ಕೊನೆಗೂ ಬೆಳಗಾವಿ-ಧಾರವಾಡ ರೈಲು ಮಾರ್ಗ ಕೆಲಸ ಶುರು !
ಯುವ ಭಾರತ ಸುದ್ದಿ ಬೆಳಗಾವಿ :
ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಯೋಜನೆಗೆ ಮುಹೂರ್ತ ಕೂಡಿ ಬಂದಿದೆ. ಬಹು ಜನರ ಬೇಡಿಕೆಯ ನಿರೀಕ್ಷೆಯಾಗಿರುವ ಧಾರವಾಡ-ಬೆಳಗಾವಿ ನೇರ ಹೊಸ ರೈಲು ಮಾರ್ಗ ಯೋಜನೆಗೆ ಮುಹೂರ್ತ ಕೂಡಿ ಬಂದಿದ್ದು, ಮೊದಲ ಹಂತದಲ್ಲಿ ಕ್ಯಾರಕೊಪ್ಪ-ಮಮ್ಮಿಗಟ್ಟಿ ಮಧ್ಯೆ ಹಳಿ ನಿರ್ಮಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
ಧಾರವಾಡ-ಬೆಳಗಾವಿ ನೇರ ಹೊಸ ಮಾರ್ಗ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಸಿವಿಲ್ ಕಾಮಗಾರಿ ಶುರುವಾಗಲಿದೆ.
ಈಗಿರುವ ಕ್ಯಾರಕೊಪ್ಪವರೆಗಿನ ಬ್ರಾಡ್‌ಗೇಜ್ ಮಾರ್ಗ ಹೊರತುಪಡಿಸಿ ಅಲ್ಲಿಂದ ಮಮ್ಮಿಗಟ್ಟಿವರೆಗೆ 11.70 ಕಿ.ಮೀ. (ರೈಲ್ವೆ ಕಿ.ಮೀ. ಕೋಡ್ ಪ್ರಕಾರ 6100ರಿಂದ 17800) ಇಪಿಸಿ(ಎಂಜಿನಿಯರಿಂಗ್, ಪ್ರೊಕ್ಯುರ್‌ಮೆಂಟ್ ಮತ್ತು ಕನ್‌ಸ್ಟ್ರಕ್ಷನ್)ಮಾದರಿಯಲ್ಲಿ ಅಂದಾಜು 243.66 ಕೋಟಿ ರೂಪಾಯಿ ಗಳ ಯೋಜನೆ ವೆಚ್ಚದಲ್ಲಿ ಹೊಸ ಮಾರ್ಗ ನಿರ್ಮಿಸಲು ನಿರ್ಧರಿಸಿದೆ. ಈಗಾಗಲೇ ಟೆಂಡರ್ ಆಹ್ವಾನಿಸಿದ್ದು, ಜೂನ್ 6ಕ್ಕೆ ಬಿಡ್ ಓಪನ್ ಮಾಡಲಾಗುತ್ತದೆ. ಈ ಬಗ್ಗೆ ಎಲ್ಲ ಹಂತದ ಟೆಂಡರ್ ಪ್ರಕ್ರಿಯೆಗಳು ಮುಗಿದ ಬಳಿಕ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.
ಇನ್ನು 73 ಕಿಮೀ ದೂರದ ಹೊಸ ರೈಲು ಮಾರ್ಗ ನಿರ್ಮಾಣ ಯೋಜನೆಗೆ 828 ಎಕರೆ ಭೂಮಿ ಅಗತ್ಯವಿದ್ದು, ಭೂಸ್ವಾಧೀನ ಪ್ರಕ್ರಿಯೆ ಒಂದು ಹಂತಕ್ಕೆ ಬಂದಿದೆ. ಇದರಲ್ಲಿ ಧಾರವಾಡ ಜಿಲ್ಲೆಯ ವ್ಯಾಪ್ತಿಯ ರೈಲ್ವೆ ಮಾರ್ಗದ ಕಿ.ಮೀ. 7ರಿಂದ 26 ಕಿಮೀವರೆಗಿನ 256(91.46ಹೆಕ್ಟೇರ್) ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ಮಾರ್ಚ್ ತಿಂಗಳಲ್ಲಿ ಕರ್ನಾಟಕ ಸರಕಾರ ನೈರುತ್ಯ ರೈಲ್ವೆಗೆ ಹಸ್ತಾಂತರಿಸಲಾಗುತ್ತಿದೆ. ಇತ್ತ ಭೂಮಿ ಪಡೆಯುತ್ತಿದ್ದಂತೆ ಯೋಜನೆ ಚಟುವಟಿಕೆ ಆರಂಭಿಸಲಾಗುವುದು ಎಂದು ನೈರುತ್ಯ ರೈಲ್ವೆ ವಲಯ ಸಾರ್ವಜನಿಕ ಮುಖ್ಯ ಸಂಪರ್ಕ ಅಧಿಕಾರಿ(ಸಿಪಿಆರ್‌ಓ) ಅನೀಶ್ ಹೆಗಡೆ ತಿಳಿಸಿದ್ದಾರೆ.
2021-22ನೇ ಸಾಲಿನಲ್ಲಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ 463 ಕೋಟಿ ರೂಪಾಯಿ ಘೋಷಿಸಿದ್ದರು. ಅದೇ ರೀತಿ ರೈಲ್ವೆ ಇಲಾಖೆ ಕಳೆದ ವರ್ಷ 20 ಕೋಟಿ ಹಾಗೂ ಪ್ರಸಕ್ತ ವರ್ಷ 10 ಕೋಟಿ ರೂ. ಒದಗಿಸುವುದಾಗಿ ಪ್ರಕಟಿಸಿದೆ. ಈ ಯೋಜನೆಯು ಕ್ಯಾರಕೊಪ್ಪ, ಮುಮ್ಮಿಗಟ್ಟಿ, ತೇಗೂರು, ಕಿತ್ತೂರು, ಹುಲಿಕಟ್ಟಿ, ಎಂ.ಕೆ.ಹುಬ್ಬಳ್ಳಿ, ಬಾಗೇವಾಡಿ, ಕಣವಿ ಕರವಿನಕೊಪ್ಪ, ಮತ್ತು ದೇಸೂರು ಗ್ರಾಮದಲ್ಲಿ ನಿಲ್ದಾಣಗಳನ್ನು ಹೊಂದಲಿದೆ. ಕ್ಯಾರಕೊಪ್ಪ ಮತ್ತು ದೇಸೂರನಲ್ಲಿ ಜಂಕ್ಷನ್ ನಿರ್ಮಿಸಲಾಗುತ್ತದೆ.
ಧಾರವಾಡ-ಬೆಳಗಾವಿ ನೇರ ಹೊಸ ಮಾರ್ಗ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಸಿವಿಲ್ ಕಾಮಗಾರಿ ಶುರುವಾಗಲಿದೆ.