Breaking News

ನ್ಯಾಯಾಲಯ ಕಟ್ಟಡಗಳಿಗೆ ಶಂಕುಸ್ಥಾಪನೆ : ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಮುಖ್ಯ ನ್ಯಾಯಮೂರ್ತಿ ಕಳವಳ

Spread the love

ನ್ಯಾಯಾಲಯ ಕಟ್ಟಡಗಳಿಗೆ ಶಂಕುಸ್ಥಾಪನೆ : ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಮುಖ್ಯ ನ್ಯಾಯಮೂರ್ತಿ ಕಳವಳ

ಯುವ ಭಾರತ ಸುದ್ದಿ ಬೆಳಗಾವಿ :
ಭೇಟಿ ಪಡಾವೋ ಭೇಟಿ ಬಚಾವೋ ಎಂದು ಕೇಂದ್ರ ಸರಕಾರ ಆಂದೋಲನ ಆರಂಭಿಸಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆಯಬೇಕಾದರೆ ನಾವು ಭೇಟೋಂಕೋ ಪಡಾವೋ(ಗಂಡು ಮಕ್ಕಳಿಗೆ ಕಲಿಸಿ) ಅಂದರೆ ನಮ್ಮ ಮನೆಯ ಗಂಡು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಪ್ರತಿಪಾದಿಸಿದರು.

ಬೆಳಗಾವಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹೆಚ್ಚುವರಿ ನ್ಯಾಯಾಲಯ ಕಟ್ಟಡದ(ನೆಲಮಹಡಿ) ಉದ್ಘಾಟನಾ ಸಮಾರಂಭ ಹಾಗೂ ವಕೀಲರ ಭವನದ ಎರಡನೇ ಅಂತಸ್ತಿನ ಶಂಕುಸ್ಥಾಪನೆ ಹಾಗೂ ಖಾನಾಪುರ ನ್ಯಾಯಾಧೀಶರ ವಸತಿಗೃಹಗಳ ಅಡಿಗಲ್ಲು ಮತ್ತು ರಾಮದುರ್ಗ ನ್ಯಾಯಾಲಯದ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ನಗರದ ನೂತನ ನ್ಯಾಯಾಲಯ ಆವರಣದಲ್ಲಿ ಶನಿವಾರ(ಜ.21) ನೆರವೇರಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಆ್ಯಸಿಡ್ ದಾಳಿಯಂತಹ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಈ ಸಂದರ್ಭದಲ್ಲಿ ಮಹಿಳೆಯರ ಜತೆ ಘನತೆಯಿಂದ ನಡೆದುಕೊಳ್ಳುವುದನ್ನು ನಮ್ಮ ಹುಡುಗರಿಗೆ ನಾವು ತಿಳಿಸಿಕೊಡುವ ಕಾಲ ಬಂದಿದೆ.‌ ಹೆಣ್ಣುಮಕ್ಕಳನ್ನು ಗೌರವಿಸುವುದನ್ನು ನಮ್ಮ ಮಕ್ಕಳಿಗೆ ಕಲಿಸಿದಾಗ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವುದು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಉತ್ತಮ ನ್ಯಾಯಾಂಗ ವ್ಯವಸ್ಥೆ ನಿರ್ಮಾಣಕ್ಕೆ ಕರೆ:

ಹಿರಿಯ-ಕಿರಿಯ ನ್ಯಾಯವಾದಿಗಳು ಜತೆಯಾಗಿ ಜನರಿಗೆ ಉತ್ತಮ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.
ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಶ್ರದ್ಧೆಯಿಂದ ಕೆಲಸ ಮಾಡುವ ಮೂಲಕ ನ್ಯಾಯ ವಿತರಣೆಯಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಸಾಬೀತುಪಡಿಸಬೇಕು ಎಂದು ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಕರೆ ನೀಡಿದರು.

ಸರಕಾರವು ನ್ಯಾಯಾಂಗಕ್ಕೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಪ್ರತಿಯೊಂದು ಬೇಡಿಕೆಗೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ.
ಮೂಲಸೌಕರ್ಯ ಒದಗಿಸುವುದರಿಂದ ನ್ಯಾಯವಾದಿಗಳು, ಕಕ್ಷಿದಾರರಿಗೆ ಅನುಕೂಲವಾಗಲಿದೆ. ಉತ್ತಮ ಸೌಕರ್ಯ ಹೊಂದಿರುವ ಕಟ್ಟಡಗಳನ್ನು ಬಳಸಿಕೊಂಡು ಉತ್ತಮ ರೀತಿಯಲ್ಲಿ ನ್ಯಾಯವಿತರಣೆಗೆ ಮುಂದಾಗಬೇಕಿದೆ ಎಂದರು.
ನ್ಯಾಯವಾದಿಗಳು ತಮ್ಮ ಕೆಲಸದ ಮೂಲಕ ತಮ್ಮ ಪ್ರಾಮುಖ್ಯತೆ ಸಮಾಜಕ್ಕೆ ಮನವರಿಕೆ ಮಾಡಬೇಕು.
ಸಮಾಜದಲ್ಲಿ ಉತ್ತಮ ನ್ಯಾಯಾಂಗ ವ್ಯವಸ್ಥೆ ನಿರ್ಮಾಣಕ್ಕೆ ಎಲ್ಲ ನ್ಯಾಯವಾದಿಗಳು ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಮೂರ್ತಿ ಪ್ರಸನ್ನ ವರಾಳೆ ಅವರು ನ್ಯಾಯವಾದಿಗಳ ಸಮೂಹಕ್ಕೆ ಕರೆ ನೀಡಿದರು.

ಬೆಳಗಾವಿಯ ಬಾಲ್ಯದ ದಿನಗಳ ಮೆಲುಕು:

ಬಹಳ ದಿನಗಳ ನಂತರ ಬೆಳಗಾವಿ ಜಿಲ್ಲೆಗೆ ಭೇಟಿ‌ ನೀಡಿದಾಗ ಭಾವುಕನಾದೆ ಎನ್ನುತ್ತಲೇ ಬೆಳಗಾವಿ ಜಿಲ್ಲೆಯ ಜತೆಗಿನ ತಮ್ಮ ಕೌಟುಂಬಿಕ ಒಡನಾಟವನ್ನು ಮೆಲುಕು ಹಾಕಿದ ನ್ಯಾಯಮೂರ್ತಿ ಪ್ರಸನ್ನ ವರಾಳೆ ಅವರು, ಪಾಲಕರ ಜತೆ ಯಾವಾಗ ಬಂದರೂ ಬೆಳಗಾವಿ ಕುಂದಾ ಸವಿಯುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು.
ಆ ದಿನಗಳಲ್ಲಿ ಮನರಂಜನೆಗೆ ಹೆಚ್ಚು ಅವಕಾಶಗಳಿರಲಿಲ್ಲ; ಮಕ್ಕಳು ಸಿನಿಮಾ ನೋಡುವುದು ಕೂಡ ತಪ್ಪು ಎನ್ನುವ ಭಾವನೆಯಿತ್ತು. ಅಂತಹ ದಿನಗಳಲ್ಲಿ ಬೆಳಗಾವಿಯಲ್ಲಿ ಸಿನಿಮಾ ನೋಡಿದ ದಿನಗಳನ್ನು ವಿವರಿಸಿದರು.

ನ್ಯಾಯಾಂಗ ವ್ಯವಸ್ಥೆ ಬಲಪಡಿಸಲು ಎಲ್ಲ ಮೂಲಸೌಕರ್ಯ: ಸಚಿವ ಗೋವಿಂದ ಕಾರಜೋಳ ಭರವಸೆ:
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ನ್ಯಾಯಾಂಗ ಬಡವರಿಗೆ, ದೀನದಲಿತರಿಗೆ ಹಾಗೂ ಅಸಹಾಯಕರಿಗೆ ನ್ಯಾಯ ಒದಗಿಸಲು ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರಕಾರ ಸದಾ ಸಿದ್ಧವಾಗಿರುತ್ತದೆ ಎಂದು ಭರವಸೆ ನೀಡಿದರು.
ನ್ಯಾಯ ವಿತರಣೆಗೆ ಸಂಬಂಧಿಸಿದಂತೆ ನ್ಯಾಯಾಂಗ ವ್ಯವಸ್ಥೆಗೆ ಎಲ್ಲ ಸೌಕರ್ಯ ಒದಗಿಸಲಾಗುತ್ತಿದೆ. ಇದಲ್ಲದೇ ಲೋಕ ಅದಾಲತ್ ನಡೆಸಲು ಎಲ್ಲ ಅನುಕೂಲಗಳನ್ನು ಕಲ್ಪಿಸಲು ಸರಕಾರ ಕ್ರಮ ಕೈಗೊಂಡಿದೆ.
ಅಂತರರಾಜ್ಯ ವ್ಯಾಜ್ಯಗಳ ವಾದ ಮಂಡಿಸಲು ಸರಕಾರ ಸ್ವತಂತ್ರವಾಗಿ ನ್ಯಾಯವಾದಿಗಳನ್ನು ನೇಮಿಸಿದೆ.
ಗ್ರಾಹಕರ ಹಕ್ಕುಗಳ ವೇದಿಕೆಗೂ ಎಲ್ಲ ಸೌಕರ್ಯ ಸರಕಾರ ಒದಗಿಸಲಿದೆ. ಹೊಸ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ನ್ಯಾಯಾಲಯ ಸ್ಥಾಪನೆ ಮತ್ತು ಮೂಲಸೌಕರ್ಯ ಒದಗಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದರು.

ನ್ಯಾಯಾಂಗ-ಪತ್ರಿಕಾರಂಗ ಅನ್ಯಾಯದ ವಿರುದ್ಧ ಹೋರಾಡಬೇಕು:

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಬೆಳಗಾವಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮಾತನಾಡಿ, ನ್ಯಾಯಾಂಗ ಇಲಾಖೆಗೆ ಅಗತ್ಯವಿರುವ ಸೌಲಭ್ಯ ಒದಗಿಸಿಕೊಟ್ಟಿರುವ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದರಲ್ಲದೇ ಸರಕಾರ ಸೌಲಭ್ಯ ಒದಗಿಸಿದ್ದು, ಇವುಗಳನ್ನು ಬಳಸಿಕೊಂಡು ನ್ಯಾಯ ಒದಗಿಸುವ ಕೆಲಸ ನಮ್ಮೆಲ್ಲರ ಮೇಲಿದೆ ಎಂದರು.

ಸೈನಿಕರು, ರೈತರು ಈ ದೇಶದ ಆಧಾರ ಸ್ತಂಭಗಳಿದ್ದಂತೆ. ಇದೇ ರೀತಿ ನ್ಯಾಯಾಂಗ ಕೂಡ ವಿಶಿಷ್ಟ ಸ್ಥಾನ ಪಡೆದಿದೆ. ನ್ಯಾಯಾಂಗದಲ್ಲಿ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಶೇ.40ರಷ್ಟು ಪ್ರಕರಣಗಳನ್ನು ಮಾತ್ರ ನ್ಯಾಯಾಲಯದಲ್ಲಿ ನಿರ್ವಹಿಸಲಾಗುತ್ತಿದೆ. ಉಳಿದ ಶೇ.40 ರಷ್ಟು ಪ್ರಕರಣಗಳು ಪೊಲೀಸ್ ಹಾಗೂ ಇತರೆ ವ್ಯವಸ್ಥೆಗಳು ನಿಭಾಯಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ನ್ಯಾಯಾಂಗ ಹಾಗೂ ಪತ್ರಿಕಾರಂಗ ಹೆದರಿಕೊಂಡು ಕಾರ್ಯನಿರ್ವಹಿಸಿದರೆ ದೇಶದ ಅಧೋಗತಿ ಶುರುವಾಗುತ್ತದೆ. ಆದ್ದರಿಂದ ಸಮಾಜದ ಈ ಎರಡೂ ಅಂಗಗಳು ಅನ್ಯಾಯದ ವಿರುದ್ಧ ಹೋರಾಡಬೇಕಿದೆ. ಈ ದಿಸೆಯಲ್ಲಿ ಮಹಾತ್ಮಾ ಗಾಂಧೀಜಿಯವರು ಹಾಕಿಕೊಟ್ಟ ಹೋರಾಟ ಮಾರ್ಗವನ್ನು ನಾವು ಆಯ್ದುಕೊಳ್ಳಬೇಕಿದೆ ಎಂದು ವೀರಪ್ಪ ಕರೆ ನೀಡಿದರು.

ನ್ಯಾಯವಿತರಣೆ ತ್ವರಿತವಾಗಿ ಒದಗಿಸುವ ಮೂಲಕ ಜನರ ವಿಶ್ವಾಸ ಗಳಿಸಬೇಕು ಎಂದು ನ್ಯಾಯವಾದಿಗಳಿಗೆ ಕಿವಿಮಾತು ಹೇಳಿದ ಅವರು, ಪ್ರಕರಣಗಳು ಶೀಘ್ರ ಇತ್ಯರ್ಥವಾದಷ್ಟು ಹೆಚ್ಚು ಹೆಚ್ಚು ಪ್ರಕರಣಗಳು ನ್ಯಾಯಾಲಯದ ಮುಂದೆ ಬರುತ್ತವೆ ಎಂದು ಅಭಿಪ್ರಾಯಪಟ್ಟರು.
ನ್ಯಾಯವಾದಿಗಳು‌ ಜನರ ಸೇವೆಗೆ ಮುಂದಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಕಾನೂನು ಅರಿವು ಮಾಡಿಸಬೇಕು ಎಂದು ಸಲಹೆ ನೀಡಿದರು.

ಲೋಕ ಅದಾಲತ್ ಪ್ರಕರಣಗಳ ಇತ್ಯರ್ಥದಲ್ಲಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ ಮುಂಚೂಣಿಯಲ್ಲಿತ್ತು. ಅದೇ ರೀತಿ ಈ ಬಾರಿ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಸಾಧನೆ ಮುಂದುವರಿಯಬೇಕು ಎಂದು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರೂ ಆಗಿರುವ ನ್ಯಾಯಮೂರ್ತಿ ಬಿ.ವೀರಪ್ಪ ಆಶಯ ವ್ಯಕ್ತಪಡಿಸಿದರು.

ಕರ್ನಾಟಕ ಉಚ್ಛ ನ್ಯಾಯಾಲಯದ‌ ನ್ಯಾಯಮೂರ್ತಿಗಳಾದ ಸಚಿನ್ ಶಂಕರ ಮಗ್ದುಮ್, ಕೆ.ಎಸ್.ಹೇಮಲೇಖಾ, ಅನಿಲ್ ಕಟ್ಟಿ, ಸಂಸದೆ ಮಂಗಲ ಅಂಗಡಿ, ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ಅನಿಲ್ ಬೆನಕೆ, ಪ್ರಾದೇಶಿಕ ಆಯುಕ್ತ ಎಂ‌.ಜಿ.ಹಿರೇಮಠ, ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಪ್ರಭು ಯತ್ನಟ್ಟಿ, ಕಾರ್ಯದರ್ಶಿ ಜಿ.ಎನ್.ಪಾಟೀಲ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್.ಸೊಬರದ, ರಾಮದುರ್ಗ ವಕೀಲರ ಸಂಘದ ಆರ್.ಜೆ.ವಜ್ರಮಟ್ಟಿ, ಕಾರ್ಯದರ್ಶಿ ಎ.ಎ.ಮುದಕವಿ, ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಎಸ್.ಎ. ಅವರು ಸ್ವಾಗತಿಸಿದರು.
ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ನ್ಯಾಯವಾದಿಗಳು, ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

10 − 10 =