ಬೆಲ್ಲದ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಮಹಿಳೆಯರು ಆಧುನಿಕ ತಂತ್ರಜ್ಞಾನದ ಸದುಪಯೋಗ ಪಡೆಯಬೇಕು: ಪ್ರೊ. ಉಮಾ ಕುಲಕರ್ಣಿ
ಯುವ ಭಾರತ ಸುದ್ದಿ ಬೆಳಗಾವಿ :
ಆಧುನಿಕವಾಗಿ ಮಹಿಳೆಯರಿಗೆ ಇಂದು ಹಲವು ಅವಕಾಶಗಳು ಸಿಗುತ್ತವೆ. ಈ ದಿಸೆಯಲ್ಲಿ ಅವರು ಆಧುನಿಕ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಬೆಳಗಾವಿಯ ಕೆಎಲ್ಇಎಸ್ ಎಂ.ಎಸ್. ಶೇಷಗಿರಿ ಅಭಿಯಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಉಮಾ ಕುಲಕರ್ಣಿ ಸಲಹೆ ನೀಡಿದರು.
ನಗರದ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಒಕ್ಕೂಟ ಮತ್ತು ಅತಿಥಿ ಉಪನ್ಯಾಸಕರ ಒಕ್ಕೂಟಗಳು ಶನಿವಾರ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಹಿಳೆಯರಿಗೆ ತಂತ್ರಜ್ಞಾನದ ಉಪಯೋಗಗಳು ವಿಷಯವಾಗಿ ಮಾತನಾಡಿದರು.
ಮಹಿಳೆಯರು ಸಮಾನತೆ ಸಾಧಿಸಬೇಕಾದರೆ ತಂತ್ರಜ್ಞಾನದ ಸದುಪಯೋಗ ಪಡೆಯಬೇಕು. ತಂತ್ರಜ್ಞಾನದ ಬಳಕೆಗೆ ಮುಕ್ತ ಅವಕಾಶ ಇರಬೇಕು. ಪುರುಷರು ಮಹಿಳೆಯರಿಗೆ ತಂತ್ರಜ್ಞಾನದ ಸದುಪಯೋಗ ಪಡೆಯುವಲ್ಲಿ ಹಾಗೂ ಸಮಾನತೆ ಪಡೆದುಕೊಳ್ಳುವಲ್ಲಿ ಅಗತ್ಯವಾದ ಎಲ್ಲಾ ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಬಿ.ವಿ.ಬೆಲ್ಲದ ಮಹಾವಿದ್ಯಾಲಯದ ಪ್ರಾಚಾರ್ಯ ಬಿ. ಜಯಸಿಂಹ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕಿಯರಾದ ಉಮಾ ಹಿರೇಮಠ, ಜ್ಯೋತಿ ಹಿರೇಮಠ, ಸವಿತಾ ಪಟ್ಟಣಶೆಟ್ಟಿ, ಅಶ್ವಿನಿ ಹಿರೇಮಠ, ಸುಪ್ರಿಯಾ ಸ್ವಾಮಿ, ರಾಜಶ್ರೀ ಪಾಟೀಲ, ಶ್ರೀನಿವಾಸ ಪಾಲಕೊಂಡ, ಎಂ.ಎಸ್. ಅಲ್ಲಪ್ಪನವರ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.