Breaking News

ನೇತ್ರದಾನ ವಾಗ್ದಾನ: ಮತ್ತೊಬ್ಬರಿಗೆ ಮಾದರಿ ನಡೆ ಪ್ರಮಾಣ ಪತ್ರ ವಿತರಣೆಯಲ್ಲಿ ಎನ್‌ಎಸ್‌ಎಸ್ ವಿಭಾಗೀಯ ಅಧಿಕಾರಿ ಪ್ರೊ.ಅಂಬೋರೆ ಶ್ಲಾಘನೆ

Spread the love

ನೇತ್ರದಾನ ವಾಗ್ದಾನ: ಮತ್ತೊಬ್ಬರಿಗೆ ಮಾದರಿ ನಡೆ
ಪ್ರಮಾಣ ಪತ್ರ ವಿತರಣೆಯಲ್ಲಿ ಎನ್‌ಎಸ್‌ಎಸ್ ವಿಭಾಗೀಯ ಅಧಿಕಾರಿ ಪ್ರೊ.ಅಂಬೋರೆ ಶ್ಲಾಘನೆ

ಯುವ ಭಾರತ ಸುದ್ದಿ ಬೆಳಗಾವಿ
ಎನ್‌ಎಸ್‌ಎಸ್ ಸ್ವಯಂ ಸೇವಕರು ನೇತ್ರದಾನ ಮಾಡುವ ವಾಗ್ದಾನ ಮಾಡಿರುವುದು ಬಹಳ ಹೆಮ್ಮೆಯ ಸಂಗತಿಯಾಗಿದ್ದು, ನಿಮ್ಮ ಈ ನಡೆಯು ಆದರ್ಶನೀಯವಾಗಿದೆ ಎಂದು ಬೆಳಗಾವಿ ವಿಭಾಗದ ಎನ್‌ಎಸ್‌ಎಸ್ ವಿಭಾಗೀಯ ಅಧಿಕಾರಿ ಪ್ರೊ.ರವಿಕುಮಾರ್ ಅಂಬೋರೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಕೇರೂರ ಪಪೂ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ನೇತ್ರದಾನ ಮಾಡುವ ವಾಗ್ದಾನ ಮಾಡಿದ ಎನ್‌ಎಸ್‌ಎಸ್ ಸ್ವಯಂ ಸೇವಕರಿಗೆ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮತ್ತೊಬ್ಬರ ಬಾಳಿಗೆ ಬೆಳಕಾಗುವುದು ಉತ್ತಮ ಸಾಮಾಜಿಕ ನಡೆಯಾಗಿದೆ. ಈ ನಿಟ್ಟಿನಲ್ಲಿ ನೀವೆಲ್ಲರೂ ಬಹಳ ಪುಣ್ಯ ಮಾಡಿದ್ದೀರಿ. ನೇತ್ರದಾನ ವಾಗ್ದಾನ ಮಾಡುವ ಮೂಲಕ ತಾವು ನಿಜವಾದ ಸೇವೆಗೆ ಅಣಿಯಾಗಿದ್ದೀರಿ ಎಂಬುವುದನ್ನು ಸಾಬೀತುಪಡಿಸಿದಂತಾಗಿದೆ. ನಿಮ್ಮ ನಡೆ ಶ್ಲಾಘನೀಯವಾಗಿದ್ದು, ಇತರರಿಗೂ ಮಾದರಿಯಾಗಿದೆ. ಮಾತ್ರವಲ್ಲ, ನಿಮ್ಮ ಈ ಕಾರ್ಯವು ಇತರೆ ಸ್ವಯಂ ಸೇವಕರಿಗೂ ಮುನ್ನುಡಿಯಾಗಿದೆ ಎಂದು ಹೇಳಿದರು.
ಸಣ್ಣ ವಯಸ್ಸಿನಲ್ಲಿಯೇ ತಾವು ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಂಡಿದ್ದೀರಿ. ಜತೆಗೆ ಕೆಲವರು ಕುಟುಂಬದ ಸದಸ್ಯರಿಗೆ ಮನವರಿಕೆ ಮಾಡಿ ನೇತ್ರದಾನ ವಾಗ್ದಾನ ಮಾಡಿಸುವ ಕಾರ್ಯ ಮಾಡಿರುವುದು ನಿಮ್ಮ ಪ್ರೇರಣೆ, ಉತ್ಸಾಹ ಮೆಚ್ಚುವಂತಹದ್ದು. ನೇತ್ರದಾನ ವಾಗ್ದಾನ ಮಾಡಿದ ತಾವೆಲ್ಲರೂ ಅತ್ಯುತ್ತಮ ಸೇವಾ ಸ್ವಯಂ ಸೇವಕರು ಎಂದು ಬಣ್ಣಿಸಿದರು.
ಎನ್‌ಎಸ್‌ಎಸ್ ಚಟುವಟಿಕೆಗಳು ಹೀಗೇ ನಿರಂತರವಾಗಿ ನಡೆಯಲಿ. ಮನೆಯಲ್ಲಿಯೂ ಸೇವಾ ಮನೋಭಾವನೆ ಬೆಳೆಸಿಕೊಳ್ಳುವ ಮೂಲಕ ಪೋಷಕರಿಗೆ ಸಹಾಯ ಮಾಡಬೇಕು ಎಂದೂ ಅವರು ಸಲಹೆ ನೀಡಿದರು.
ಸೇವಾ ಮನೋಭಾವನೆಯ ಮೂಲಕ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಕೌಟುಂಬಿಕ ಮತ್ತು ಸಾಮಾಜಿಕ ಜವಾಬ್ದಾರಿ ಅರಿತಾಗ ಸೇವೆಯ ನೈಜ ಅರ್ಥವಾಗುತ್ತದೆ ಎಂದರು. ಪಠ್ಯೇತರ ಚಟುವಟಿಕೆಯಿಂದಾಚೆಗೆ ವಿದ್ಯಾರ್ಥಿಗಳು ಹೊಸ ನೋಟ ಬೀರಬೇಕು ಎಂಬ ಕಾರಣಕ್ಕೆ ಎನ್‌ಎಸ್‌ಎಸ್ ಸೇವೆಯತ್ತ ವಿದ್ಯಾರ್ಥಿಗಳು ಧಾವಿಸಬೇಕು. ಎನ್‌ಎಸ್‌ಎಸ್ ಸೇವೆಯ ಮೂಲಕ ನಿಮ್ಮಲ್ಲಿರುವ ವ್ಯಕ್ತಿತ್ವವನ್ನು ಕೂಡ ವಿಕಸನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕನ್ನಡಪ್ರಭ ಬೆಳಗಾವಿ ಬ್ಯುರೋ ಮುಖ್ಯಸ್ಥ ಬ್ರಹ್ಮಾನಂದ ಎನ್. ಹಡಗಲಿ ಮಾತನಾಡಿ, ನೇತ್ರದಾನ ಮಾಡುವ ವಾಗ್ದಾನ ಮಾಡಿದ ತಾವು ಒಂದು ರೀತಿಯ ರಾಷ್ಟ್ರಕ್ಕೆ ಸೇವೆಯನ್ನೇ ಮಾಡಿದ್ದೀರಿ. ಮತ್ತೊಬ್ಬರಿಗೆ ಸ್ಫೂರ್ತಿದಾಯಕ ಕಾರ್ಯವನ್ನು ಮಾಡಿರುವುದು ಶ್ಲಾಘನೀಯ ಎಂದರು.
ಎನ್‌ಎಸ್‌ಎಸ್ ಕೇವಲ ನಿಮಗೆ ಸೇವೆಯನ್ನು ಮಾಡುವುದನ್ನು ಮಾತ್ರ ಕಲಿಸುವುದಿಲ್ಲ. ಬದುಕಿನಲ್ಲಿ ಶಿಸ್ತು, ಆತ್ಮಸ್ಥೈರ್ಯ, ಸೇವಾ ಮನೋಭಾವನೆಯನ್ನೂ ಕಲಿಸುತ್ತದೆ. ಜತೆಗೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಕೂಡ ಕಲಿಸಿಕೊಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಆರ್.ಬಾಗಾಯಿ ಮಾತನಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಶ್ರೀಶೈಲ ಕೋಲಾರ ಅವರು ಎನ್‌ಎಸ್‌ಎಸ್ ಸ್ವಯಂ ಸೇವಕರು ಕೈಗೊಂಡ ಕಾರ್ಯಕ್ರಮಗಳ ವಿವರಗಳನ್ನು ತೆರೆದಿಟ್ಟರು. ನಂತರ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಅನಿಲ ದಲಾಲ, ವಿರುಪಾಕ್ಷ ಕವಟಗಿ, ಉಪನ್ಯಾಸಕರಾದ ಎಸ್.ಎಂ.ಕುಲಕರ್ಣಿ, ಅಮೂಲ್ ದಾನೋಳೆ, ಎ.ಟಿ.ಬಾನೆ, ಸಂಜೀವ ಬಾನೆ, ಗಣಪತಿ ಪಾಟೀಲ್, ಕವಿತಾ ಮಲಬನ್ನವರ್, ಪ್ರತಿಭಾ ಒಟ್ನಾಳ, ಸ್ವಾತಿ ಮಾಳಿ ಸೇರಿದಂತೆ ಇತರರು ಇದ್ದರು. ರಮೇಶ ಬಿ.ಎನ್. ನಿರೂಪಿಸಿದರು. ಎಸ್.ಎಂ.ತೇಲಿ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಲಕ್ಷ್ಮಿ ಬಾಡಕರ್ ಪ್ರಾರ್ಥಿಸಿದರೆ, ಅಂಕಿತಾ ಮತ್ತು ಸಾವಿತ್ರಿ ಎನ್‌ಎಸ್‌ಎಸ್ ಗೀತೆ ಹಾಡಿದರು.
———-
ಬಾಕ್ಸ್…
೧೦೫ ಜನರಿಗೆ ನೇತ್ರದಾನ ವಾಗ್ದಾನ ಪ್ರಮಾಣ ಪತ್ರ ವಿತರಣೆ
ಕೇರೂರು ಪಪೂ ಕಾಲೇಜಿನ ಎನ್‌ಎಸ್‌ಎಸ್ ಸ್ವಯಂ ಸೇವಕರು ಸೇರಿದಂತೆ ಒಟ್ಟು ೧೦೫ ಜನರು ನೇತ್ರದಾನ ವಾಗ್ದಾನ ಮಾಡಿರುವ ಪ್ರಮಾಣ ಪತ್ರಗಳನ್ನು ಬೆಳಗಾವಿ ವಿಭಾಗದ ಎನ್‌ಎಸ್‌ಎಸ್ ವಿಭಾಗೀಯ ಅಧಿಕಾರಿ ಪ್ರೊ.ರವಿಕುಮಾರ್ ಅಂಬೋರೆ, ಕನ್ನಡಪ್ರಭ ಬೆಳಗಾವಿ ಬ್ಯೂರೋ ಮುಖ್ಯಸ್ಥ ಬ್ರಹ್ಮಾನಂದ ಎನ್. ಹಡಗಲಿ, ಪ್ರಾಚಾರ್ಯ ಎಂ.ಆರ್.ಬಾಗಾಯಿ ವಿತರಿಸಿದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

eight − two =