Breaking News

ಎರಡೂ ಕ್ಷೇತ್ರದಿಂದ ಸಿದ್ದು ಸ್ಪರ್ಧೆ : ಮನೆ ದೇವರ ನುಡಿಯೇನು ?

Spread the love

ಎರಡೂ ಕ್ಷೇತ್ರದಿಂದ ಸಿದ್ದು ಸ್ಪರ್ಧೆ : ಮನೆ ದೇವರ ನುಡಿಯೇನು ?

ಯುವ ಭಾರತ ಸುದ್ದಿ ಮೈಸೂರು :
ಕಳೆದ ಕೆಲ ತಿಂಗಳಿಂದ ಕೋಲಾರ ಸುದ್ದಿಯಲ್ಲಿದೆ. ಕರ್ನಾಟಕ ವಿಧಾಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಇಲ್ಲಿಂದ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಅದು ಕಳೆದ ಕೆಲ ತಿಂಗಳಿಂದ ಅದು ಸುದ್ದಿಯಲ್ಲಿದೆ. ಈಗ, ಮೋದಿ ಉಪನಾಮದ ಬಗ್ಗೆ 2019 ರ ಲೋಕಸಭೆ ಚುನಾವಣೆಗೆ ಮುನ್ನ ಇದೇ ಕೋಲಾರದಲ್ಲಿನ ತಮ್ಮ ಹೇಳಿಕೆಗಾಗಿ ಶಿಕ್ಷೆಗೊಳಗಾದ ನಂತರ ರಾಹುಲ್‌ ಗಾಂಧಿಯವರು ತಮ್ಮ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ನಂತರ ಮತ್ತೆ ಸುದ್ದಿಯಲ್ಲಿದೆ. ಸೂರತ್ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟದ ಆರೋಪದ ಮೇಲೆ ದೋಷಾರೋಪಣೆ ಮಾಡಿ ಎರಡು ವರ್ಷ ಶಿಕ್ಷೆ ವಿಧಿಸಿದ ನಂತರ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಹೀಗಾಗಿ ಈಗ ಕೋಲಾರ ದೇಶಾದ್ಯಂತ ಸುದ್ದಿಯಲ್ಲಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದಲೂ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮುಂಬರುವ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಆದರೆ, 2018ರ ವಿಧಾನಸಭೆ ಚುನಾವಣೆಯಂತೆ ಸಿದ್ದರಾಮಯ್ಯ ಈ ಬಾರಿಯೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವರು ಕೋಲಾರದಿಂದಲೂ ಸ್ಪರ್ಧಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದಕ್ಕೆ ಹೈ ಕಮಾಂಡ್‌ ಸಮ್ಮತಿ ನೀಡಬೇಕಷ್ಟೆ.
ಸಿದ್ದರಾಮಯ್ಯ ಕರ್ನಾಟಕ ರಾಜಕಾರಣದಲ್ಲಿ ಎತ್ತರದ ನಾಯಕ. ಅವರು 2013ರಿಂದ 2018 ರ ವರೆಗೆ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು ಮತ್ತು ಎರಡು ಬಾರಿ (1996 ಮತ್ತು 2004) ಉಪಮುಖ್ಯಮಂತ್ರಿಯಾಗಿದ್ದರು. ಸಿದ್ದರಾಮಯ್ಯ ರಾಜಕೀಯ ಪಯಣ ಚಾಮುಂಡೇಶ್ವರಿಯಲ್ಲಿ ಆರಂಭವಾದರೂ 2008ರಲ್ಲಿ, ಅವರು ವರುಣಾದಿಂದ ಸ್ಪರ್ಧಿಸಿದರು, ಹಾಗೂ ಅವರು 2018 ರವರೆಗೂ ಅಲ್ಲಿಯ ಶಾಸಕರಾಗಿದ್ದರು. 2018 ರ ವಿಧಾನಸಭಾ ಚುನಾವಣೆಯಲ್ಲಿ, ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರ ತೊರೆದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಮೈಸೂರಿನ ಚಾಮುಂಡೇಶ್ವರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರು. ಆದರೆ ಅವರ ಕೈಹಿಡಿದ್ದು ಮಾತ್ರ ಬಾದಾಮಿ ಕ್ಷೇತ್ರ. ಬಾದಾಮಿಯಲ್ಲಿ ಅವರು ಹಾಲಿ ಸಚಿವ ಶ್ರೀರಾಮುಲು ವಿರುದ್ಧ ಚುನಾವಣಾ ಸೆಣಸಾಟದಲ್ಲಿ 2000 ಕ್ಕಿಂತ ಕಡಿಮೆ ಮತಗಳಿಂದ ಗೆದ್ದಿದ್ದರು. ಇದೇವೇಳೆ ಚಾಮುಂಡೇಶ್ವರಿಯಲ್ಲಿ ಭರ್ಜರಿ ಮತಗಳ ಅಂತರದಿಂದ ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರ ಎದುರು ಪರಾಭವಗೊಂಡಿದ್ದರು.

ಕಾಂಗ್ರೆಸ್‌ ಶನಿವಾರ ಮುಂಬರುವ ವಿಧಾನಸಭೆ ಚುನಾವಣೆಯ ಮೊದಲನೇ ಪಟ್ಟಿ ಬಿಡುಗಡೆ ಮಾಡಿದ್ದು, ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಆದರೆ, ಕೋಲಾರವೂ ಅವರ ಲಿಸ್ಟ್‌ನಲ್ಲಿದೆ ಎಂದು ಹೇಳಲಾಗಿದೆ.

ಹೈಕಮಾಂಡ್‌ ಮುಂದೆ ಕೋಲಾರ ಹಾಗೂ ವರುಣಾ ಕ್ಷೇತ್ರಗಳೆರಡರಿಂದಲೂ ತಾನು ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ನಿರ್ಧಾರ ತೆಗೆದುಕೊಳ್ಳುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಹೈಕಮಾಂಡ್ ಒಪ್ಪಿದರೆ ಎರಡು ಕ್ಷೇತ್ರದಿಂದಲೂ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ. ಪ್ರಸ್ತುತ ಸಿದ್ದರಾಮಯ್ಯ ಸ್ಪರ್ಧಿಸಲು ಬಯಸುತ್ತಿರುವ ಕೋಲಾರ ಹಾಗೂ ಹಾಲಿ ಪ್ರತಿನಿಧಿಸುತ್ತಿರುವ ಕ್ಷೇತ್ರ ಬಾದಾಮಿಗೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಪಕ್ಷದ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ಕೋಲಾರ ಹಾಗೂ ವರುಣಾದಿಂದ ಸ್ಪರ್ಧಿಸಿ ಎರಡೂ ಸ್ಥಾನಗಳಿಂದ ಗೆದ್ದರೆ, ಅವರು ವರುಣಾ ಸ್ಥಾನವನ್ನು ತೆರವು ಮಾಡಲು ಬಯಸಿದ್ದಾರೆ ಮತ್ತು ನಂತರದ ಉಪಚುನಾವಣೆಯಲ್ಲಿ ಯತೀಂದ್ರ ಅವರನ್ನು ಅಲ್ಲಿಂದ ಕಣಕ್ಕಿಳಿಸಲು ಯೋಜಿಸಿದ್ದಾರೆ. ಯಾಕೆಂದರೆ ಅವರಿಗೆ ಪುತ್ರ ಯತೀಂದ್ರ ಅವರ ಭವಿಷ್ಯವೂ ಮುಖ್ಯ. ಅವರಿಗೆ ವರುಣಾ ಕ್ಷೇತ್ರ ಹೆಚ್ಚು ಸುರಕ್ಷಿತ. ಆದರೆ ಅದು ಪುತ್ರ ಯತೀಂದ್ರ ಅವರಿಗೂ ಹೆಚ್ಚು ಸುರಕ್ಷಿತ. ಹೀಗಾಗಿ ಅವರು ಎರಡು ಕ್ಷೇತ್ರಗಳಲ್ಲಿ ನಿಂತು ಎರಡರಲ್ಲಿಯೂ ಗೆದ್ದರೆ ವರುಣಾ ಕ್ಷೇತ್ರವನ್ನು ಬಿಡಲು ಬಯಸಿದ್ದಾರೆ ಎನ್ನಲಾಗಿದೆ. ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಅವರಿಗೆ ಕೋಲಾರ ಅವರಿಗೆ ಎರಡನೇ ಸುರಕ್ಷಿತ ಕ್ಷೇತರವಾಗಿ ಕಂಡಿದೆ.

ಸಿದ್ದರಾಮಯ್ಯ ಅವರ ಮನೆದೇವರಾಗಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿಯಲ್ಲಿರುವ ಚಿಕ್ಕಮ್ಮ ತಾಯಿ ದೇವರು ಈ ಹಿಂದೆಯೇ ಒಂದು ಕ್ಷೇತ್ರದಲ್ಲಿ ನಿಂತರೆ ಸಿದ್ದರಾಮಯ್ಯ ಅವರಿಗೆ ಕಷ್ಟ ಎಂದು ಯತೀಂದ್ರ ಅವರಿಗೆ ಭವಿಷ್ಯ ನುಡಿದಿತ್ತು. ಒಂದೇ ಕಡೆ ನಿಂತರೆ ಗೆಲುವು ಕಷ್ಟ, ಪ್ರಬಲ ಶಕ್ತಿಗಳ ವಿರೋಧವಿದೆ. ಎರಡು ಕಡೆ ಬಾಹುಬಲ ಚಾಚಬೇಕು ಎಂದು ಹೇಳಿತ್ತು. ಹೀಗಾಗಿ ಒಂದುವೇಳೆ ಕೋಲಾರ ಇಲ್ಲವಾದರೆ ಹಾಲಿ ಪ್ರತಿನಿಧಿಸುತ್ತಿರುವ ಬಾದಾಮಿಯಲ್ಲಿ ಅವರು ಕಣಕ್ಕಳಿಯುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಯಾಕೆಂದರೆ ಕೆಲವೇ ದಿನಗಳ ಹಿಂದೆ ಬಾದಾಮಿಯಲ್ಲಿ ರೋಡ್‌ ಶೋ ಸಹ ಮಾಡಿ ಬಂದಿದ್ದಾರೆ. ಆದರೆ ಕಳೆದ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಿಂದ ಗೆದ್ದಿರುವುದರಿಂದ ಅವರಿಗೆ ಬಾದಾಮಿಗಿಂತ ಕೋಲಾರ ಹೆಚ್ಚು ಸುರಕ್ಷಿತವೇಂದು ಕಂಡಿರಲೂಬಹುದು. ಮತ್ತು ಬಾದಾಮಿಯಲ್ಲಿ ಕಳೆದ ಸಲದಂತೆ ಬಿಜೆಪಿ ಅಚ್ಚರಿ ಅಭ್ಯರ್ಥಿಗಳನ್ನೂ ನಿಲ್ಲಿಸಬಹುದು.ಹೈಕಮಾಂಡ್​ ಇದಕ್ಕೆ ಗ್ರೀನ್​ ಸಿಗ್ನಲ್​ ನೀಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕೋಲಾರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಯಾಕೆ ಬಯಸಿದ್ದಾರೆ..?
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿ ದಲಿತ, ಮುಸ್ಲಿಂ, ಕುರುಬ ಮತದಾರರು ಇದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲ ಪಕ್ಷಗಳಾಗಿವೆ. ಅಹಿಂದ ಸಮುದಾಯ ಈಗ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ, ತಮ್ಮ ಆದ್ಯತೆಯ ನಾಯಕನನ್ನಾಗಿ ಮಾಡಿಕೊಂಡಿದೆ. ಲಿಂಗಾಯತರು ಮತ್ತು ಒಕ್ಕಲಿಗರ ನಂತರ, ಕುರುಬ ಸಮುದಾಯವು ರಾಜ್ಯದಲ್ಲಿ ದೊಡ್ಡ ಸಮುದಾಯವಾಗಿದೆ.
ಕೋಲಾರದಲ್ಲಿ ಗೆಲುವನ್ನು ನಿರ್ಧರಿಸುವ ಸಮುದಾಯಗಳಲ್ಲಿ ಇದು ಕೂಡ ಒಂದು. ಅದರೊಂದಿಗೆ ಕೋಲಾರದ ಚುನಾವಣಾ ಫಲಿತಾಂಶದಲ್ಲಿ ಮುಸ್ಲಿಂ ಮತದಾರರು ಮಹತ್ವದ ಪಾತ್ರ ವಹಿಸುತ್ತಾರೆ. ಸಿದ್ಧರಾಮಯ್ಯನವರ ಜಾತ್ಯತೀತ ನಿಲುವು ಅವರನ್ನು ಯಾವಾಗಲೂ ಮುಸ್ಲಿಂ ಜನಸಂಖ್ಯೆಗೆ ಮೆಚ್ಚಿದೆ – ಅವರು ಬಹುಶಃ ಕೋಲಾರವನ್ನು ಆಯ್ಕೆ ಮಾಡಲು ಇದು ಮುಖ್ಯ ಕಾರಣ. ಕೋಲಾರ ಬಹುತೇಕ ಕಾಂಗ್ರೆಸ್ಸೇತರ ಪಕ್ಷವಾದ ಜನತಾ ಪರಿವಾರದ ಪಕ್ಷಗಳಿಗೇ ಮಣೆ ಹಾಕಿದೆ. ಆದರೆ ಸಿದ್ದರಾಮಯ್ಯ ಅವರು ಮೂಲತಃ ಜನತಾ ಪರಿವಾರದಿಂದಲೇ ಬಂದವರು. ಹೀಗಾಗಿ ಅವರಿಗೆ ಜನತಾ ಪರಿವಾರದ ನಾಯಕರ ಒಡನಾಟವೂ ಬಹಳ ಚೆನ್ನಾಗಿದೆ. ಅದನ್ನು ತನ್ನ ಪರವಾಗಿ ಮಾಡಿಕೊಳ್ಳಬಹುದೆಂಬ ವಿಶ್ವಾಸವೂ ಇದ್ದಂತೆ ತೋರುತ್ತಿದೆ. ಈ ಎಲ್ಲ ಕಾರಣಗಳಿಂದ ಅವರು ಇದನ್ನು ಹೆಚ್ಚು ಸುರಕ್ಷಿತ ಎಂದು ಭಾವಿಸಿದಂತೆ ತೋರುತ್ತಿದೆ.

ಕೋಲಾರ ಕ್ಷೇತ್ರದ ಚುನಾವಣಾ ಫಲಿತಾಂಶ…
ಕೋಲಾರ ಕ್ಷೇತ್ರವು ನಗರ ಹಾಗೂ ಗ್ರಾಮೀಣದಿಂದ ಕೂಡಿದ ಕ್ಷೇತ್ರವಾಗಿದ್ದು, ಸುಮಾರು ಶೇಕಡಾ 40ರಷ್ಟು ನಗರ ಜನಸಂಖ್ಯೆ ಹೊಂದಿದೆ. ಕರ್ನಾಟಕ ರಾಜ್ಯ ರಚನೆಯಾದ ನಂತರದಲ್ಲಿ ನಡೆದ ಚುನಾವಣೆಗಳಲ್ಲಿ ಈ ಸ್ಥಾನವನ್ನು ಕಾಂಗ್ರೆಸ್‌ ಕೇವಲ ಐದು ಬಾರಿ ಗೆದ್ದಿದೆ. ಒಂಬತ್ತು ಸಲ ಕಾಂಗ್ರೆಸ್ಸೇತರರು ಗೆಲುವು ಸಾಧಿಸಿದ್ದಾರೆ. 1983 ರಿಂದ, ಕಾಂಗ್ರೆಸ್ ಈ ಸ್ಥಾನವನ್ನು ಕೇವಲ ಎರಡು ಬಾರಿ (1989 ಮತ್ತು 2004) ಗೆದ್ದಿದೆ. 2018 ರ ವಿಧಾನಸಭೆ ಚುನಾವಣೆಯಲ್ಲಿ, ಜನತಾ ದಳ (ಜಾತ್ಯತೀತ) ಕೆ. ಶ್ರೀನಿವಾಸ ಗೌಡ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. 2008 ಮತ್ತು 2013 ರಲ್ಲಿ, ಈ ಸ್ಥಾನವನ್ನು ಸ್ವತಂತ್ರವಾಗಿ ಸ್ಪರ್ಧಿಸಿ ಆರ್. ವರ್ತೂರು ಪ್ರಕಾಶ್ ಇಲ್ಲಿ ಗೆಲುವು ಸಾಧಿಸಿದ್ದರು.
2004 ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಈ ಸ್ಥಾನವನ್ನು ಗೆದ್ದುಕೊಂಡಿತ್ತು. ವಿಶೇಷವೆಂದರೆ 2018 ರಲ್ಲಿ ಜೆಡಿಎಸ್ ನಿಂದ ಗೆದ್ದ ಕೆ ಶ್ರೀನಿವಾಸ ಗೌಡರೇ 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.
ಚುನಾವಣಾ ಇತಿಹಾಸ ನೋಡಿದರೆ ಕೋಲಾರವು ಕಾಂಗ್ರೆಸ್‌ಗೆ ಕಠಿಣ ಸವಾಲಾಗಿದೆ.- 2018 ರಲ್ಲಿ 24 ಶೇಕಡಾ ಮತಗಳಿಂದ ಸೋತಿತ್ತು, 2013 ರಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. 2008 ರಲ್ಲಿಯೂ ಭಾರಿ ಅಂತರದಿಂದ ಸೋತಿತ್ತು. ಕೋಲಾರ ಮತಕ್ಷೇತ್ರದ ಮತದಾರರು ಜನತಾ ಪರಿವಾರದ ಕಡೆ ಹೆಚ್ಚು ಬಾರಿ ಒಲವು ತೋರಿರುವುದು ಕಂಡುಬರುತ್ತದೆ. 1983 ಮತ್ತು 1985ರ ಚುನಾವಣೆಯಲ್ಲಿ ಜನತಾ ಪಕ್ಷವು ಗೆಲುವು ಸಾಧಿಸಿತ್ತು. ಆದರೆ 1989ರಲ್ಲಿ ಕಾಂಗ್ರೆಸ್ ಈ ಸ್ಥಾನವನ್ನು ಗೆದ್ದಿತ್ತು. 1994 ರಲ್ಲಿ ಮತ್ತೊಮ್ಮೆ ಜನತಾದಳ ಈ ಸ್ಥಾನವನ್ನು ಗೆದ್ದಿತ್ತು ಹಾಗೂ 1999ರಲ್ಲಿ ಉಳಿಸಿಕೊಂಡಿತು.
ಶಾಸಕರಾದ ಶ್ರೀನಿವಾಸ ಗೌಡರು 1994 ರಿಂದ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದ ಮತದಾರರ ಮೇಲೆ ಅವರಿಗೆ ಬಲವಾದ ಹಿಡಿತವಿದೆ.ಅವರು ಆರು ವಿಧಾನಸಭಾ ಚುನಾವಣೆಗಳಲ್ಲಿ ನಾಲ್ಕು ಬಾರಿ ಈ ಸ್ಥಾನವನ್ನು ಗೆದ್ದಿದ್ದಾರೆ. ಆದರೆ, ಅವರು ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಇಲ್ಲಿ ಶ್ರೀನಿವಾಸ ಗೌಡರು ಯಾರಿಗೆ ಬೆಂಬಲಿಸುತ್ತಾರೆ ಎಂಬುದು ಸಹ ಗಣನೆಗೆ ಬರುತ್ತದೆ. ಅವರು ಸ್ಪರ್ಧಿಸದಿರುವುದು ಜೆಡಿಎಸ್‌ ಅಥವಾ ಬಿಜೆಪಿ ಅಥವಾ ಕಾಂಗ್ರೆಸ್‌ ಇವರಲ್ಲಿ ಯಾರಿಗೆ ಲಾಭ ತಂದುಕೊಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

19 − fifteen =