ಗುರುಭವನ ಲೋಕಾರ್ಪಣೆಗೊಳಿಸಿದ ಶಾಸಕ ದೊಡ್ಡಗೌಡರ
ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು : ಪಟ್ಟಣದಲ್ಲಿ ಎಲ್ಲ ಶಿಕ್ಷಕರ ಸಹಾಯ ಸಹಕಾರದಿಂದ ತಲೆ ಎತ್ತಿರುವ ಗುರುಭವನಕ್ಕೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಇಲ್ಲಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಹಿಂಭಾಗದಲ್ಲಿ ನಿರ್ಮಾಣಗೊಂಡಿರುವ ರಾಜಗುರು ಗುರುಭವನದ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಕಡೆಗಳಲ್ಲಿ ಗುರುಭವನ ನಿರ್ಮಾಣಕ್ಕೆ ಹಲವಾರು ಸಮಸ್ಯೆಗಳು ಎದುರಾಗಿ ಎಲ್ಲ ಕಾರ್ಯಗಳು ಸ್ಥಗಿತಗೊಂಡಿವೆ, ಇಂತಹ ಸಂದರ್ಭದಲ್ಲಿ ಬಿಇಒ ಆರ್.ಟಿ. ಬಳಿಗಾರ ಅವರ ನೇತೃತ್ವದಲ್ಲಿ ಕೇವಲ 10 ತಿಂಗಳ ಅವಧಿಯಲ್ಲಿಯೇ ಗುರುಭವನದ ಕಟ್ಟಡ ನಿರ್ಮಿಸಿ ಉದ್ಘಾಟನೆಗೊಳಿಸಿದ್ದು ಸಂತಸದ ಸಂಗತಿ ಎಂದು ಹೇಳಿದರು.
ಕಟ್ಟಡದ ನಿರ್ಮಾಣಕ್ಕಾಗಿ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಶ್ರೀ ಗಳು ಸ್ಥಳವನ್ನು ದಾನವಾಗಿ ನೀಡಿದ್ದಾರೆ, ಎಲ್ಲ ಶಿಕ್ಷಕ ವೃಂದವೂ ತನು,ಮನ,ಧನ ಸಹಾಯ ಮಾಡುವ ಮೂಲಕ ಕಟ್ಟಡದ ನಿರ್ಮಾಣಕ್ಕೆ ಅಣಿಯಾಗಿದ್ದು ಇದು ಎಲ್ಲರಿಗೂ ಮಾರ್ಗದರ್ಶನವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಭವನಕ್ಕೆ ಹಾಗೂ ಶಾಲಾ ಕಾಲೇಜು ಮಕ್ಕಳಿಗೆ ಅನುಕೂಲವಾಗುವಂತೆ ರೂ. 20 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು, ಅಲ್ಲದೆ ಕೂಡಲೇ ಶುದ್ದ ಕುಡಿಯುವ ಮಂಜೂರಾತಿ ಮಾಡಲಾಗುವುದು ಎಂದ ಅವರು, ಚಾಕಚಕ್ಯತೆಯಿಂದ ಕಾರ್ಯ ಮಾಡುವ ಬಿಇಒ ಬಳಿಗಾರ ಅವರು ಶಿಕ್ಷಕರ ಯಾವುದೇ ಕಾರ್ಯಕೆಲಸಗಳು ಇದ್ದಲ್ಲಿ ಅವರನ್ನು ಕಚೇರಿಗೆ ಕರೆತರದೆ ಕೇವಲ ಮೋಬೈಲ್ ಮುಖಾಂತರವೇ ಪರಿಹಾರ ಕಲ್ಪಿಸುವ ಮೂಲಕ ಎಲ್ಲ ಶಿಕ್ಷಕರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ನನ್ನ ಅಧಿಕಾರವಧಿಯಲ್ಲಿ ಕನಿಷ್ಠ 20 ಕಡೆಗಳಲ್ಲಿ ಗುರುಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದ್ದೇನೆ, ಆದರೇ ಗುರುಭವನವನ್ನು ಸಂಪೂರ್ಣಗೊಳಿಸಿ ಅದರ ಉದ್ಘಾಟನೆಗೆ ನನ್ನನ್ನು ಕರೆದಿದ್ದು ಕಿತ್ತೂರು ಶಿಕ್ಷಕರು ಮಾತ್ರ ಎಂದು ಹೇಳಿದ ಅವರು, ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಅವಶ್ಯವಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ನೂತನ ಶಿಕ್ಷಣ ನೀತಿ ಜಾರಿಯಾಗುತ್ತಿದೆ, ಈ ಶಿಕ್ಷಣದ ನೀತಿಗೆ ಮಕ್ಕಳನ್ನು ಕರೆದೊಯ್ಯುವುದು ಸವಾಲಿನ ಕೆಲಸ ಕಾರಣ ಶಿಕ್ಷಕರು ಶ್ರಮವಹಿಸಿ ನೂತನ ಶಿಕ್ಷಣ ನೀತಿಗೆ ಮಕ್ಕಳು ಹೊಂದಿಕೊಳ್ಳುವಂತೆ ಕಾರ್ಯ ಮಾಡಬೇಕು, ಶಾಸಕ ಮಹಾಂತೇಶ ದೊಡ್ಡಗೌಡರ ಸಹ ಶಿಕ್ಷಣ ಪ್ರೇಮಿಗಳಾಗಿದ್ದು ಶಿಕ್ಷಣಕ್ಕಾಗಿ ಅನೇಕ ಸಹಾಯ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದು ಹೇಳಿದರು.
ಶಾಸಕ ದೊಡ್ಡಗೌಡರ ಅವರ ಅವಿರತ ಶ್ರಮದಿಂದ ಇಂದು ಗುರುಭವನ ನಿರ್ಮಾಣಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ, ಈ ಗುರು ಭವನದ ಬೆಳವಣಿಗೆಗೆ ರೂ.5 ಲಕ್ಷ ನೀಡುವ ಮೂಲಕ ಸರ್ಕಾರದ ಸೌಲತ್ತು ನಿಮಗೆ ದೊರೆಯುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಎಲ್ಲ ಶಿಕ್ಷಕರ ಆರ್ಶಿವಾದದಿಂದ ಮತ್ತೆ ನಾನು ಶಾಸಕನಾಗಿ ಆಯ್ಕೆಯಾಗಿದ್ದಾನೆ ಪ್ರಾಮಾಣಿಕತೆಯಿಂದ ತಮ್ಮೆಲ್ಲರ ಸೇವೆ ಸಲ್ಲಿಸುವ ಮೂಲಕ ನನಗೆ ನೀಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಗಿಸುತ್ತೇನೆಂದು ಹೇಳಿದರು.
ಬಿಇಒ ಆರ್.ಟಿ.ಬಳಿಗಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಸಾನಿದ್ಯ ವಹಿಸಿದ್ದರು.
ಎಸ್ಎಸ್ಎಲ್ಸಿಯಲ್ಲಿ ಕಿತ್ತೂರು ತಾಲೂಕಾ ಮಟ್ಟದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ಹಾಗೂ ಶಾಲೆಗಳಿಗೆ ಕಂಪ್ಯೂಟರ್ ಹಾಗೂ ಪ್ರೀಂಟರಗಳನ್ನು ವಿತರಿಸಲಾಯಿತು.
ಇದಕ್ಕೂ ಮೊದಲು ನಿವೃತ್ತ ಶಿಕ್ಷಕ ಈಶ್ವರ ಗಡಿಬಿಡಿ ಹಾಗೂ ಶಾಲಾ ಮಕ್ಕಳಿಂದ ಸ್ವಾಗತ ಗೀತೆಯನ್ನು ಪ್ರಸ್ತುತ ಪಡಿಸಲಾಯಿತು.
ಬೆಳಗಾವಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಂ.ನಾಲತವಾಡ, ಪ್ರಾಚಾರ್ಯ ಎಸ್.ಡಿ.ಗಾಂಜಿ, ಜಿಲ್ಲಾಧ್ಯಕ್ಷರಾದ ಬಸವರಾಜ ಮಿಲ್ಲಾನಟ್ಟಿ, ಜಯಕುಮಾರ ಹೆಬಳಿ, ಕಸಾಪ ತಾಲೂಕಾಧ್ಯಕ್ಷ ಎಸ್.ಬಿ.ದಳವಾಯಿ ಸೇರಿದಂತೆ ವಿವಿಧ ಸಂಘಟನೆಗಳ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.