Breaking News

ಮಾರ್ಚ್ 11 ರಿಂದ ಬಸವನ ಕುಡಚಿ ಜಾತ್ರಾ ಮಹೋತ್ಸವ

Spread the love

ಮಾರ್ಚ್ 11 ರಿಂದ ಬಸವನ ಕುಡಚಿ ಜಾತ್ರಾ ಮಹೋತ್ಸವ

ಪ್ರತಿ ವರ್ಷದಂತೆ ಈ ವರ್ಷವೂ ಬೆಳಗಾವಿ ತಾಲೂಕಿನ ಬಸವನ ಕುಡಚಿಯ ಶ್ರೀ ಬಸವೇಶ್ವರ,

ಶ್ರೀ ಕಲಮೇಶ್ವರ ಹಾಗೂ ಶ್ರೀ ಬ್ರಹ್ಮದೇವರ ಜಾತ್ರಾ ಮಹೋತ್ಸವ ಮಾರ್ಚ್ 11 ರಿಂದ 22, 2023 ರ ವರೆಗೆ ಜರುಗಲಿದ್ದು ತನ್ನಮಿತ್ತ ಈ ಲೇಖನ.

ಯುವ ಭಾರತ ಸುದ್ದಿ ಬಸವನಕುಡಚಿ :
ಚಾರಿತ್ರಿಕ ಗ್ರಾಮ. ಕನ್ನಡ ನಾಡಿನ ಸಂಸ್ಕೃತಿಗೆ ರಾಜಮನೆತನಗಳು ನೀಡಿದ ಕೊಡುಗೆ ಅಪಾರ. ಅದರಲ್ಲಿಯೂ ನಾಡಿನ ಸಂಸ್ಕೃತಿಯ ಸಂವರ್ಧನೆಯಲ್ಲಿ ಬೆಳಗಾವಿ ಜಿಲ್ಲೆ ಕೊಡುಗೆ ಅನನ್ಯ ಅಸಾದೃಶವೆನಿಸಿದೆ. ಬೆಳಗಾವಿ ನಗರದಿಂದ ಐದು ಕಿ.ಮೀ. ಅಂತರದಲ್ಲಿರುವ ಬಸವನ ಕುಡಚಿ ಗ್ರಾಮವು ಸರ್ವಧರ್ಮಗಳ ಸಂಗಮ ತಾಣವೆನಿಸಿಕೊಂಡಿದೆ. ಬಸವೇಶ್ವರ, ಕಲ್ಮೇಶ್ವರ ಹಾಗೂ ಬ್ರಹ್ಮದೇವರ ಸುಕ್ಷೇತ್ರವಾಗಿರುವ ಈ ಪ್ರದೇಶ ಸಾವಿರಾರು ಭಕ್ತಾದಿಗಳ ಶ್ರದ್ಧಾಕೇಂದ್ರವೆನಿಸಿದೆ. ಕನ್ನಡ-ಮರಾಠಿ ಎಂಬ ಭಾಷಾ ಸಾಮರಸ್ಯದೊಂದಿಗೆ ತನ್ನ ಗತ ಸಂಸ್ಕೃತಿಯನ್ನು ಇಂದಿಗೂ ಪೋಷಿಸಿ ಬೆಳೆಸಿದೆ.
ಬಸವನ ಕುಡಚಿ ಭೌಗೋಳಿಕವಾಗಿ ಪುಟ್ಟ ಗ್ರಾಮ. ಒಂದು ಕಾಲದಲ್ಲಿ ಕೃಷಿಯೇ ಜೀವಾಳವಾಗಿತ್ತು. ಬೆಳಗಾವಿಯ ನ್ಯೂ ಗಾಂಧಿನಗರದಿಂದ ಉತ್ತರದ ಮುಚ್ಚಂಡಿಯವರೆಗೆ, ದಕ್ಷಿಣದ ಅಲಾರವಾಡದವರೆಗೆ ವಿಸ್ತಾರವಾದ ಕೃಷಿ ಭೂಮಿ ಹೊಂದಿದೆ.
ಬೆಳಗಾವಿಯ ಪ್ರಾಚೀನ ಗ್ರಾಮಗಳಲ್ಲಿ ಬಸವನ ಕುಡಚಿಗೆ ವಿಶಿಷ್ಟ ಸ್ಥಾನವಿದೆ. ಈ ಗ್ರಾಮ ಸುಮಾರು ಆರೇಳುನೂರು ವರ್ಷಗಳ ಭವ್ಯವಾದ ಇತಿಹಾಸ ಹೊಂದಿರುವುದು ಸರ್ವವಿಧಿತ. ಪ್ರಸ್ತುತ ಗ್ರಾಮದಲ್ಲಿರುವ ದೇವಾಲಯಗಳು, ಪ್ರಾಗೈತಿಹಾಸಿಕ ಅವಶೇಷಗಳಾದ ವೀರಗಲ್ಲುಗಳು, ಸತಿಗಲ್ಲುಗಳು, ವೈಶಿಷ್ಟ್ಯಪೂರ್ಣವಾದ ಸಂಪ್ರದಾಯಗಳನ್ನು ಅವಲೋಕಿಸಿದಾಗ ಊರಿನ ಪ್ರಾಚೀನ ಇತಿಹಾಸ ಅನಾವರಣಗೊಳ್ಳುತ್ತದೆ.
ಬಸವನ ದೇವಾಲಯ :
ಕುಡಚಿ ಗ್ರಾಮದ ಮೂಲದೈವ ನಂದಿ ರೂಪದ ಬಸವಣ್ಣ. ಬಸವನೇ ಗ್ರಾಮದ ಸರ್ವಸ್ವ, ಶಕ್ತಿಯ ರೂಪ. ಪ್ರಥಮಪೂಜಾದಾಯಕ. ಬಸವನ ದೇವಸ್ಥಾನವು ಗ್ರಾಮದ ಮಧ್ಯದಲ್ಲಿ ಕೇಂದ್ರಿಕೃತಗೊಂಡಿದೆ. ಚೌಕಾಕಾರ ಗದ್ದುಗೆಯ ಮೇಲೆ ಶಿಲಾಗಂಭಗಳಿಂದ ನಿರ್ಮಿಸಿರುವ ಬಸವನ ದೇವಸ್ಥಾನಕ್ಕೆ ಚಪ್ಪಡಿಗಲ್ಲುಗಳ ಮಳಿಗೆಗಳನ್ನು ವಿಶಿಷ್ಟವಾಗಿ ರೂಪಿಸಲಾಗಿದೆ. ಈ ದೇವಾಲಯದ ಮಧ್ಯಭಾಗದಲ್ಲಿ ಒಂದು ಅಖಂಡ ಶಿಲಾಗಂಭವಿದ್ದು, ಇದು ದೇವಾಲಯದ ಆಧಾರಗಂಭವೆನ್ನಬಹುದು. ಇದರ ಮೇಲೆಯೇ ಬಸವನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಬಸವನು ವಿರಾಜಮಾನವಾಗಿರುವ ಮಧ್ಯಗಂಬ ಸುಮಾರು 9-10 ನೇ ಶತಮಾನದಲ್ಲಿ ರಚಿತಗೊಂಡಿರಬಹುದೆಂದು ಇತಿಹಾಸ ತಜ್ಞರು ಹೇಳುತ್ತಾರೆ. ಇನ್ನೊಂದು ವೈಶಿಷ್ಟ್ಯತೆ ಎಂದರೆ ನಂದಿರೂಪದ ಬಸವ ಮಹಡಿಯ ಮೇಲೆ ಇರುವುದು ಇಲ್ಲಿಯ ಗಮನಾರ್ಹ, ಇಂತಹ ಶೈಲಿಯ ದೇವಸ್ಥಾನ ಕರ್ನಾಟಕದಲ್ಲಿ ದೊರೆಯುವುದು ಅಪರೂಪದಲ್ಲಿ ಅಪರೂಪವೆಂಬುದು. ದೇವಸ್ಥಾನದ ಒಳ ಹಾಗೂ ಹೊರ ಭಾಗದಲ್ಲಿ ಒಟ್ಟು 84 ಚಪ್ಪಡಿ ಕಂಬಗಳನ್ನು. ಅದರ ಮೇಲೆಯೂ ಕಟ್ಟಿಗೆಯ ಅಷ್ಟೇ ಕಂಬಗಳನ್ನು ನಿರ್ಮಿಸಲಾಗಿದೆ. ಈ ಚಪ್ಪಡಿ ಕಂಬಗಳು ಸುಮಾರು 16-17ನೇ ಶತಮಾನದಲ್ಲಿ ರಚನೆಗೊಂಡಿವೆ. ಈ ದೇವಸ್ಥಾನಕ್ಕೆ ಯಾವ ಗರ್ಭಗೃಹವಿರದಿದ್ದರೂ ಸುತ್ತಲಿನ ಪ್ರದಕ್ಷಿಣಾಪಥ ವಿಶಾಲವಾಗಿದೆ.

ಮಧ್ಯವಿರುವ ಕಂಬದ ಮೇಲೆ ಬಸವ ಪಶ್ಚಿಮಾಭಿಮುಖವಾಗಿ, ಬಲಗಾಲವನ್ನು ಮುಂದಕ್ಕೆ ಚಾಚಿಕೊಂಡು ವಿರಾಜಮಾನವಾಗಿ ಕುಳಿತಿರುವ ದೃಶ್ಯ ರಮಣೀಯವೆನಿಸುತ್ತದೆ. ನಿತ್ಯ ಆಭರಣಗಳಿಂದ ಅಲಂಕೃತಗೊಳ್ಳುವ ಬಸವ ಉಲ್ಲಸಿತವಾಗಿ, ದಯೆ, ಕರುಣೆಯ ಮೂರ್ತಿವೆತ್ತಂತೆ ಪ್ರತಿಬಿಂಬಿತಗೊಂಡಿದ್ದಾನೆ.
ಕಲ್ಮೇಶ್ವರ ದೇವಾಲಯ:
ಗ್ರಾಮದ ಪೂರ್ವಾಭಿಮುಖವಾಗಿ ಕಲ್ಮೇಶ್ವರ ದೇವಾಲಯವಿದೆ. ಇಲ್ಲಿಯ ಶಿವಲಿಂಗ 10 ನೇ ಶತಮಾನದಷ್ಟು ಪ್ರಾಚೀನವಾದದು. ಸು. 18-19ನೇ ಶತಮಾನದಲ್ಲಿ ಪೂರ್ಣಪ್ರಮಾಣದ ದೇವಾಲಯವನ್ನು ನಿರ್ಮಿಸಲಾಯಿತೆಂದು ಗ್ರಾಮದ ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ.
ಜಾತ್ರೆಯ ಪ್ರಾರಂಭ : ಪ್ರತಿವರ್ಷ ಹೋಳಿ ಹುಣ್ಣಿಮೆಯಿಂದ ಚಂದ್ರಮಾನ ಯುಗಾದಿಯ ಅಮವಾಸ್ಯೆಯ ಮಧ್ಯಾವಧಿಯಲ್ಲಿ ಬರುವ ಸೋಮವಾರ ಮತ್ತು ಮಂಗಳವಾರ ‘ಬಸವೇಶ್ವರ, ಕಲ್ಮೇಶ್ವರ, ಬ್ರಹ್ಮದೇವರ ಜಾತ್ರೆಯು’ ಅತ್ಯಂತ ಸಡಗರದಿಂದ ಜರುಗುತ್ತದೆ.
ವಿಶೇಷ ಬಂಡಿಗಳು : ಬಸವಣ್ಣನ ಕಿಚ್ಚನ್ನು ದಾಟುವುದು ಇಲ್ಲಿಯ ಸತ್‌ಸಂಪ್ರದಾಯ.

ಹಾಗಾಗಿ ಕಿಚ್ಚಿನ ಕಟ್ಟಿಗೆ ತರಲು ಜಾತ್ರೆಯ ಸಲುವಾಗಿಯೇ ವಿಶೇಷವಾಗಿ ನಿರ್ಮಿಸಲಾದ ನಾಲ್ವತ್ತು ಬಂಡಿಗಳನ್ನು ಹೂಡಿಕೊಂಡು ಹೋಗಲಾಗುತ್ತದೆ. ಗ್ರಾಮಸ್ಥರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಈ ಬಂಡಿಗಳನ್ನು ಮಾಡಿ ಗರಿಗಳಿಂದ ಅಲಂಕಾರ ಮಾಡಿ, ವಿಶೇಷವಾದ ಪೂಜೆಯನ್ನು ನೆರವೇರಿಸಿ ಶನಿವಾರದ ಬೆಳಗಿನ 2-3 ಗಂಟೆಗೆ ಹೂಡಿಕೊಂಡು ವಾದ್ಯಗಳ ಝೇಂಕಾರದೊಂದಿಗೆ ಬೆಳಗಾವಿ ಹತ್ತಿರ ಇರುವ ಕಾಕತಿ ಗುಡ್ಡಕ್ಕೆ ವೈಭವದಿಂದ ತೆರಳುತ್ತಾರೆ. ಅಧ್ಯಯನದ ಪ್ರಕಾರ ಸುಮಾರು ಮೂರು ನೂರು ವರ್ಷಗಳ ಹಳೆಯದಾದ ಬಂಡಿಗಳು ಇವಾಗಿವೆ.
ದೇವರಬಂಡಿ : ಅಂದು ಬೆಳಿಗ್ಗೆ ಹೊರಡುವ ಸುಮಾರು ನಲವತ್ತು ಬಂಡಿಗಳ ಮುಂದಾಳತ್ವವನ್ನು ‘ದೇವರಬಂಡಿ’ಯೆಂದು ಕರೆಯಲಾಗುತ್ತದೆ.

ಈ ವಿಶೇಷ ದೇವರಬಂಡಿಯು ನೇತೃತ್ವ ಬೇಡಕಾ ಕುಟುಂಬದವರದು. ಪ್ರಥಮತಃ ದೇವರಬಂಡಿ ಮುನ್ನಡೆಯುವುದರ ಮೂಲಕ ಉಳಿದೆಲ್ಲ ಬಂಡಿಗಳು ಚಾಲನೆ ಪಡೆಯುತ್ತವೆ.
ಈ ದೇವರ ಬಂಡಿಯೊಂದಿಗೆ ಗ್ರಾಮಸ್ಥರು ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ತಮ್ಮ ಬಂಧುಬಳಗದವರನ್ನೂ, ಸ್ನೇಹಿತರನ್ನೂ ಕೂಡ ಜೊತೆಯಾಗಿ ಕರೆದುಕೊಂಡು ತೆರಳುವುದು ಇಲ್ಲಿಯ ಇನ್ನೊಂದು ಆಕರ್ಷಣೆಯಾಗಿರುತ್ತದೆ. ರಸ್ತೆ ಉದ್ದಕ್ಕೂ ಸರತಿಯಲ್ಲಿ ಈ ಬಂಡಿಗಳು ಸಾಗುವುದೇ ಒಂದು ವೈಭವ, ಅವುಗಳನ್ನು ಕಣ್ತುಂಬಿಕೊಳ್ಳುವುದೇ ಇನ್ನೊಂದು ಸೊಬಗು. ಪ್ರತಿವರ್ಷ ಜರುಗುವ ಬಸವನ ಮೇಲಿನ ಭಕ್ತಿಭಾವಗಳಿಗೆ ಇದೊಂದು ದ್ಯೋತಕವಾಗಿ ನಿಲ್ಲುತ್ತದೆ.
ತೆರಳಿದ ಎಲ್ಲ ಬಂಡಿಗಳಿಗೂ ಕಾಕತಿ ಗುಡ್ಡದಲ್ಲಿ ವಿಶೇಷವಾದ ಪೂಜೆ ಸಲ್ಲಿಸಿ ಬಸವನ ಜಾತ್ರೆಯ ಕಿಚ್ಚಿಗಾಗಿ ನೆರಳೆ ಹಣ್ಣಿನ ಮರದ ಕಟ್ಟಿಗೆಗಳನ್ನು ಸಂಗ್ರಹಿಸಲಾಗುತ್ತದೆ. ಬಸವನ ಕುಡಚಿಯಿಂದ ಕಾಕತಿ ಗುಡ್ಡದ ವರೆಗೆ ಸುಮಾರು ಹದಿನೈದು ಕಿ.ಮೀ.ಕ್ಕೂ ಹೆಚ್ಚು ದೂರ ಪಯಣಿಸುವ ಭಕ್ತರು ಬರೆಗಾಲಿನಿಂದಲೇ ಪಯಣಿಸುವುದು ಅವರ ಭಕ್ತಿ ಪರಾಕಾಷ್ಠಗೆ ಸಾಕ್ಷಿಯಾಗಿ ನಿಂತಿದೆ.
ಹೀಗೆ ಕಾಕತಿ ಗುಡ್ಡದಲ್ಲಿ ಸಂಗ್ರಹಿಸಿದ ನೆರಳೆ ಹಣ್ಣಿನ ಕಟ್ಟಿಗೆಗಳನ್ನು ತಮ್ಮ ತಮ್ಮ ಬಂಡಿಗಳಲ್ಲಿ ಹೇರಿ ಸರತಿ ಸಾಲಿನಲ್ಲಿ ಪುನಃ ಶನಿವಾರ ಸಾಯಂಕಾಲವೇ ಬಸವನ ಕುಡಚಿಗೆ ಮರಳಿ ಬರುತ್ತಾರೆ. ಈ ದೃಶ್ಯ ನೋಡುಗರ ಕಣ್ಮನವನ್ನು ಸೆಳೆಯುತ್ತದೆ. ದಾರಿಯುದ್ದಕ್ಕೂ ಹಲವಾರು ಭಕ್ತಾದಿಗಳು ದೇವರಬಂಡಿಗೆ ಪೂಜೆಪುನಸ್ಕಾರಗಳನ್ನು ಸಲ್ಲಿಸಿ ಪುನೀತರಾಗುತ್ತಾರೆ.

ಅಂಬಲಿ ಬಂಡಿಗಳ ವೈಭವ : ಸೋಮವಾರ ಬೆಳಿಗ್ಗೆ ಬಸವೇಶ್ವರ ಹಾಗೂ ಕಲ್ಮೇಶ್ವರ ದೇವಸ್ಥಾನದಲ್ಲಿ ಅಭಿಷೇಕ ಪೂಜೆಯು ನೆರವೇರುತ್ತದೆ. ಈ ಪವಿತ್ರ ಕಾರ್ಯವನ್ನು ಹಕ್ಕುದಾರರಲ್ಲಿ ಒಬ್ಬರಾದ ಕುಲಕರ್ಣಿಯವರು ನೆರವೇರಿಸುತ್ತಾರೆ. ಎಲ್ಲ ಬಂಡಿಗಳನ್ನು ತೆಂಗಿನ ಗರಿಗಳು, ಮಾಡಿಗರಿಗಳು ಹಾಗೂ ವಿವಿಧ ಬಾವುಟಗಳಿಂದ ಅತ್ಯಂತ ಆಕರ್ಷಕವಾಗಿ ಶೃಂಗರಿಸಲಾಗಿರುತ್ತದೆ.

ಅಷ್ಟೇ ಅಲ್ಲದೆ ಬಂಡಿಯಲ್ಲಿ ಅಂಬಲಿ, ಗುಗ್ಗರಿಯನ್ನಿಟ್ಟುಕೊಂಡು ಚಿಣ್ಣರ ತಂಡಗಳನ್ನು ಕುಳ್ಳರಿಸಿ ಸಿದ್ಧಪಡಿಸಲಾಗಿರುತ್ತದೆ. ತದ ನಂತರದಲ್ಲಿ ಅಂಬಲಿ ಬಂಡಿಗಳನ್ನು ಬಸವನ ದೇವಾಲಯಕ್ಕೆ ಪ್ರದಕ್ಷಿಣೆಹಾಕಿ ನಂತರ ಪ್ರಸಾದವನ್ನು ಹಂಚುತ್ತಾರೆ. ಅಲ್ಲಿಂದ ಊರ ಪಕ್ಕದಲ್ಲಿರುವ ಗದ್ದೆಯಲ್ಲಿ ಬಂಡಿಗಳನ್ನು ಸ್ಪರ್ಧಾತ್ಮಕವಾಗಿ ಓಡಿಸಿ ರೈತರು ತಮ್ಮ ತಮ್ಮ ಹೋರಿಗಳ, ಎತ್ತುಗಳ ಸಾಮರ್ಥ್ಯವನ್ನು ಕಂಡು ಮೇರೆ ಮೀರಿದ ಹರ್ಷದಿಂದ ಕುಣಿದಾಡುವವ ವೈಭವ ರೋಮಾಂಚನಗೊಳಿಸುತ್ತದೆ.

ಕಿಚ್ಚಿನ ಸಂಭ್ರಮ : ಅಸಂಖ್ಯ ಭಕ್ತಗಣರಿಂದ ಮಂಗಳವಾರ ‘ಕಲ್ಮೇಶ್ವರ’ ಹಾಗೂ ‘ಬಸವೇಶ್ವರ’ ದೇವರ ಕಿಚ್ಚನ್ನು ದಾಟಲು ಅಂದು ಸಾಯಂಕಾಲ ಎಲ್ಲ ಪೂರ್ವಸಿದ್ಧತೆಯನ್ನು ಮಾಡಲಾಗಿರುತ್ತದೆ. ಆ ಪೂರ್ವದಲ್ಲಿ ಅಂದು ಮುಂಜಾನೆಯಿಂದ ಭಕ್ತರು ದೇವರ ದರ್ಶನಕ್ಕೆ ಅಣಿಯಾಗಿರುತ್ತಾರೆ. ಮೊದಲು ಊರಿನ ಗೌಡರು ಟೆಂಗಿನಶ್ರೀಫಲವನ್ನು ‘ಕಿಚ್ಚ’ನಲ್ಲಿ ಉರುಳಿಸಿ ಕಿಚ್ಚಿನ ಪ್ರವೇಶಕ್ಕೆ ಚಾಲನೆ ನೀಡುತ್ತಾರೆ. ಸರದಿಯಲ್ಲಿ ನೂರಾರು ಭಕ್ತಾದಿಗಳು ಕಿಚ್ಚನ್ನು ಹಾಯ್ದು ತಮ್ಮ ಹರಕೆಯನ್ನು ಸಲ್ಲಿಸುವ ದೃಶ್ಯ ಜಾತ್ರೆಗೆ ಹೊಸ ಮೆರುಗು ತರುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು : ಜಾತ್ರೆಯ ಮರುದಿನ ಬುಧುವಾರ ರಾತ್ರಿಯಂದು ನಾಟಕ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಸುಮಾರು ಬೆಳಗಿನ ವರೆಗೂ ಜರುಗುವ ನಾಟಕೋತ್ಸವಗಳು ರಂಜನೀಯವಾಗಿರುತ್ತವೆ. ಬುಧವಾರ ಹಾಗೂ ಗುರುವಾರದಂದು ಬಯಲು ಕುಸ್ತಿಗಳು, ಶುಕ್ರವಾರ ಬಂಡಿಗಳ ಶರತ್ತುಗಳು ಜಾತ್ರೆಯ ವೈಭವವನ್ನು ಹೆಚ್ಚಿಸುತ್ತವೆ.
ಯುಗಾದಿ ಪಾಡ್ಯೆ ಜಾತ್ರೆಯ ಕೊನೆಯ ದಿನ. ಹಲವಾರು ಭಕ್ತರು ತಮ್ಮ ಹರಕೆಗಳನ್ನು ಸಲ್ಲಿಸುವುದರ ಜೊತೆಗೆ ಪಂಚಾಂಗ ಶ್ರವಣ, ಅಭಿಷೇಕದ ಜೊತೆಗೆ ರಂಗುರಂಗಿನ ಮದ್ದುಗಳನ್ನು ಸಿಡಿಸಲಾಗುತ್ತದೆ. ಆ ದೃಶ್ಯವು ಜಾತ್ರೆಯ ಸೌಂದರ‍್ಯವನ್ನು ಇನ್ನಷ್ಟು ದ್ವಿಗುಣಗೊಳಿಸುತ್ತದೆ. ಹೋಳಿಹುಣ್ಣಿಮೆ ಮುಗಿದ ಮರುದಿನದಿಂದ ಯುಗಾದಿವರೆಗೆ ಇಡೀ ಗ್ರಾಮ ಜಾತ್ರೆಗೆ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಸುತ್ತಲಿನ ಅಸಂಖ್ಯ ಭಕ್ತರನ್ನು ತನ್ನತ್ತ ಸೆಳೆದು ಈ ಭಾಗದ ಅನೇಕ ಗ್ರಾಮಗಳ ಜಾತ್ರಾ ಮಹೋತ್ಸವಗಳಿಗೆ ಚಾಲನೆ ನೀಡುತ್ತಿದೆ.

ಡಾ.ಮಹೇಶ ಸಿ.ಗುರನಗೌಡರ
ನಿರ್ದೇಶಕರು, ಕೆಎಲ್‌ಇ ಪ್ರಸಾರಾಂಗ


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

thirteen + 3 =