ಉಮೇಶ ಕತ್ತಿಯವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ- ಈರಣ್ಣ ಕಡಾಡಿ.!
ಗೋಕಾಕ: ರಾಜ್ಯದ ಧಿಮಂತ ನಾಯಕ, ದಕ್ಷ ಆಡಳಿತಗಾರ ಉಮೇಶ ಕತ್ತಿಯವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರದಂದು ನಗರದ ಚನ್ನಬಸವೇಶ್ವರ ವಿದ್ಯಾಪೀಠದ ಸಭಾ ಭವನದಲ್ಲಿ ಲಿಂಗಾಯತ ಮುಖಂಡರು ಆಯೋಜಿಸಿದ್ದ ಉಮೇಶ ಕತ್ತಿಯವರಿಗೆ ಶ್ರದ್ಧಾಂಜಲಿ ಸಮರ್ಪಣಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಉಮೇಶ ಕತ್ತಿಯವರು ಉದಾತ್ತ ದೂರ ದೃಷ್ಟಿಯ ನಾಯಕರಾಗಿದ್ದರು, ಸಮಗ್ರ ಕರ್ನಾಟಕ ಅಭಿವೃದ್ಧಿಯಲ್ಲಿ ಸಹಕಾರ ಧುರೀಣರಾಗಿ ಶ್ರಮಿಸಿದ್ದರು. ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ಸಾಗೋಣ ಎಂದರು.
ಸಾನಿಧ್ಯವಹಿಸಿದ್ದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ನೇರ ನುಡಿಯೊಂದಿಗೆ ಹೃದಯವಂತರಾಗಿ ಜನಪರ ಕಾಳಜಿಯಿಂದ ಜನರ ಮನಸ್ಸಿನಲ್ಲಿ ಸದಾ ನೆಲಸಿದ್ದಾರೆ. ಸಹಕಾರ ರಂಗ, ಸಾಮಾಜಿಕ ಕ್ಷೇತ್ರದಲ್ಲಿ ಅವರ ಕೊಡುಗೆ ಬಹುದೊಡ್ಡದಾಗಿದೆ. ಹುಟ್ಟು ಸಾವಿನ ನಡುವಿನ ದಿನಗಳನ್ನು ಅವರು ಸಾರ್ಥಕ ಪಡಿಸಿಕೊಂಡಿದ್ದಾರೆ. ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ. ಉಮೇಶ ಕತ್ತಿಯವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ನಗರದ ಮುಪ್ಪಯನಮಠದ ಶ್ರೀ ರಾಚೋಟಿ ದೇವರು, ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ, ಮುಖಂಡರಾದ ಮಹಾಂತೇಶ ತಾಂವಶಿ, ಬಸನಗೌಡ ಪಾಟೀಲ, ಚಂದ್ರಶೇಖರ ಕೊಣ್ಣೂರ, ಬಸವರಾಜ ಹಿರೇಮಠ, ಡಾ.ಸಿ ಕೆ ನಾವಲಗಿ, ಬಸವರಾಜ ಹುಳ್ಳೇರ, ಶ್ರೀಶೈಲ ತುಪ್ಪದ, ಮಲ್ಲಿಕಾರ್ಜುನ ಈಟಿ, ಸುಮಿತ್ರಾ ಗುರಾಣಿ, ರಾಮಣ್ಣ ಹುಕ್ಕೇರಿ, ಮನೋಹರ ಕುರಬೇಟ, ಮಡಿವಾಳಪ್ಪ ಮುಚಳಂಬಿ ಸೇರಿದಂತೆ ಅನೇಕರು ಇದ್ದರು.