Breaking News

ಪಿಂಚಣಿ ಕುರಿತು ಕೇಂದ್ರದಿಂದ ಕೊನೆಗೂ ನಿಲುವು ಬದಲು ?

Spread the love

ಪಿಂಚಣಿ ಕುರಿತು ಕೇಂದ್ರದಿಂದ ಕೊನೆಗೂ ನಿಲುವು ಬದಲು ?

ಯುವ ಭಾರತ ಸುದ್ದಿ ದೆಹಲಿ :
ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ, ಸೇವಾವಧಿಯ ಕಡೆಯ ವೇತನದ ಕನಿಷ್ಠ ಶೇಕಡ 40–45ರಷ್ಟು ಮೊತ್ತವನ್ನು ಖಾತರಿ ಪಿಂಚಣಿಯಾಗಿ ನೀಡುವ ಸಾಧ್ಯತೆ ಇದೆ.

ಈಗ ಜಾರಿಯಲ್ಲಿ ಇರುವ, ಬಂಡವಾಳ ಮಾರುಕಟ್ಟೆ ಆಧಾರಿತ ಎನ್‌ಪಿಎಸ್ ಬದಲಿಗೆ, ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮತ್ತೆ ಜಾರಿಗೆ ತರಲು ಕೆಲವು ರಾಜ್ಯ ಸರ್ಕಾರಗಳು ಮುಂದಾಗಿವೆ. ಹೀಗಾಗಿ, ಈಗಿನ ಪಿಂಚಣಿ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ತರುವ ಆಲೋಚನೆಯು ಕೇಂದ್ರಕ್ಕೆ ಇದೆ ಎಂದು ಮೂಲಗಳು ಹೇಳಿವೆ.

ಆದರೆ, ಇಂಥದ್ದೊಂದು ತೀರ್ಮಾನ ಆಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯವು ಪ್ರತಿಕ್ರಿಯೆ ನೀಡಿದೆ. ಎನ್‌ಪಿಎಸ್ ಹಾಗೂ ಒಪಿಎಸ್‌ ಬಗ್ಗೆ ಪರಿಶೀಲಿಸುತ್ತಿರುವ ಸಮಿತಿಯು ‘ಸಂಬಂಧಪಟ್ಟವರ ಜೊತೆ ಸಮಾಲೋಚನೆ ನಡೆಸುತ್ತಿದೆ. ಸಮಿತಿಯು ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ’ ಎಂದು ಸಚಿವಾಲಯ ಹೇಳಿದೆ.

ಎನ್‌ಪಿಎಸ್ ವ್ಯವಸ್ಥೆಯಲ್ಲಿ ನೌಕರರು ಹಾಗೂ ಉದ್ಯೋಗದಾತರು ಪಿಂಚಣಿಗಾಗಿ ಮೀಸಲಿಡುವ ಹಣವನ್ನು ಬಂಡವಾಳ ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತದೆ. ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿ ಪಿಂಚಣಿಯ ಮೊತ್ತ ನಿರ್ಧಾರವಾಗುತ್ತದೆ.

ಆದರೆ ಹಳೆಯ ಪಿಂಚಣಿ ವ್ಯವಸ್ಥೆಯಲ್ಲಿ, ಕೊನೆಯ ವೇತನದ ಶೇಕಡ 50ರಷ್ಟು ಮೊತ್ತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ. ಹಳೆಯ ವ್ಯವಸ್ಥೆಯಲ್ಲಿ ನೌಕರರು ಪಿಂಚಣಿಗೆ ತಮ್ಮ ವೇತನದಿಂದ ಯಾವುದೇ ಕೊಡುಗೆ ನೀಡಬೇಕಿಲ್ಲ.

ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆ ತಂದು, ಪಿಂಚಣಿಯಾಗಿ ಖಾತರಿ ಮೊತ್ತವನ್ನು ನೀಡುವ ಆಲೋಚನೆ ಕೇಂದ್ರಕ್ಕಿದೆ. ‍ಪಿಂಚಣಿಗಾಗಿ ನೌಕರರು ಹಾಗೂ ಉದ್ಯೋಗದಾತರಿಂದ ಕೊಡುಗೆಯನ್ನು ಪಡೆಯುವ ಉದ್ದೇಶ ಕೂಡ ಕೇಂದ್ರಕ್ಕೆ ಇದೆ ಎಂದು ಮೂಲಗಳು ವಿವರಿಸಿವೆ. ಹೀಗೆ ಮಾಡಿದಾಗ, ಕೆಲವು ರಾಜ್ಯಗಳು ವ್ಯಕ್ತಪಡಿಸಿರುವ ಕಳವಳಕ್ಕೂ ಸ್ಪಂದಿಸಿದಂತೆ ಆಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ ಹಳೆಯ ಪಿಂಚಣಿ ವ್ಯವಸ್ಥೆಗೆ ಮರಳುವ ಪ್ರಶ್ನೆ ಇಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗಿನ ಪಿಂಚಣಿ ವ್ಯವಸ್ಥೆಯಲ್ಲಿ ಈ ಬದಲಾವಣೆಗಳನ್ನು ಮಾಡಿದಲ್ಲಿ, ಸರ್ಕಾರಗಳಿಗೆ ಆರ್ಥಿಕ ಹೊರೆ ದೊಡ್ಡ ಮಟ್ಟದಲ್ಲಿ ಇರುವುದಿಲ್ಲ ಎನ್ನಲಾಗಿದೆ.

ಎನ್‌ಪಿಎಸ್‌ ಅಡಿಯಲ್ಲಿ, ಈಗಿನ ಲೆಕ್ಕಾಚಾರದ ಪ್ರಕಾರ, ನೌಕರರು ನಿವೃತ್ತಿಯ ನಂತರದಲ್ಲಿ ಅವರ ಕಡೆಯ ವೇತನದ ಶೇ 38ರಷ್ಟನ್ನು ಪಿಂಚಣಿಯಾಗಿ ಪಡೆಯುತ್ತಾರೆ. ಸರ್ಕಾರವು, ಕಡೆಯ ವೇತನದ ಶೇ 40ರಷ್ಟು ಮೊತ್ತವನ್ನು ಪಿಂಚಣಿಯಾಗಿ ನೀಡುವ ಖಾತರಿ ನೀಡಿದಲ್ಲಿ, ವ್ಯತ್ಯಾಸದ ಮೊತ್ತವನ್ನು (ಈಗಿನ ಲೆಕ್ಕಾಚಾರದ ಪ್ರಕಾರ ಶೇ 2ರಷ್ಟು) ತುಂಬಿಸಿಕೊಡಬೇಕಾಗುತ್ತದೆ.

ಆದರೆ, ಬಂಡವಾಳ ಮಾರುಕಟ್ಟೆಯಿಂದ ಸಿಗುವ ಲಾಭ ಕಡಿಮೆ ಆದಲ್ಲಿ, ಸರ್ಕಾರ ಬೊಕ್ಕಸದಿಂದ ಕೊಡಬೇಕಿರುವ ಮೊತ್ತವು ಹೆಚ್ಚಾಗುತ್ತದೆ. ‘ಹಳೆಯ ಪಿಂಚಣಿ ವ್ಯವಸ್ಥೆಗೆ ಮರಳುವುದಕ್ಕಿಂತ ಈ ವ್ಯವಸ್ಥೆಯು ಹಣಕಾಸಿನ ಲೆಕ್ಕಾಚಾರದಲ್ಲಿ ಹೆಚ್ಚು ಸೂಕ್ತ’ ಎಂದು ಮೂಲಗಳು ಹೇಳಿವೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

twenty + eight =