೆ. ಭಗವಂತನ ನಾಮ ಸ್ಮರಣೆ ಅಚಲವಾಗಿದ್ದು ಅವನಲ್ಲಿ ಲೀನವಾಗಬೇಕು ಎಂದರು.

ರಾಮಾಯಣ ಹಾಗೂ ಮಹಾಭಾರತ ಕಥೆಗಳನ್ನು ಉದ್ಘರಿದ ಅವರು,
ರಾಮನಂಥ ಪುತ್ರ, ಸುಗ್ರೀವನಂಥ ಮಿತ್ರ, ಭರತನಂಥ ತಮ್ಮ ಪ್ರಪಂಚದಲ್ಲಿ ಯಾರಿಗೂ ಸಿಗುವುದಿಲ್ಲ. ಇಂಥವರ ಆದರ್ಶವನ್ನು ಜೀವನದಲ್ಲಿ ಪರಿಪಾಲನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಪೂಜ್ಯ ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್ ಅವರು ಸ್ವಾಮಿ ವಿವೇಕಾನಂದರ ಜೀವನ ದೃಷ್ಟಿ ಎಂಬ ವಿಷಯದ ಕುರಿತು ಮಾತನಾಡಿ, ನಾವು ಜೀವನದ ಯುದ್ಧವನ್ನು ಎಚ್ಚರದಿಂದ ಮಾಡಬೇಕು. ಇದರಲ್ಲಿ ಎರಡು ರೀತಿಯಾದ ಅಂದರೆ ಬಾಹ್ಯ ಮತ್ತು ಆಂತರಿಕ ಶಕ್ತಿಗಳೊಡನೆ ಹೋರಾಡಬೇಕು. ಆಂತರಿಕ ಶಕ್ತಿ ಅರಿತು ಅದಕ್ಕೆ ಸಕಾರಾತ್ಮಕತೆ , ಪ್ರೀತಿ , ಆಧ್ಯಾತ್ಮ ಎಂಬ ನೀರು ಗೊಬ್ಬರ ಹಾಕಿ ಬೆಳೆಸಿ ಎಂದು ತಿಳಿಸಿದರು.

ಹೋರಾಟವೇ ಜೀವನ. ಹೋರಾಟ ಇಲ್ಲದಿದ್ದರೆ ಅದು ಸಾವು. ಜೀವನವಿಡೀ ಹೋರಾಟ ನಡೆಸುತ್ತಿರಬೇಕು. ಜೀವನದಲ್ಲಿ ಎದುರಾಗುವ ಹೋರಾಟದಲ್ಲಿ ಕುಗ್ಗದೆ ಅದನ್ನು ಎದುರಿಸುವ ಛಲ ನಮ್ಮದಾಗಬೇಕು. ಅಧ್ಯಾತ್ಮಿಕ ಹಂತದಲ್ಲೂ ಹೋರಾಟ ನಡೆಯುತ್ತದೆ. ನಮ್ಮ ಚಿತ್ತ ವೃತ್ತಿ ಜತೆಗೂ ಹೋರಾಟ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ನಾವು ಆಂತರಿಕವಾಗಿ ಶಕ್ತಿಶಾಲಿಯಾದರೆ ನಮ್ಮನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ.
ಹೊರಗಿನ ತೊಂದರೆ, ತಾಪತ್ರಯ ಏನೇ ಬಂದರೂ ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು. ಆ ಬಗ್ಗೆಯೇ ಚಿಂತನೆ ಮಾಡುತ್ತ ಇದ್ದರೆ ಮನಸ್ಸು ಕದಡಿ ಹೋಗುತ್ತದೆ. ಎಲ್ಲಾ ದೃಷ್ಟಿಯಿಂದ ನಮಗೆ ವಿವೇಕಾನಂದರಂತೆ ಆಧ್ಯಾತ್ಮಿಕ, ಬುದ್ದಿಶಕ್ತಿ, ಭೌತಿಕ, ಶಾರೀರಿಕ, ಚಾರಿತ್ರಿಕ ಶಕ್ತಿಗಳು ಬರಬೇಕು.
ಎಲ್ಲಕ್ಕಿಂತ ಶ್ರೇಷ್ಠ ಅಧ್ಯಾತ್ಮಿಕ ಶಕ್ತಿ. ಪವಿತ್ರತೆಯು ಸಹಾ ಇನ್ನೊಂದು ಬಲವಾದ ಶಕ್ತಿ.
ಇತರರಿಂದ ಉತ್ತಮವಾದ ಅಂಶಗಳನ್ನು ಕಲಿಯಬೇಕು. ಆದರೆ, ಅದನ್ನೇ ಅನುಸರಿಸಬಾರದು. ಹೊಸದನ್ನು ಸ್ವೀಕರಿಸಬೇಕು. ಆದರೆ, ಅದೇ ನಮ್ಮದಾಗಬಾರದು. ನಮ್ಮ ಬೆಳವಣಿಗೆ ದೃಷ್ಟಿಗೆ ಪೂರಕವಾಗಿ ನಾವು ಜೀವನ ನಡೆಸಬೇಕು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ನಾವು ಸಂಪೂರ್ಣವಾಗಿ ಮೊಬೈಲ್ ವಶವಾಗಿದ್ದೇವೆ. ಆಸ್ಪತ್ರೆಯಲ್ಲೂ
ಮೊಬೈಲ್ ನಿಂದ ಹೊರ ಬರುವುದು ಹೇಗೆ ಎಂಬ ಬಗ್ಗೆ ವಿಶೇಷವಾದ ವಿಭಾಗ ತೆರೆದಿರುವುದನ್ನು ನೋಡಬಹುದು.
ಜೀವನದ ಯುದ್ಧವನ್ನು ಎಚ್ಚರಿಕೆಯಿಂದ ಮಾಡಬೇಕು.
ಆಧ್ಯಾತ್ಮಿಕ ಪರಿಶ್ರಮದಿಂದ ಜೀವನ ನಿರ್ವಹಿಸಬೇಕು ಎಂದು ಹೇಳಿದರು.

ನಿಡಸೋಸಿಯ ಶ್ರೀ ದುರುದುಂಡೇಶ್ವರ ಸಿದ್ದ ಸಂಸ್ಥಾನ ಮಠದ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ದೇಹವೆಂಬ ಬಂಗಾರದ ಪಾತ್ರಯೊಳಗಿನ ಮುತ್ತು ರತ್ನಗಳು ಸಿಗಬೇಕಾದರೆ ಕಾಮ, ಕ್ರೋಧ, ಮೋಹ, ಮಾಯೆ, ಮದ, ಮತ್ಸರ, ಲೋಭಗಳೆಂಬ ಮುಚ್ಚಳಿಕೆಗಳನ್ನು ತೆರೆಯಬೇಕು. ಅದರೊಂದಿಗೆ ಸತ್ಸಂಗ ಪ್ರವಚನಗಳಿಂದ ಶಕ್ತಿಗಳನ್ನು ಪಡೆಯಬೇಕು ಎಂದು ಆಶೀರ್ವದಿಸಿದರು.

ಜಗತ್ತಿನಲ್ಲಿ ಅಧ್ಯಾತ್ಮಿಕತೆ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ. ವಿದೇಶಿಗರು ಭಾರತಕ್ಕೆ ಬಂದು ಅಧ್ಯಾತ್ಮಿಕತೆಯನ್ನು ತಿಳಿದುಕೊಂಡು ಹೋಗುತ್ತಾರೆ.
ಜಗತ್ತಿನಲ್ಲಿ ಮುತ್ತು ರತ್ನದಂಥ ವಿಚಾರ ಬಿತ್ತಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು. ವಿವೇಕಾನಂದರನ್ನು ನಾವು ಎಷ್ಟು ಜನ ತಿಳಿದುಕೊಂಡಿದ್ದಾರೆ.
ದೀನ ದಲಿತರ ಬಗ್ಗೆ ವಿವೇಕಾನಂದರು ಹೆಚ್ಚಾಗಿ ತಿಳಿದು ಅವರ ಬಗ್ಗೆಯೇ ಬರೆದಿದ್ದರು. ನಮ್ಮಲ್ಲಿನ ಮುತ್ತು ರತ್ನ ಹೊರಗೆ ತರಲು ಪ್ರಯತ್ನಿಸಿದರು. ನಮ್ಮಲ್ಲಿ ಸಾಕಷ್ಟು ಮುತ್ತು ರತ್ನಗಳಿವೆ. ಆದರೆ, ನಾವೀಗ ಮೊಬೈಲ್ ಕಾಲದಲ್ಲಿ ಇದ್ದೇವೆ. ನಮ್ಮಲ್ಲಿ ಇರುವ ಮುತ್ತುರತ್ನವನ್ನು ತೆಗೆಯೋಣ ಎಂದು ಹೇಳಿದರು.

ಬೆಳಗಾವಿ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದಜೀ ಮಹಾರಾಜ್ ಅವರು ಸ್ವಾಗತಿಸಿ , ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ಕಾರ್ಯಕ್ರಮಕ್ಕೆ ಬೆಳಗಾವಿಯ ವಿವಿಧ ಭಾಗಗಳಿಂದ 750 ಕ್ಕೂ ಹೆಚ್ಚು ಸದ್ಭಕ್ತರು ಭಾಗವಹಿಸಿದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

three × five =