ಕೆಳಮಟ್ಟದ ವ್ಯಕ್ತಿ ವಿರುದ್ಧ ಮಾತನಾಡಲಾರೆ : ಮತ್ತೊಮ್ಮೆ ಚನ್ನರಾಜ ಹಟ್ಟಿಹೊಳಿ ವಿರುದ್ಧ ಸಿಡಿದ ಸಾಹುಕಾರ್ !
ಬಾಗಿಲ ಕಾಯುವವ, ಬ್ಯಾಗ್ ಹಿಡಿಯುವನ, ಕಾರು ನಡೆಸುವವ ಎಮ್ ಎಲ್ ಸಿ ಆಗಿದ್ದಾನೆ. ಆ ರೀತಿಯ ಕೆಳಮಟ್ಟದ ವ್ಯಕ್ತಿಯ ವಿರುದ್ದ ನಾನು ಮಾತನಾಡುವುದಿಲ್ಲ ಎಂದು ಚನ್ನರಾಜ್ ಹಟ್ಟಿಹೊಳಿ ವಿರುದ್ದ ಶಾಸಕ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಯುವ ಭಾರತ ಸುದ್ದಿ ಬೆಳಗಾವಿ : ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ವಿರುದ್ಧ ಕೆಲ ದಿನಗಳ ಹಿಂದಷ್ಟೇ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಅವನ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದರು. ಇದೀಗ ಮತ್ತೆ ಅವರು ಚನ್ನರಾಜ್ ವಿರುದ್ಧ ಹರಿಹಾಯ್ದು ಆತ ಕೆಳಮಟ್ಟದ ವ್ಯಕ್ತಿ ಎಂದು ತೀವ್ರ ಲೇವಡಿ ಮಾಡಿದ್ದಾರೆ.
ಬಾಗಿಲು ಕಾಯುವ, ಗಾಡಿ ಹೊಡೆದು, ಬ್ಯಾಗ್ ಹಿಡಿಯುವವ ಎಮ್ ಎಲ್ ಸಿ . ಆ ಸಣ್ಣ ಮಟ್ಟದ ವ್ಯಕ್ತಿ ವಿರುದ್ದ ನಾನು ಮಾತನಾಡುವುದಿಲ್ಲ ಎಂದು ಚನ್ನರಾಜ ವಿರುದ್ದ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಕೋಟೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅವರು ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ ಎನ್ನುವ ವಿರೋಧಿಗಳ ಆರೋಪದ ಬಗ್ಗೆ ಉತ್ತರಿಸಿದ ಅವರು, ಗೋಕಾಕ ಕ್ಷೇತ್ರದಲ್ಲಿ ಬಂದು ಅವರು ಎದೆ ತಟ್ಟಿ ಹೇಳುವಾಗ ಎಲ್ಲಿ ಹೋಗಿತ್ತು ಇವರ ಶಿಷ್ಟಾಚಾರ. ನಾನು ರಾಜಹಂಸಗಡಕ್ಕೆ ಬಂದಾಗ ಶಿಷ್ಟಾಚಾರ ನೆನಪಾಗುತ್ತದೆ ಎಂದು ವ್ಯಂಗ್ಯ ಮಾಡಿದರು.
ಬೆಂಕಿ ಜೊತೆ ಸರಸ ಆಡುತ್ತಿದ್ದಾರೆ. ನಾನು ಪಕ್ಷ ಸಂಘಟನೆಗೆ ಬಂದರೆ ಶಿಷ್ಟಾಚಾರ ಆಗುತ್ತಾ ? ಯಾವ ಬೆಂಕಿ ಎಲ್ಲಿ ಎಂದು ಪ್ರಶ್ನಿಸಿದರು. ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಬಂದಿದೆ. ಅದಕ್ಕೆ ಇದು ಸರಕಾರಿ ಕಾರ್ಯಕ್ರಮ ವಾಗುತ್ತದೆ. ಶಿಷ್ಟಾಚಾರದಂತೆ ಇಲ್ಲಿ ಎಲ್ಲಾ ಕಾರ್ಯಕ್ರಮ ನಡೆಯಬೇಕು. ಅದಕ್ಕೆ ಮುಖ್ಯಮಂತ್ರಿಗಳು ಬರಬೇಕು. ಇದು ಕೇವಲ ಕಾಂಗ್ರೆಸ್ ಕಾರ್ಯಕ್ರಮವಾಗಬಾರದು ಎಂದು ಹೇಳಿದರು.
ಹಿರೇಬಾಗೇವಾಡಿ ಕೆರೆ ಒತ್ತುವರಿ ಗೋಲ್ ಮಾಲ್ ಆಗಿದೆ ಎನ್ನುತ್ತಿದ್ದ ಹೇಳಿಕೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ರಮೇಶ ಜಾರಕಿಹೊಳಿ ಅವರು, ಹಿರೇಬಾಗೇವಾಡಿ ಕೆರೆ ಒತ್ತುವರಿ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆಗಳೊಂದಿಗೆ ಮಾತನಾಡುವೆ. ಈಗ ಗಾಳಿ ಮಾತು ಬೇಡ. ಅವನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ತಮ್ಮ ಎದುರಾಳಿಗಳಿಗೆ ಎಚ್ಚರಿಕೆ ರವಾನಿಸಿದರು.