ಗೋಕಾಕ: ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿ ಶ್ರಮಿಸುತ್ತಿದೆ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಬುಧವಾರದಂದು ನಗರದ ಸಚಿವರ ಕಾರ್ಯಾಲಯದ ಆವರಣದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲಿಕರಣ ಇಲಾಖೆಯಿಂದ ಗೋಕಾಕ ಮತಕ್ಷೇತ್ರದ 15 ವಿಕಲಚೇತನ ಫಲಾನುಭವಿಗಳಿಗೆ ನೀಡಲಾದ ತ್ರೀಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಎಲ್ಲ ವರ್ಗಗಳ ಕಲ್ಯಾಣಕ್ಕೆ ಶ್ರಮಿಸುತ್ತಿದೆ. ರಾಜ್ಯದ ಅಭಿವೃದ್ದಿಯೇ ನಮ್ಮ ಮೂಲ ಮಂತ್ರವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 275 ವಿಕಲಚೇತನರಿಗೆ ವಾಹನಗಳನ್ನು ವಿತರಿಸಲಾಗುತ್ತಿದೆ. ವಿಕಲಚೇತನರು ಸರ್ಕಾರದ ಯೋಜನೆಗಳ ಸದುಪಯೋಗ ಹಾಗೂ ಆತ್ಮವಿಶ್ವಾಸದಿಂದ ಸ್ವಾವಲಂಭಿ ಬದುಕನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಟಿ.ಆರ್.ಕಾಗಲ, ಮಡೆಪ್ಪ ತೋಳಿನವರ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ನಾಮದೇವ ಬಿಲಕಾರ ಸೇರಿದಂತೆ ಅನೇಕರು ಇದ್ದರು.