ಮೂಡಲಗಿ:- ಶುಕ್ರವಾರ ನಿಧನರಾದ ಸಂಗೀತ ಸಾರ್ವಭೌಮ, ಗಾನ ಗಾರುಡಿಗ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ಇಲ್ಲಿಯ ಕಲಾವಿದರ ಬಳಗ,ಅಭಿಮಾನಿಗಳು ಕಲ್ಮೇಶ್ವರ ವೃತ್ತದಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು.
ಭಜನಾ ಕಲಾವಿದ ಶಿವಪುತ್ರಯ್ಯ ಮಠಪತಿ ಸ್ವಾಮಿ ಪೂಜೆ ಸಲ್ಲಿಸಿದರು. ಜಾನಪದ ಕಲಾವಿದ,ಚಲನ ಚಿತ್ರ ಗಾಯಕ ಶಬ್ಬೀರ ಡಾಂಗೆ ಮಾತನಾಡಿ ಕಂಚಿನ ಕಂಠದಿಂದ 14ಭಾಷೆಗಳಲ್ಲಿ ಹಿಡಿತ ಸಾಧಿಸಿ ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಮಣ್ಯಂ ಅವರ ಅಗಲಿಕೆಯಿಂದ ಜಗತ್ತಿನ ಸಂಗೀತ ಲೋಕಕ್ಕೆ ತುಂಬ ಹಾನಿಯಾಗಿದೆ.ಎಸ್.ಪಿ. ಅವರು ಮೇರು ಕಲಾವಿದರಾಗಿದ್ದರೂ ಯುವ ಕಲಾವಿದರಿಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು ಎಂಬುದಕ್ಕೆ ನಾನೆ ಜೀವಂತ ಸಾಕ್ಷಿಯಾಗಿದ್ದೇನೆ,ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ನಾನು ಹಾಡಿದ ‘ನಂಬಿಗುಳ್ಳ ನಾಯಿ ಸಾಕಿರಿ’ ಎಂಬ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಧುರ ಕ್ಷಣ ನೆನಪಿಸಿಕೊಂಡು ಅರ್ಶುತರ್ಪನ ಅರ್ಪಿಸಿದರು.
ಅಂಧ ಕಲಾವಿದ ಶಬ್ಬೀರ ಸೈಯ್ಯದ ಮಾತನಾಡಿ ಎಸ್.ಪಿ.ಅವರು ವಿಕಲಚೇತನ ಕಲಾವಿದರಿಗೆ ವಿಶೇಷವಾಗಿ ಅಂಧ ಕಲಾವಿದರಿಗೆ ಚೈತನ್ಯ ನೀಡಿ ಪ್ರೋತ್ಸಾಹಿಸುತ್ತಿದ್ದರು ಎಂದರು ಕಲಾವಿದ ಚುಟುಕುಸಾಬ ಜಾತಗಾರ ,ಹನಮಂತ ಸತರಡ್ಡಿ,ಜಗದೀಶ ತೇಲಿ,ಈರಪ್ಪ ಢವಳೇಶ್ವರ ಮತ್ತಿತರರು ಇದ್ದರು.