Breaking News

ಹಣಕಾಸಿನ ನಿರ್ವಹಣೆಯ ಅರಿವು ಇಂದಿನ ಯುವಜನತೆಗೆ ಅತ್ಯಗತ್ಯ : ಪ್ರೊ. ರಾಮಚಂದ್ರಗೌಡ

Spread the love

ಹಣಕಾಸಿನ ನಿರ್ವಹಣೆಯ ಅರಿವು ಇಂದಿನ ಯುವಜನತೆಗೆ ಅತ್ಯಗತ್ಯ : ಪ್ರೊ. ರಾಮಚಂದ್ರಗೌಡ

ಯುವ ಭಾರತ ಸುದ್ದಿ ಬೆಳಗಾವಿ :
ಹೂಡಿಕೆಯ ಮೂಲಭೂತ ವಿಶ್ಲೇಷಣೆ, ಉದ್ದಿಮೆ, ಕಂಪನಿಯ ವ್ಯವಹಾರ, ಅದರ ಬೆಳವಣಿಗೆಯ ನಿರೀಕ್ಷೆಗಳು, ಅದರ ಲಾಭ, ಅದರ ಸಾಲ ಇತ್ಯಾದಿಗಳ ಅರಿವು ಇಂದಿನ ಯುವಜನತೆಗೆ ಅತ್ಯಗತ್ಯವಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಾಮಚಂದ್ರಗೌಡ ಅಭಿಪ್ರಾಯಪಟ್ಟರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕರಿಯರ್ ಗೈಡೆನ್ಸ್, ಟ್ರೇನಿಂಗ್ ಹಾಗೂ ಪ್ಲೇಸ್‌ಮೆಂಟ್ ಕೋಶ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ.ಗಳ ಸಂಯುಕ್ತಾಶ್ರಯದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ “ಯುವ ಜನತೆಗೆ ಹಣಕಾಸಿನ ಶಿಕ್ಷಣ” ಕುರಿತು ನಡೆದ ಎಂಟು ಸರಣಿ ಕಾರ್ಯಾಗಾರಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಹಣಕಾಸಿನ ನಿರ್ವಹಣೆಯು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅಂಶಗಳಲ್ಲಿ ಒಂದು. ಅರಿವಿನ ಕೊರತೆಯಿಂದ ಹೂಡಿಕೆಯಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಸಂಪೂರ್ಣ ತಿಳಿವಳಿಕೆಯಿಂದ ಹೂಡಿಕೆ ಮಾಡಿದಲ್ಲಿ ಹೆಚ್ಚು ಲಾಭದಾಯಕವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಹಣದಗಳಿಕೆ, ಉಳಿತಾಯ ಹಾಗೂ ಅದರ ಸರಿಯಾದ ಹೂಡಿಕೆ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದರಿಂದ ಮುಂದೆ ತಮ್ಮ ಭವಿಷ್ಯದ ಜೊತೆಗೆ ದೇಶದ ಭವಿಷ್ಯವನ್ನು ಉತ್ತಮಗೊಳಿಸಬಹುದು.
ಹಣಕಾಸು, ಹೂಡಿಕೆ, ಷೇರು ಮಾರುಕಟ್ಟೆ, ಬಂಡವಾಳ ಮುಂತಾದ ವಿಷಯಗಳು ವಾಣಿಜ್ಯ ಹಾಗೂ ವ್ಯವಹಾರ ಅಧ್ಯಯನದ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಮಾತ್ರ ಜ್ಞಾನ ಪಡೆಯುತ್ತಿದ್ದರು. ಸಮಕಾಲೀನ ಸಂದರ್ಭದಲ್ಲಿ ಹಣಕಾಸಿನ ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯಕತೆ ಇರುವುದರಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪ್ರಸಕ್ತ ಸಾಲಿನಿಂದ ಹೊಸ ಶಿಕ್ಷಣ ನೀತಿಯನ್ವಯ ಹಣಕಾಸಿನ ಶಿಕ್ಷಣ ಹೂಡಿಕೆಯ ಜಾಗೃತಿ ಎಂಬ ವಿಷಯವನ್ನು ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಬೋಧಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಜ್ಞಾನ ಪಡೆದುಕೊಂಡು ಹಣಕಾಸಿನ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸೆಬಿಯ ನೋಂದಾಯಿತ ಸಂಪನ್ಮೂಲ ವ್ಯಕ್ತಿ ಡಾ. ಮಹಾಂತೇಶ ಕುರಿ ಮಾತನಾಡಿ, ಈ ಸರಣಿ ಕಾರ್ಯಾಗಾರವು ಸೆಬಿ ಹಾಗೂ ಎನ್.ಐ.ಎಸ್.ಎಂ. ಪ್ರಾಯೋಜಕತ್ವದ ತರಬೇತಿ ಕಾರ್ಯಾಗಾರವಾಗಿದ್ದು, ‘ಕೋನಾ ಕೋನಾ ಶಿಕ್ಷಾ’ ಎಂಬ ಧ್ಯೇಯ ವಾಕ್ಯದಡಿ ಇಡಿ ರಾಷ್ಟ್ರದಾದ್ಯಂತ ಯುವ ಜನತೆಗೆ ಹಣಕಾಸಿನ ಶಿಕ್ಷಣ ನೀಡುವ ಉದ್ದೇಶವನ್ನು ಹೊಂದಿದ್ದು, ರಾ.ಚ.ವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಎಂಟು ಸರಣಿ ಕಾರ್ಯಾಗಾರಗಳಲ್ಲಿ ಒಟ್ಟು 650 ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವುದಾಗಿ ಶಿಬಿರದ ಕುರಿತು ವಿವರಿಸಿದರು.
ರಾ.ಚ.ವಿ.ಯ ಪ್ಲೇಸ್‌ಮೆಂಟ್ ವಿಭಾಗ ಮುಖ್ಯಸ್ಥ ಪ್ರೊ. ಆರ್. ಎನ್. ಮನಗೂಳಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಆರ್ಥಿಕ ಶಿಕ್ಷಣದ ಅವಶ್ಯಕತೆಯಿದೆ. ಆರ್ಥಿಕ ಶಿಕ್ಷಣವು ಇಂದು ಜೀವನದ ಕೌಶಲ್ಯಗಳಲ್ಲಿ ಒಂದಾಗಿ ಬೆರತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಶಂಕರ ತೇರದಾಳ ಅವರು ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯವು ಭೌತಿಕದ ಜೊತೆಗೆ ಬೌದ್ಧಿಕ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡುತ್ತಿದೆ. ಇಂತಹ ಕಾರ್ಯಾಗಾರಗಳ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಗಮನ ಕೊಡುತ್ತಿದೆ ಎಂದರು. ರಾ.ಚ.ವಿ.ಯ ಮೌಲ್ಯಮಾಪನ ಕುಲಸಚಿವ ಪ್ರೊ. ಶಿವಾನಂದ ಗೋರನಾಳೆ ಅವರು ಕಾರ್ಯಾಗಾರದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ, ಹಣಕಾಸು ಇಲ್ಲದೆ ಜೀವನ ನಿರ್ವಹಣೆ ಕಷ್ಟ. ನಾವು ಮಾಡುವ ಹೂಡಿಕೆ ಶಿಸ್ತುಬದ್ಧವಾಗಿ, ನಿಯಮಿತವಾಗಿದ್ದಲ್ಲಿ ಹೂಡಿಕೆ ಲಾಭದಾಯಕವಾಗಿರುತ್ತದೆ ಎಂದು ಹೇಳಿದರು.

ಕಾರ್ಯಾಗಾರಗಳ ಸಂಯೋಜಕ ಡಾ. ಮುಕುಂದ ಮುಂಡರಗಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸವಿತಾ ಮಲ್ಲನಹಟ್ಟಿ ಹಾಗೂ ಅಕ್ಷತಾ ಹೊಸಮನಿ ಪ್ರಾರ್ಥಿಸಿದರು. ವಿದ್ಯಾರ್ಥಿನಿಯರಾದ ತನುಜಾ ಸರದಾರ ಹಾಗೂ ಪ್ರೀತಿ ಹಂದಿಗುಂದ ನಿರೂಪಿಸಿದರು. ಉಪನ್ಯಾಸಕ ಹನುಮೇಶ ನಾಯ್ಕ ವಂದಿಸಿದರು. ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

1 × 2 =