Breaking News

ಮತ್ತೊಂದು ಸಮೀಕ್ಷೆಯಲ್ಲೂ ಅಚ್ಚರಿ ಫಲಿತಾಂಶ

Spread the love

ಮತ್ತೊಂದು ಸಮೀಕ್ಷೆಯಲ್ಲೂ ಅಚ್ಚರಿ ಫಲಿತಾಂಶ

ಯುವ ಭಾರತ ಸುದ್ದಿ ಬೆಂಗಳೂರು :
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವುದರ ಜತೆಗೆ ಬಹುಮತದ ಸನಿಹಕ್ಕೆ ಬರಲಿದೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಜನ್‌ ಕೀ ಬಾತ್‌ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.
ಏ.15 ರಿಂದ ಮೇ 1ರವರೆಗೆ ರಾಜ್ಯಾದ್ಯಂತ 30 ಸಾವಿರ ಮಂದಿಯನ್ನು ಸಂದರ್ಶಿಸಿ ಸಿದ್ಧಪಡಿಸಿರುವ ಈ ಸಮೀಕ್ಷಾ ವರದಿಯ ಪ್ರಕಾರ, ಬಿಜೆಪಿ 100-114 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದ್ದರೆ, ವಿರೋಧ ಪಕ್ಷವಾದ ಕಾಂಗ್ರೆಸ್‌ 86-98 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ. ಜೆಡಿಎಸ್‌ 20 ರಿಂದ 26 ಸ್ಥಾನಗಳಿಗೆ ಕುಸಿತ ಕಾಣಲಿದೆ. ಇತರರು 0-5 ಸ್ಥಾನಗಳನ್ನು ಗಳಿಸಲಿದ್ದಾರೆ.

ಮಾ.15 ರಿಂದ ಏ.11ರವರೆಗೆ ರಾಜ್ಯಾದ್ಯಂತ ನಡೆಸಲಾಗಿದ್ದ, ಏ.15ರಂದು ಪ್ರಕಟವಾಗಿದ್ದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಜನ್‌ ಕೀ ಬಾತ್‌ನ ಮೊದಲ ಸುತ್ತಿನ ಸಮೀಕ್ಷೆಯಲ್ಲಿ ಬಿಜೆಪಿ 98ರಿಂದ 109 ಸ್ಥಾನ ಗಳಿಸಬಹುದು ಎಂದು ಅಂದಾಜಿಸಲಾಗಿತ್ತು. ಅದಕ್ಕೆ ತುಲನೆ ಮಾಡಿ ನೋಡಿದರೆ, ಟಿಕೆಟ್‌ ವಂಚಿತರ ಬಂಡಾಯದ ನಡುವೆಯೂ ಬಿಜೆಪಿಯ ಸ್ಥಾನ ಗಳಿಕೆಯಲ್ಲಿ ಕೊಂಚ ಹೆಚ್ಚಳ ಕಂಡುಬಂದಿದೆ. ನಿರ್ಗಮಿತ ವಿಧಾನಸಭೆಯಲ್ಲಿ ಬಿಜೆಪಿ ಹೊಂದಿರುವ ಬಲಕ್ಕೆ ಹೋಲಿಸಿದರೆ, ಆಡಳಿತ ಪಕ್ಷದ ಸ್ಥಾನ ಕುಸಿತ ಕಂಡುಬರುತ್ತಿರುವುದು ಗೋಚರವಾಗುತ್ತಿದೆ. ಆದರೆ ಈ ಕುಸಿತ ಅಗಾಧ ಪ್ರಮಾಣದಲ್ಲಿಲ್ಲ. ಆಡಳಿತ ವಿರೋಧಿ ಅಲೆ ಅಲ್ಪ ಪ್ರಮಾಣದಲ್ಲಿ ಇದ್ದರೂ, ಅದು ಸರ್ಕಾರವನ್ನೇ ಬಲಿ ತೆಗೆದುಕೊಳ್ಳುವ ಮಟ್ಟಕ್ಕೆ ಇಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಸಮೀಕ್ಷೆ ಹೇಳುತ್ತಿದೆ.

ಮತ್ತೊಂದೆಡೆ, ಹಿಂದಿನ ಸಮೀಕ್ಷೆಯಲ್ಲಿ ಕಾಂಗ್ರೆಸ್‌ 89-97 ಸ್ಥಾನ ಗಳಿಸಬಹುದು ಎಂದು ತಿಳಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಗಮನಾರ್ಹ ಎನ್ನುವ ಬದಲಾವಣೆ ಏನೂ ಕಾಣುತ್ತಿಲ್ಲ. ವಿಧಾನಸಭೆಯಲ್ಲಿ ಕಾಂಗ್ರೆಸ್‌ ಹಾಲಿ 69 ಶಾಸಕರನ್ನು ಹೊಂದಿದೆ. ಅದಕ್ಕೆ ಹೋಲಿಸಿದರೆ ಆ ಪಕ್ಷದ ಬಲ ವೃದ್ಧಿಯಾಗುತ್ತಿರುವುದು ಕಂಡುಬರುತ್ತದೆ. ಆದರೆ ಆ ಪಕ್ಷದ ಸಂಖ್ಯೆ ಶತಕದ ಗಡಿಯನ್ನು ದಾಟುವುದಿಲ್ಲ ಎಂದು ಸಮೀಕ್ಷೆ ಅಂದಾಜಿಸಿದೆ. ಇನ್ನೊಂದೆಡೆ, ಜೆಡಿಎಸ್‌ 25-29 ಸ್ಥಾನಗಳನ್ನು ಗಳಿಸಬಹುದು ಎಂದು ಮೊದಲ ಸಮೀಕ್ಷೆಯಲ್ಲಿ ತಿಳಿಸಲಾಗಿತ್ತು. ಆದರೆ 2ನೇ ಸುತ್ತಿನ ಸಮೀಕ್ಷೆಯಲ್ಲಿ ಅದರ ಸ್ಥಾನ ಮತ್ತಷ್ಟುಕುಸಿದು, 20ರಿಂದ 26 ಸ್ಥಾನಗಳಿಗೆ ಇಳಿಕೆಯಾಗುತ್ತಿರುವುದು ಕಂಡುಬರುತ್ತಿದೆ. ಇದೇ ವೇಳೆ ಇತರರು 0-1 ಸ್ಥಾನ ಗಳಿಸಬಹುದು ಎಂದು ಮೊದಲ ಸಮೀಕ್ಷೆ ಹೇಳಿತ್ತು. ಈಗ 0-5 ರವರೆಗೂ ಸಂಪಾದಿಸುವುದು 2 ನೇ ಸುತ್ತಿನಲ್ಲಿ ಕಂಡುಬರುತ್ತಿದೆ ಎಂದು ಸಮೀಕ್ಷೆ ವಿಶ್ಲೇಷಿಸಿದೆ.

ಹಿಂದಿನ ಸಮೀಕ್ಷೆಗೆ ಹೋಲಿಕೆ ಮಾಡಿ ಶೇಕಡಾವಾರು ಮತ ಗಳಿಕೆಯನ್ನು ನೋಡಿದರೆ, ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳ ಶೇಕಡಾವಾರು ಮತ ಪ್ರಮಾಣದಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಆದರೆ ಜೆಡಿಎಸ್‌ನದ್ದು ಕೊಂಚ ಕುಸಿತ ಕಂಡುಬಂದಿದೆ ಎಂದು ಸಮೀಕ್ಷೆ ತಿಳಿಸಿದೆ.
ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್‌ ನಾಯಕತ್ವ ಹೊತ್ತಿರುವ ಫಲ ಎಂಬಂತೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಅನ್ನು ಹಿಂದಿಕ್ಕಿ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಜೆಡಿಎಸ್‌ ಒಂದಷ್ಟುಸ್ಥಾನಗಳನ್ನು ಕಳೆದುಕೊಳ್ಳಲಿದೆ. ಆದರೆ ಬಿಜೆಪಿಯ ಸ್ಥಾನಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ ಎಂದು ಸಮೀಕ್ಷೆ ಹೇಳಿದೆ. 2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್‌ 80, ಜೆಡಿಎಸ್‌ 37 ಸೀಟುಗಳನ್ನು ಗಳಿಸಿದ್ದವು.

ಕಾಂಗ್ರೆಸ್ಸಿಗೆ ಬಿಜೆಪಿಗಿಂತ ಅಧಿಕ ಶೇಕಡಾ ಮತ: ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಜನ್‌ ಕೀ ಬಾತ್‌ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ ಶೇ.38.5 ರಿಂದ ಶೇ.41.5, ಬಿಜೆಪಿ ಶೇ.38 ರಿಂದ ಶೇ.40.5, ಜೆಡಿಎಸ್‌ ಶೇ.14-ಶೇ.16.5, ಇತರರು ಶೇ.04 ರಿಂದ ಶೇ.7ರಷ್ಟುಮತಗಳನ್ನು ಪಡೆಯುತ್ತಾರೆ. ಶೇಕಡಾವಾರು ಮತ ಗಳಿಕೆಯಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಗಿಂತ ಮುಂದಿದೆ. ಆದರೆ ಅವು ಗೆಲ್ಲಬಲ್ಲ ಸ್ಥಾನಗಳಾಗಿ ಪರಿವರ್ತನೆಯಾಗುತ್ತಿಲ್ಲ. ಬಿಜೆಪಿಯ ಶೇಕಡಾವಾರು ಮತ ಕಡಿಮೆ ಇದ್ದರೂ ಸ್ಥಾನ ಗಳಿಕೆ ಪ್ರಮಾಣ ಹೆಚ್ಚಿದೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಜನ್‌ ಕೀ ಬಾತ್‌ ಮೊದಲ ಹಂತದ ಸಮೀಕ್ಷೆಯಲ್ಲಿ ಬಿಜೆಪಿ ಶೇ.37ರಿಂದ ಶೇ.39, ಕಾಂಗ್ರೆಸ್‌ ಶೇ.38ರಿಂದ ಶೇ.40, ಜೆಡಿಎಸ್‌ ಶೇ.16ರಿಂದ ಶೇ.18, ಇತರರು ಶೇ.5ರಿಂದ ಶೇ.7ರಷ್ಟುಮತ ಗಳಿಸಬಹುದು ಎಂದು ಅಂದಾಜಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಜೆಡಿಎಸ್‌ನ ಶೇಕಡಾವಾರು ಮತದಲ್ಲಿ ಇಳಿಕೆಯಾಗುತ್ತಿರುವುದು ಕಂಡುಬಂದಿದೆ ಎಂದು ಸಮೀಕ್ಷೆ ತಿಳಿಸಿದೆ.

ಶೇಕಡಾವಾರು ಮತ
ಪಕ್ಷ ಜನ್‌ ಕೀ ಬಾತ್‌ 2018
ಬಿಜೆಪಿ 38-40.5% 36.5%
ಕಾಂಗ್ರೆಸ್‌ 38.5-41.5% 38.0%
ಜೆಡಿಎಸ್‌ 14-16.5% 18.0%
ಇತರರು 04-07% 7.5%

ಸಮೀಕ್ಷೆ ಹೇಗೆ ನಡೆಯಿತು?: ಏಪ್ರಿಲ್‌ 15 ರಿಂದ ಮೇ 1ರವರೆಗೆ ರಾಜ್ಯಾದ್ಯಂತ 30 ಸಾವಿರ ಮಂದಿಯಿಂದ ಜನಾಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆಯನ್ನು ಸಿದ್ಧಪಡಿಸಲಾಗಿದೆ. ಅಭ್ಯರ್ಥಿಗಳ ಪಟ್ಟಿಬಿಡುಗಡೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ ಪ್ರಕ್ರಿಯೆಗಳೆಲ್ಲಾ ಮುಗಿದು ಪ್ರಚಾರದ ಅಬ್ಬರ ತಾರಕಕ್ಕೇರಿರುವ ಹಂತದಲ್ಲೇ ಈ ಸಮೀಕ್ಷೆ ನಡೆದಿರುವುದು ಗಮನಾರ್ಹ. ಇದೇ ಸಂಸ್ಥೆ ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ 2019 ರ ಲೋಕಸಭೆ ಚುನಾವಣೆ ಸೇರಿದಂತೆ ಭಾರತದಲ್ಲಿ 36 ಚುನಾವಣಾ ಸಮೀಕ್ಷೆಗಳನ್ನು ನಿಖರವಾಗಿ ನಡೆಸಿದ ಇತಿಹಾಸ ಹೊಂದಿದೆ. 2018 ರ ಕರ್ನಾಟಕ ಚುನಾವಣೆಯಲ್ಲೂ ಈ ಸಂಸ್ಥೆ ಸಮೀಕ್ಷೆ ನಡೆಸಿತ್ತು. ಇತರೆಲ್ಲಾ ಸಂಸ್ಥೆಗಳ ಸಮೀಕ್ಷೆಗಳಿಗಿಂತ ನಿಖರ ಅಂದಾಜನ್ನು ನೀಡಿದ್ದು ‘ಜನ್‌ ಕೀ ಬಾತ್‌’ ಹೆಗ್ಗಳಿಕೆಯಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

 

ಯಾರಿಗೆ ಎಷ್ಟು ಸ್ಥಾನ?
ವಿಧಾನಸಭೆ ಬಲ: 224 ಬಹುಮತಕ್ಕೆ: 113
ಪಕ್ಷ ಜನ್‌ ಕೀ ಬಾತ್‌ ಹಾಲಿ ಬಲ
ಬಿಜೆಪಿ 110-114 120 -(10-06)
ಕಾಂಗ್ರೆಸ್‌ 86-98 69 +(17​-29)
ಜೆಡಿಎಸ್‌ 20-26 32 -(12-06)
ಇತರರು 00-05 03 +(02)


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

15 − two =