Breaking News

ವ್ಯಕ್ತಿಯು ಅಮರನಾಗುವುದು ಭೌತಿಕ ಸಂಪತ್ತಿನಿಂದಲ್ಲ ಸಾಧನೆಯಿಂದ : ಸಿಎಂ ಬೊಮ್ಮಾಯಿ

Spread the love

ವ್ಯಕ್ತಿಯು ಅಮರನಾಗುವುದು ಭೌತಿಕ ಸಂಪತ್ತಿನಿಂದಲ್ಲ ಸಾಧನೆಯಿಂದ : ಸಿಎಂ ಬೊಮ್ಮಾಯಿ

ಯುವ ಭಾರತ ಸುದ್ದಿ ಬೆಳಗಾವಿ :
ಯಶಸ್ಸು ವ್ಯಕ್ತಿಗೆ ಸಂಬಂಧಿಸಿದುದು, ಸಮುದಾಯಕ್ಕೆ ಸಂಬಂಧಿಸಿದುದು. ವ್ಯಕ್ತಿಯು ಅಮರನಾಗುವುದು ಅವನ ಭೌತಿಕ ಸಂಪತ್ತಿನಿಂದಲ್ಲ. ಅವನ ಸಾಧನೆಯ ಮೂಲಕ. ವ್ಯಕ್ತಿಯ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ ಘಟ್ಟ. ಈ ಸಮಯ ಮತ್ತೆ ಮರಳುವುದಿಲ್ಲ. ಇದುವೇ ನಿಮ್ಮ ಭವಿಷ್ಯದ ಬುನಾದಿಯಾಗಿರುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ನೂತನ ಕಟ್ಟಡವನ್ನು ಮಹಾವಿದ್ಯಾಲಯದ ಆವರಣದಲ್ಲಿ ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು ಯಶಸ್ಸಿಗೆ ಅಡ್ಡ ಮಾರ್ಗವಿಲ್ಲ. ನಿರಂತರ ಪರಿಶ್ರಮ ಮುಖ್ಯ. ನೀವು ಯಾವ ರೀತಿ ಶ್ರಮ ಪಡುತ್ತಿರೊ ಅದು ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ. ಸಮಯ ಬಹಳ ಮುಖ್ಯವಾದುದು. ಯಾಕೆ, ಏನು, ಎಲ್ಲಿ, ಯಾವಾಗ, ಹೇಗೆ ಎಂಬ ಪಂಚ ತಾರ್ಕಿಕ ಆಲೋಚನೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾಡಬೇಕು. ಲಾಜಿಕಲ್ ಆಲೋಚನೆ ಬಂದಾಗ ನಿಮಗೆ ಹೆಚ್ಚು ಅನುಕೂಲವಾಗುತ್ತದೆ. ಒಮ್ಮೆ ನೀವು ವಿದ್ಯಾರ್ಥಿಗಳಾದರೆ ಜಿವನ ಪರ್ಯಂತ ವಿದ್ಯಾರ್ಥಿಗಳೇ ಆಗಿರುತ್ತೀರಿ. ನಾವು ದಿನ ನಿತ್ಯ ಏನಾದರೂ ಕಲಿಯುತ್ತಿರುತ್ತೇವೆ. ದೊಡ್ಡ ಕನಸು ಕಾಣಲು ಹೆದರಬೇಡಿ, ಅಸಾಧ್ಯವನ್ನು ಸಾಧ್ಯ ಮಾಡುವ ಆಲೋಚನೆ ಮಾಡಿ ಆಗ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಮುಂದಿನವಾರ ಸುವರ್ಣ ವಿಧಾನ ಸೌಧದ ಎದುರು ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಅವರ ಪ್ರತಿಮೆ ಸ್ಥಾಪನೆಗೆ ಅಡಿಗಲ್ಲು ಹಾಕಲಿದ್ದೇವೆ. ಚನ್ನಮ್ಮ ವಿವಿ ಮತ್ತು ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದ ಮುಂದೆ ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆ ಮಾಡಲಿದ್ದೇವೆ ಎಂದರು.

ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಮಾತನಾಡಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಅತ್ಯಂತ ದೊಡ್ಡ ವಿಶ್ವವಿದ್ಯಾಲಯ. ಒಂದು ವಿಶ್ವವಿದ್ಯಾಲಯದ ಘಟಕ ಮಹಾವಿದ್ಯಾಲಯವು ಮಾದರಿ ಕಾಲೇಜು ಆಗಬೇಕು. ಈ ಮಹಾವಿದ್ಯಾಲಯ ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಶಕ್ತಿಕೇಂದ್ರ ಆಗುವುದರ ಜೊತೆಗೆ ಇಲ್ಲಿ ವ್ಯಾಸಂಗ ಮಾಡುವವರ ಸಂಖ್ಯೆಯೂ ದುಪ್ಪಟ್ಟಾಗಲಿ. ಅದಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೊಸಕಟ್ಟಡ ಅತೀ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು, ಈ ಕಾಲೇಜು ಬೆಳಗಾವಿಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಆಗಿದೆ. ಇಲ್ಲಿ ವ್ಯಾಸಂಗ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿದ್ಯಾರ್ಥಿಗಳ ಬೇಡಿಕೆಗೆ ತಕ್ಕಂತೆ ಇಲ್ಲಿ ಕಲಿಕಾ ವ್ಯವಸ್ಥೆ ಮಾಡಿಕೊಡಲಾಗುವುದು. ಕಾಲೇಜಿನ ಪಕ್ಕದಲ್ಲಿ ಇರುವ ಮಹಾನಗರ ಪಾಲಿಕೆಯ ಖಾಲಿ ಜಾಗವನ್ನು ಕಾಲೇಜಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಹಾವಿದ್ಯಾಲಯಕ್ಕೆ ಸಂಬಂಧಿಸಿದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದೇನೆ. ಕಡಿಮೆ ಶುಲ್ಕದಲ್ಲಿ ಗುಣಾತ್ಮಕವಾದ ಶಿಕ್ಷಣ ಈ ಸಂಸ್ಥೆ ನೀಡುವುದರಿಂದ ಗಡಿಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಅರವಿಂದ ಬೆಲ್ಲದ, ಪ್ರಕಾಶ ಹುಕ್ಕೇರಿ, ಹನುಮಂತ ನಿರಾಣಿ , ಮುಖ್ಯಮಂತ್ರಿಗಳ ಆಪ್ತ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ರಾಚವಿ ಕುಲಸಚಿವೆ ಕೆ. ಟಿ. ಶಾಂತಲಾ, ಕುಲಸಚಿವ(ಮೌಲ್ಯಮಾಪನ ) ಪ್ರೊ. ಶಿವಾನಂದ ಗೊರನಾಳೆ, ಹಣಕಾಸು ಅಧಿಕಾರಿ ಪ್ರೊ. ಎಸ್. ಬಿ. ಆಕಾಶ್ ಉಪಸ್ಥಿತರಿದ್ದರು.

ಕುಲಪತಿ ರಾಮಚಂದ್ರ ಗೌಡ ಸ್ವಾಗತಿಸಿದರು. ಡಾ. ಗಜಾನನ ನಾಯ್ಕ ನಿರೂಪಿಸಿದರು. ಪ್ರಾಚಾರ್ಯ ಡಾ. ಶಂಕರ ಎಸ್. ತೇರದಾಳ ವಂದಿಸಿದರು. ವಿದ್ಯಾರ್ಥಿ ಲಕ್ಷ್ಮಣ ನಾಯಕ ಪ್ರಾರ್ಥಿಸಿದರು. ರಾಚವಿ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ಡೀನ್ ಮತ್ತು ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

five × three =