ಘಟ್ಟಿ ಬಸವಣ್ಣ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಸಾಮಾನ್ಯ ವ್ಯಕ್ತಿಯ ಕಡೆಯಿಂದ ಶಂಕುಸ್ಥಾಪನೆಗೆ ಚಾಲನೆ ನೀಡಿದ ರಮೇಶ ಜಾರಕಿಹೊಳಿ !
ಯುವ ಭಾರತ ಸುದ್ದಿ ಗೋಕಾಕ :
ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಭಾಗದ ಮಹತ್ವಕಾಂಕ್ಷಿಯ ಘಟ್ಟಿ ಬಸವಣ್ಣ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಇಂದು ಸಾಮಾನ್ಯ ವ್ಯಕ್ತಿಯ ಕಡೆಯಿಂದ ಚಾಲನೆ ನೀಡಿದರು. ಸ್ವತಃ ತಾವೇ ಚಾಲನೆ ನೀಡುವ ಬದಲು ಅವರು ಹಾಲುಮತ ಸಮಾಜದ ಸಾಮಾನ್ಯ ಪ್ರಜೆ ದೇವಪ್ಪ ಗುಡಗುಡಿ ಅವರಿಂದ ಚಾಲನೆ ನೀಡಲು ಮುಂದಾಗಿದ್ದು ಸೇರಿದ್ದ ಜನತೆಯನ್ನು ಅಚ್ಚರಿಗೊಳಗಾಗುವಂತೆ ಮಾಡಿತು.
969 ಕೋಟಿ ರೂಪಾಯಿ ವೆಚ್ಚದಲ್ಲಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಘಟ್ಟಿ ಬಸವಣ್ಣ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಬುಧವಾರ ಬೆಳಗ್ಗೆ ಏಳು ಗಂಟೆಗೆ ಅಡಿಗಲ್ಲು ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ ಅವರು, ಇಂದು ಗೋಕಾಕ ಜನತೆಗೆ ಶುಭದಿನವಾಗಿದೆ. ಮಹತ್ವಾಕಾಂಕ್ಷಿ ಯೋಜನೆಗೆ ಅಡಿಗಲು ಪೂಜೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಗೋಕಾಕ ತಾಲೂಕು ಸೇರಿದಂತೆ ಇತರ ತಾಲೂಕಿನ ಜನತೆಗೂ ಈ ಯೋಜನೆಯಿಂದ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗಲಿದೆ. ಈ ಭಾಗ ಮುಂದಿನ ದಿನಗಳಲ್ಲಿ ನೀರಾವರಿಯಿಂದ ಸಮೃದ್ದಿಪಡೆಯಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ನಾಯಕರಾದ ಅಮರನಾಥ ಜಾರಕಿಹೊಳಿ, ಅಂಬಿರಾವ್ ಪಾಟೀಲ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ, ಭೀಮಗೌಡರ ಪೊಲೀಸ್ ಗೌಡರ, ನೀರಾವರಿ, ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.