ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ಅಮಾವಾಸ್ಯೆ ಅನುಭಾವ
ಯುವ ಭಾರತ ಸುದ್ದಿ ಬೆಳಗಾವಿ :
ನೇಯ್ಗೆ ಕಾಯಕದ ಜೇಡರ ದಾಸಿಮಯ್ಯನವರು ಸಮಾಜದ ಸತ್ಯ, ಧರ್ಮ, ನ್ಯಾಯ, ನೀತಿಯ ಬಲವಾದ ಪ್ರತಿ ಪಾದಕರಾಗಿದ್ದರು. ಸಮಾಜದವರ ಅನ್ಯಾಯ ,ಅನಾಚಾರದ ನಡೆಯನ್ನು ತಮ್ಮ ವಚನಗಳಲ್ಲಿ ನೇರವಾಗಿ ಖಂಡಿಸಿದ್ದುಂಟು. ಅವರದು ನಿರ್ಭಿತಿ, ನಿರ್ಭಿಡೆಯ ನಡೆ, ನೆಟ್ಟ ನೇರ ನುಡಿ. ಪತಿಯ ಮನದಿಂಗಿತವನ್ನು ಅರಿತು ನಡೆಯಬಲ್ಲ ದುಗ್ಗಳೆಯನ್ನು ಕೈಹಿಡಿದು ಸಂಸಾರ ಯೋಗಿ ಎನ್ನಿಸಿದರು ಎಂದು ವಿಶ್ರಾಂತ ಪ್ರಾಚಾರ್ಯ ವಿರೂಪಾಕ್ಷಿ ದೊಡಮನಿ ಹೇಳಿದರು.
ಶಿವ ಬಸವ ನಗರದ ಲಿಂಗಾಯತ ಭವನದಲ್ಲಿ ಅನುಭಾವ ಗೋಷ್ಠಿಯನ್ನು ಉದ್ದೇಶಿಸಿ ‘ಜೇಡರ ದಾಸಿಮಯ್ಯನವರ ಜೀವನ ಮತ್ತು ಆಧ್ಯಾತ್ಮಿಕ ಸಾಧನೆಯ’ ಕುರಿತು ಅಭ್ಯಾಸ ಪೂರ್ಣವಾಗಿ ಅನುಭಾವ ನೀಡಿದ ಅವರು ನೇಯ್ಗೆ ಕಾಯಕದ ಜೇಡರ ದಾಸಿಮಯ್ಯನವರು ಸಮಾಜದ ಸತ್ಯ, ಧರ್ಮ, ನ್ಯಾಯ, ನೀತಿಯ ಬಲವಾದ ಪ್ರತಿ ಪಾದಕರಾಗಿದ್ದರು.
ಸಮಾಜದವರ ಅನ್ಯಾಯ ,ಅನಾಚಾರದ ನಡೆಯನ್ನು ತಮ್ಮ ವಚನಗಳಲ್ಲಿ ನೇರವಾಗಿ ಖಂಡಿಸಿದ್ದುಂಟು. ಅವರದು ನಿರ್ಭಿತಿ, ನಿರ್ಭಿಡೆಯ ನಡೆ, ನೆಟ್ಟ ನೇರ ನುಡಿ. ಪತಿಯ ಮನದಿಂಗಿತವನ್ನು ಅರಿತು ನಡೆಯಬಲ್ಲ ದುಗ್ಗಳೆಯನ್ನು ಕೈಹಿಡಿದು ಸಂಸಾರ ಯೋಗಿ ಎನ್ನಿಸಿದರು. ತಮ್ಮ ನೂರಾರು ವಚನ ಗಳಲ್ಲಿ ಇಳೆ , ಬೆಳೆ ,ಗಾಳಿ ಬೆಳಕು ನೀಡಿದ ದೇವರಿಗೆ ಕೃತಜ್ಞರಾಗಿರಲು ತಿಳಿಸಿ ಎಲ್ಲವನ್ನೂ ನೀಡಿ ಮರೆತ ದೇವರು ಮಾತ್ರ ನಮ್ಮ ಪೂಜೆ, ಪ್ರಾರ್ಥನೆ, ಪ್ರಶಂಸೆಗೆ ಅರ್ಹ ಎಂದು ತಿಳಿಸಿದರು.
ನಮ್ಮ ನಮ್ಮೊಳಗಿನ ಅಷ್ಟ ಮದಗಳನ್ನು ಕಳೆದುಕೊಳ್ಳಲು ಶರಣರ ಸೂಳ್ನುಡಿಯ ಅವಶ್ಯಕತೆ ಇದೆ,ಕಡುದರ್ಪವೇರಿದ ಒಡಲೆಂಬ ಬಂಡೆಗೆ ಮೃಡ ಶರಣರ ನುಡಿ ಗಡಣವೆ ಕಡೆಗೀಲು. ನಿರಂತರ ಶರಣರ ಸತ್ಸಂಗದಲ್ಲಿ ಇದ್ದರೆ ಮಾತ್ರ ನಾವು ಶರಣರೆನ್ನಿಸಿಕೊಳ್ಳುತ್ತೇವೆ ಎನ್ನುವ ಜೇಡರ ದಾಸಮಯ್ಯನವರ ವಿಚಾರಗಳನ್ನು ಅವರ ವಚನ ವಿಶ್ಲೇಷಣೆಯೊಂದಿಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲೆಯ ಉಪಾಧ್ಯಕ್ಷೆ ಡಾ. ಗುರುದೇವಿ ಹುಲೆಪ್ಪನವರಮಠ ಅವರು ಇಂದಿನ ಜಾತಿ ವ್ಯವಸ್ಥೆಯ ಗೊಂದಲಗಳನ್ನು ನೀಗಲು ಶರಣರ ವಚನಗಳು ನಮಗೆ ಸಮರ್ಥ ಮಾರ್ಗದರ್ಶನ ನೀಡುತ್ತವೆ. ಶರಣರ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ಸಾಗಿದರೆ ಅವರು ತಲುಪಿದ ಗುರಿಯನ್ನು, ಅವರು ಏರಿದ ಎತ್ತರವನ್ನು ಏರಲು ಖಂಡಿತ ಸಾಧ್ಯ. ಆ ಸಾಧ್ಯತೆಯನ್ನು ಅರಿಯಲು ಅನುಭಾವದ ಅವಶ್ಯಕತೆ ಇದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಪಶುತ್ವ ದಿಂದ ಮಾನವತ್ವದೆಡೆಗೆ , ಮಾನವತ್ವದಿಂದ ದೈವತ್ವದೆಡೆಗೆ ಸಾಗುವ ಪ್ರಕ್ರಿಯೆಗೆ ಜೇಡರ ದಾಸಿಮಯ್ಯ ನಂತಹ ಶರಣರ ಮೌಲಿಕ ಜೀವನ ಮತ್ತು ಸಂದೇಶಗಳು ತುಂಬ ಸಹಕಾರಿಯಾಗಿವೆ ಎಂದರು. ಆಶಾ ಯಮಕನಮರಡಿ ಕಾರ್ಯಕ್ರಮ ನಿರ್ವಹಿಸಿದರು. ನ್ಯಾಯವಾದಿ ರಾವಸಾಹೇಬ ಪಾಟೀಲ ದಾಸೋಹ ಗೈದರು. ದಾಕ್ಷಾಯಣಿ ಪೂಜೇರಿ ಮತ್ತು ದಾಕ್ಷಾಯಣಿ ಕಾಪಸೆ ವಚನ ಪ್ರಾರ್ಥನೆ ಮತ್ತು ವಚನ ವಿಶ್ಲೇಷಣೆ ನೆರವೇರಿಸಿದರು. ಮಂಜುಳಾ ಹಾವನ್ನವರ ಸ್ವಾಗತ ಮಾಡಿದರು. ಡಾ. ರೋಹಿಣಿ ಗಂಗಾಧರಯ್ಯ ಅವರ ವಚನ ಗಾಯನವು ಕೇಳುಗರ ಮನಸೂರೆಗೊಂಡಿತು.ಪ್ರಭಾ ಪಾಟೀಲ ವಂದಿಸಿದರು. ನೂರಾರು ಸಂಖ್ಯೆಯಲ್ಲಿ ಶರಣ ಶರಣೆಯರು ಉಪಸ್ಥಿತರಿದ್ದರು.