ಬೆಳಗಾವಿಯಲ್ಲಿ ಕೆಎಎಸ್ ಅಧಿಕಾರಿ ಪತಿ ಆತ್ಮಹತ್ಯೆಗೆ ಶರಣು
ಯುವ ಭಾರತ ಸುದ್ದಿ ಬೆಳಗಾವಿ :
ಹಿಡಕಲ್ ಡ್ಯಾಮ್ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೇಷ್ಮಾ ತಾಳಿಕೋಟಿ ಅವರ ಪತಿ ಜಾಫರ ಪೀರಜಾದೆ ಸೋಮವಾರ ಮಧ್ಯಾಹ್ನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಫ್ ಡಿ ಎ (ಕಂದಾಯ ನಿರೀಕ್ಷಕ)ಜಾಫರ್ ಪೀರ್ಜಾದೆ ಎಂಬುವರು ಆತ್ಮಹತ್ಯೆಗೆ ಶರಣಾದವರು. ಅಣ್ಣನ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದು ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸಂಗಮೇಶ ನಗರದಲ್ಲಿರುವ ಸರಕಾರಿ ತರಬೇತಿ ಸಂಸ್ಥೆಯಲ್ಲಿ ಜಾಫರ್
ಪೀರಜಾದೆ ಕಂದಾಯ ನಿರೀಕ್ಷಕರಾಗಿದ್ದಾರೆ.
39 ವರ್ಷ ವಯಸ್ಸಿನ ಜಾಫರ್ ಹಲವು ವರ್ಷಗಳಿಂದ ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲಿ ತಲಾಠಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚಿಗಷ್ಟೇ ಬಡ್ತಿ ಪಡೆದು ಕಂದಾಯ ನಿರೀಕ್ಷಕರಾಗಿದ್ದರು.
ಪತ್ನಿ ರೇಷ್ಮಾ ತಾಳಿಕೋಟಿ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ. ಖಾನಾಪುರ ತಹಶೀಲ್ದಾರ್ ಆಗಿದ್ದ ರೇಷ್ಮಾ ಅವರು ಇತ್ತೀಚಿಗಷ್ಟೇ ಹಿಡಕಲ್ ಡ್ಯಾಮ್ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು. ಜಾಫರ್ ಅವರು ಕೆಲ ದಿನಗಳ ಹಿಂದೆ ಧಾರ್ಮಿಕ ಸ್ಥಳಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ಆದ ನಂತರ ಖಿನ್ನತೆಗೆ ಒಳಗಾಗಿ ಒಬ್ಬಂಟಿಯಾಗಿರುತ್ತಿದ್ದರು. ಮಾನಸಿಕವಾಗಿಯೂ ಅಸ್ವಸ್ಥರಾಗಿದ್ದರು ಎಂದು ತಿಳಿದುಬಂದಿದೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.