ಭಾರೀ ಕುತೂಹಲ ; ಸಾಹುಕಾರ್ ಗರ್ಜನೆಗೆ ಕ್ಷಣಗಣನೆ

ಯುವ ಭಾರತ ಸುದ್ದಿ ಬೆಳಗಾವಿ :
ಸುವರ್ಣ ವಿಧಾನ ಸೌಧದ ಮಗ್ಗುಲಲ್ಲಿಯೇ ಇರುವ ಹಿರೇಬಾಗೇವಾಡಿಯಲ್ಲಿಂದು ಸಂಜೆ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಅಭಿಮಾನಿಗಳು ಹಮ್ಮಿಕೊಂಡಿರುವ ಅಭಿಮಾನದ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದು, ಭಾರೀ ಕುತೂಹಲ ಕೆರಳಿಸಿದೆ.
ಕೆಲ ದಿನಗಳ ಹಿಂದಷ್ಟೇ ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದಲ್ಲಿ ರಮೇಶ ಜಾರಕಿಹೊಳಿಯವರ ಅಭಿಮಾನಿಗಳು ಇಂಥದ್ದೇ ಅಭಿಮಾನದ ಸಮಾವೇಶ ನಡೆಸಿದ್ದರು. ರಮೇಶ ಜಾರಕಿಹೊಳಿಯವರ ಬೆಂಬಲಿಗರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದರು. ಇದೀಗ ಇಂದು ಹಿರೇಬಾಗೇವಾಡಿಯಲ್ಲಿ ನಡೆಯುತ್ತಿರುವ ಸಭೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಭೆ : ಬುಧವಾರ ಈ ಕುರಿತು ಹಿರೇಬಾಗೇವಾಡಿಯಲ್ಲಿ ಸಭೆ ಸೇರಿ ಅವರ ಅಭಿಮಾನಿಗಳು ಚರ್ಚೆ ನಡೆಸಿದ್ದಾರೆ. ಶ್ರೀ ಫಡಿಬಸವೇಶ್ವರ ದೇವಸ್ಥಾನದ ಸನಿಹದಲ್ಲಿ ಏರ್ಪಡಿಸಲಾಗಿದ್ದ ಸಂಘಟನೆ ಮತ್ತು ಕೃತಜ್ಞತಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಂಕರಗೌಡ ಪಾಟೀಲ ಹಾಗೂ ಗ್ರಾಮ ಪಂಚಾಯತ್ ಸದಸ್ಯ ವಿಜಯ ಮಠಪತಿ ಮಾತನಾಡಿ, ರಮೇಶ ಜಾರಕಿಹೊಳಿಯವರ ಅಭಿಮಾನಿಗಳ ಬಳಗದಿಂದ ಪಕ್ಷಾತೀತವಾಗಿ ಸಮಾವೇಶ ನಡೆಯಲಿದೆ. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಬೇಕು ಎಂದು ಹೇಳಿದರು.
ಗುರುವಾರ ಸಂಜೆ ಹಿರೇ ಬಾಗೇವಾಡಿಯ ಬಸವೇಶ್ವರ ವೃತ್ತದಿಂದ ಕಾರ್ಯಕ್ರಮ ನಡೆಯುವ ಶ್ರೀ ಫಡಿಬಸವೇಶ್ವರ ದೇವಸ್ಥಾನವರೆಗೂ ಬೈಕ್ ರ್ಯಾಲಿ ಮೂಲಕ ರಮೇಶ ಜಾರಕಿಹೊಳಿ ಅವರಿಗೆ ಭವ್ಯ ಸ್ವಾಗತ ಕೋರಲಾಗುತ್ತದೆ ಎಂದು ಮಾಹಿತಿ ನೀಡಿದರು.
YuvaBharataha Latest Kannada News