Breaking News

ಕಿತ್ತೂರು : ಸಾಹಿತ್ಯ ಸಮ್ಮೇಳನದ ವೈಭವ!

Spread the love

ಕಿತ್ತೂರು : ಸಾಹಿತ್ಯ ಸಮ್ಮೇಳನದ ವೈಭವ!

ಮಕ್ಕಳ ಹತ್ಯೆ, ಬ್ರೂಣ ಹತ್ಯೆ, ಮಕ್ಕಳ ಅಪಹರಣ, ಬಿಕ್ಷಾಟನೆಗೆ ತಳ್ಳುವಿಕೆ, ವೇಶ್ಯಾವಾಟಿಕೆಗೆ ತಳ್ಳುವಿಕೆ, ಇವೆಲ್ಲಾ ಅವ್ಯವಹಾರ ನಡೆದಿವೆ, ಕಾನೂನಿನ ಚೌಕಟ್ಟಿದ್ದರೂ ಅದನ್ನು ಮೀರಿ, ಮಕ್ಕಳನ್ನು ಶೋಷಣೆಗೆ ಒಳಪಡಿಸುತ್ತಿರುವುದು ಅತ್ಯಂತ ಹೇಯ ಕಾರ್ಯವೆಂದು ಮಕ್ಕಳ ಸಾಹಿತಿ, ಎಂ.ಎಂ. ಸಂಗಣ್ಣವರ.

ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು : ಮುಗ್ದ ಮಕ್ಕಳು ವಿಶ್ವಮಾನ್ಯರು, ಜಗವನ್ನೆ ಪ್ರೀತಿಸುವ ಮನವುಳ್ಳವರು, ಈ ಆಧುನೀಕರಣ, ಜಾಗತೀಕರಣ, ವ್ಯಾಪಾರಿಕರಣದ ಕುತ್ಸಿತ ಪ್ರವೃತ್ತಿಗೆ ಬಲಿಯಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಬಾಲ್ಯ ವಿವಾಹ, ಮಕ್ಕಳ ಹತ್ಯೆ, ಬ್ರೂಣ ಹತ್ಯೆ, ಮಕ್ಕಳ ಅಪಹರಣ, ಬಿಕ್ಷಾಟನೆಗೆ ತಳ್ಳುವಿಕೆ, ವೇಶ್ಯಾವಾಟಿಕೆಗೆ ತಳ್ಳುವಿಕೆ, ಇವೆಲ್ಲಾ ಅವ್ಯವಹಾರ ನಡೆದಿವೆ, ಕಾನೂನಿನ ಚೌಕಟ್ಟಿದ್ದರೂ ಅದನ್ನು ಮೀರಿ, ಮಕ್ಕಳನ್ನು ಶೋಷಣೆಗೆ ಒಳಪಡಿಸುತ್ತಿರುವುದು ಅತ್ಯಂತ ಹೇಯ ಕಾರ್ಯವೆಂದು ಮಕ್ಕಳ ಸಾಹಿತಿ, ಎಂ.ಎಂ. ಸಂಗಣ್ಣವರ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೆಳನದ ಸರ್ವಾಧ್ಯಕ್ಷರ ನುಡಿಗಳನ್ನಾಡಿದ ಅವರು, ಮಕ್ಕಳ ಸಾಹಿತ್ಯ, ಕೃತಿಗಳ ಪ್ರಕಟನೆ, ಮಾರಾಟ ಸುಲಭದ್ದಲ್ಲ, ಮಕ್ಕಳ ಸಾಹಿತ್ಯದ ಪುಸ್ತಕಗಳನ್ನು ಖರೀದಿಸುವವರಿಲ್ಲದೆ ಅವುಗಳು ಅಟ್ಟವೇರಿ ಕುಳಿತಿವೆ, ಶಾಲೆ, ಗ್ರಂಥಾಲಯ ಮತ್ತು ಪ್ರತಿಯೊಬ್ಬ ಪಾಲಕರು ಮಕ್ಕಳ ಸಾಹಿತ್ಯದ ಕೃತಿಗಳನ್ನು ಖರೀದಿಸಿ ಮಕ್ಕಳ ಕೈಗಿತ್ತರೆ ಮಾತ್ರ ಈ ಮಕ್ಕಳ ಸಾಹಿತ್ಯ ಬೆಳೆಯಲು ಸಾಧ್ಯವೆಂದು ಹೇಳಿದರು‌.

ಅನೇಕ ವಿದ್ಯಾರ್ಥಿಗಳು ಸಾಹಿತ್ಯದತ್ತ ಒಲವು ತೋರುತ್ತಿರುವುದು ಸ್ತುತ್ಯಾರ್ಹವಾದದ್ದು, ಮಕ್ಕಳಿಗೆ ಮನೆಯ ಪರಿಸರ ಪರಿಣಾಮವನ್ನುಂಟು ಮಾಡುತ್ತದೆ, ಕನ್ನಡ ಮಾತನಾಡುವ ವಾತಾವರಣ ಸೃಷ್ಠಿಯಾಗಬೇಕು, ಮಕ್ಕಳ ಸಾಹಿತ್ಯ ನೋಡುವ ದೃಷ್ಠಿಕೋನ ಬದಲಾಗಬೇಕು, ಮಕ್ಕಳ ಸಾಹಿತ್ಯದ ಕಥೆ, ಕವನ, ಕಾದಂಬರಿ, ನಾಟಕಗಳನ್ನು ಓದಬೇಕು ಮತ್ತು ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು, ಮಕ್ಕಳೆ ಬರೆಯಲಿ ಹಿರಿಯರೆ ಬರೆಯಲಿ ಅದೆಲ್ಲವೂ ಮಕ್ಕಳ ಸಾಹಿತ್ಯವೆಂಬುದು ನನ್ನ ಅನಿಸಿಕೆಯಾಗಿದೆ ಎಂದು ಹೇಳಿದರು.

ಯುವಕರು ವಿದ್ಯಾರ್ಥಿಗಳು ಸತ್ಸಂಗದ ಮೂಲಕ ಸಚ್ಚಾರಿತ್ರ್ಯವನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗುವತ್ತ ಗಮನ ಹರಿಸಬೇಕು, ಟಿವಿ.ಮೋಬೈಲ್, ವಾಟ್ಸಪ್, ಮುಂತಾದವುಗಳನ್ನು ದುರುಪಯೋಗ ಪಡಿಸಿಕೊಂಡು ಇಲ್ಲದ ಅನಾಹುತಕ್ಕೆ ಒಳಗಾಗಬಾರದು, ಪಾಲಕರು ತಮ್ಮ ಮಕ್ಕಳ ಒಳ್ಳೆಯ ಭವಿಷ್ಯದ ಕಡೆ ಗಮನಹರಿಸಬೇಕೆಂದು ಕಿವಿಮಾತನ್ನು ಹೇಳಿದರು.

ಕಿತ್ತೂರಿನಲ್ಲಿ ಶತಮಾನಗಳ ಮೊದಲಿನಿಂದಲೂ ರಂಗ ಕಲೆಯಲ್ಲಿ ಆಸಕ್ತಿ ಇರುವುದನ್ನು ನೋಡುತ್ತೇವೆ, ಹಿಂದಿನ ಸಾಹಿತಿಗಳು ನಾಟಕವನ್ನು ಬರೆದಿರುವುದನ್ನು ನೋಡುತ್ತೇವೆ, ಇನ್ನು ಕಾವ್ಯವಂತೂ ಇಲ್ಲಿಯ ಜನರ ಪರಂಪರೆಯಾಗಿದೆ, ಸಂತೋಷ ಮತ್ತು ಸಂದೇಶ ನೀಡುವುದೆ ಸಾಹಿತ್ಯದ ಮೂಲ ಗುರಿಯಾಗಿದೆ, ಮಲ್ಲಸರ್ಜ ದೊರೆಯಿಂದ ಇಲ್ಲಿಯವರೆಗೂ ಸಾಹಿತಿಗಳ ಕಲಾಕಾರರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗುತ್ತಲಿದೆ, ದೊರೆಯ ಆಸ್ಥಾನದಲ್ಲಿ 33 ಜನ ಕವಿಗಳಿದ್ದು ಕಲೆ ಮತ್ತು ಸಾಹಿತ್ಯಿಕ ಸಾಧನೆಯಿಂದ ಪ್ರಸಿದ್ದಿ ಪಡೆದಿದ್ದರು ಎಂದು ಹೇಳಿದ ಅವರು, ಮಕ್ಕಳ ಸಾಹಿತ್ಯದ ಕೃತಿಗಳನ್ನು ಕೊಡುವ ಪರಿಪಾಠ ಬೆಳೆದು ಬರಬೇಕು, ಹೊಸದಾಗಿ ಬರೆಯುವವರು ಕಾವ್ಯದ ಲಕ್ಷಣಗಳನ್ನು ತಿಳಿದುಕೊಳ್ಳಬೇಕು, ಸಾಹಿತ್ಯ ರಚಿಸುವ ಮೊದಲು ಪೂರ್ವಸಿದ್ದತೆ ಅಭ್ಯಾಸ ಬೇಕು, ನಾವು ಬರೆದಿದ್ದಲ್ಲ ಚೆನ್ನಾಗಿದೆ ಎಂದುಕೊಳ್ಳದೆ ಅದರ ಗುಣದೋಷಗಳನ್ನು ತಿಳಿದುಕೊಳ್ಳವ ಮನಸ್ಥಿತಿ ಬೆಳೆಯಬೇಕೆಂದು ಹೇಳಿದರು.

ತಾಲೂಕಿನ ದ್ವಿತೀಯ ಸಾಹಿತ್ಯ ಸಮ್ಮೆಳನ ಉದ್ಘಾಟಿಸಿ ಮಾತನಾಡಿದ ಶಾಸಕ ಮಹಾಂತೇಶ ದೊಡ್ಡಗೌಡರ, ನಾಡು, ನುಡಿಯ ವಿಷಯ ದ ಕುರಿತು ಪ್ರತಿಯೊಬ್ಬರಲ್ಲಿ ಸ್ವಾಭಿಮಾನವಿರಬೇಕು, ಇದರ ಕುರಿತು ಯಾರಾದರೂ ಕೆಣಕಿದರೆ ಉಗ್ರವಾದ ವಿರೋಧ ತೋರುವ ಕಾರ್ಯ ಮಾಡಬೇಕು, ಚನ್ನಮ್ಮನ ನಾಡಿನಲ್ಲಿ ಸಾಹಿತ್ಯಕ್ಕೆ ವಿಶೇಷ ಸ್ಥಾನಮಾನವಿದೆ, ಅಲ್ಲದೆ ವಿಶ್ವದ ಹಲವಾರು ದೇಶಗಳಲ್ಲಿ ಕನ್ನಡಿಗರಿದ್ದು ಅಲ್ಲಿ ಕನ್ನಡದ ಕಂಪು ಪಸರಿಸುತ್ತಿದೆ ಎಂದು ಹೇಳಿದರು,

ಕೆಂದ್ರ ಸರ್ಕಾರದ ಕೆಲ ನೌಕರಿಗಳಿಗೆ ಪರೀಕ್ಷೆಗಳು ಕೇವಲ ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ನಡೆಯುತ್ತಿರುವುದು ಸರಿಯಲ್ಲ, ಆಯಾ ರಾಜ್ಯದ ಭಾಷೆಯಲ್ಲಿ ಇಂತಹ ಪರೀಕ್ಷೆಗಳು ನಡೆಯಬೇಕೆಂಬ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಅವರ ಬೇಡಿಕೆಗೆ ಸ್ಪಂದಿಸಿದ ಶಾಸಕರು ಈ ಕುರಿತು ಪ್ರಧಾನಿ ಮೋದಿಯವರ ಟ್ವೀಟರ್ ಹಾಗೂ ಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸುವ ಮೂಲಕ ಗಮನ ಸೆಳೆದಲ್ಲಿ ಪ್ರಧಾನಿಗಳು ಈ ಕುರಿತು ಕೆಲ ತಿಂಗಳುಗಳಲ್ಲೆ ಬೇಡಿಕೆ ಇಡೇರಿಸಬಹುದು ಎಂದು ಹೇಳಿದರು.

ರಾಜ್ಯ ಸರ್ಕಾರ 15000 ಶಿಕ್ಷಕರ ನೇಮಕಾತಿ ಕೆಲಸದಲ್ಲಿ ತೊಡಗಿಕೊಂಡಿದ್ದು ಮುಂಬರುವ ದಿನಗಳಲ್ಲಿ ಇದು ಅಂತಿಮ ಹಂತ ತಲುಪಲಿದೆ ಎಂದು ಹೇಳಿದರು.ಕನ್ನಡ ಶಾಲೆಯಗಳ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕಿನ ವಿವಿಧ ಶಾಲೆಗಳಿಗೆ 30 ಕ್ಕೂ ಹೆಚ್ಚು ನೂತನ ಕೊಠಡಿಗಳನ್ನು ಸರ್ಕಾರ ನೀಡಿದೆ, ಜಿಪಂ ಹಾಗೂ ತಾಪಂ ಅನುದಾನದಲ್ಲಿ ಮೂಲಭೂತ ಹಂತದಲ್ಲಿ ನವೀಕರಕಣ ಕಾರ್ಯ ಚಾಲ್ತಿಯಲ್ಲಿವೆ, ಪ್ರತಿ ಶಾಲೆಗೂ ಶೌಚಾಲಯ ನಿರ್ಮಿಸುವ ಕಾರ್ಯ ಸರ್ಕಾರ ಮಾಡಿದೆ, ಕಿತ್ತೂರು ಹಾಗೂ ಎಂ.ಕೆ.ಹುಬ್ಬಳ್ಳಿಗೆ 1.35 ಕೋಟಿ ಅಧಿಕ ಶಾಲಾ ಶೌಚಾಲಯಗಳಿಗೆ ಸರ್ಕಾರ ಮಂಜೂರಾತಿ ನೀಡಿದೆ ಎಂದು ಹೇಳಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು, ನಿವೃತ್ತ ಸೈನಿಕರಿಗೆ, ಹಾಗೂ ವೈಧ್ಯರಿಗೆ ಸಂಘಟನೆಗಳಿಗೆ ಸ್ಥಳಾವಕಾಶ ನೀಡುವಂತೆ ಮನವಿ ಬಂದಿದ್ದು ಅವುಗಳಿಗೆ ಸೂಕ್ತ ಸ್ಥಳ ಗುರುತಿಸುವಂತೆ ಪಟ್ಟಣ ಪಂಚಾಯಿತಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಬೆಳಗಾವಿ ಗಡಿ ಜಿಲ್ಲೆಯಾದ ಪರಿಣಾಮ ಈ ಸಭೆಯಲ್ಲಿ ಕನ್ನಡ ನೆಲ ಉಳಿಸುವ ಠರಾವು ಮಾಡಿ ಸರ್ಕಾರಕ್ಕೆ ಕಳುಹಿಸುವ ಕಾರ್ಯವಾಗಲಿ ಅಲ್ಲದೆ, ಕನ್ನಡ ನೆಲ ಉಳಿಸುವ ಗಟ್ಟಿ ಕೂಗು ಕಿತ್ತೂರು ನಾಡಿನಿಂದಲೇ ಹೊರ ಹೊಮ್ಮಲಿ ಎಂದು ಹೇಳಿದರು.

“ಆಶಯ ನುಡಿಗಳನ್ನಾಡಿದ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ , ಕರ್ನಾಟಕದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಬೇಕು, ಕನ್ನಡ ಶಾಲೆಯಲ್ಲಿ ಕೊಠಡಿ, ಶಿಕ್ಷಕರು, ಆಟದ ಮೈದಾನ, ಆಟದ ಸಾಮಗ್ರಿಗಳ ಕೊರತೆ ಇದೆ. ಕೋರೊನಾ ಸಂದರ್ಭದಲ್ಲಿ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿತ್ತು ಆದರೇ ಇದೀಗ ಮತ್ತೆ ಕುಸಿತಗೊಂಡಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು”

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನವು ಚಿಂಚಲಿ ಶ್ರೀಗಳ ಮುಂದಾಳತ್ವದಲ್ಲಿ ಚಿಕ್ಕೊಡಿಯಲ್ಲಿ ಜರುಗಲಿರುವುದು ಸಂತಸದ ಸಂಗತಿ, ಬರವಣಿಗೆಯೂ ಯಾವತ್ತು ಶಾಶ್ವತವಾದದ್ದು ಈ ಕಾರಣದಿಂದ ಏನೆ ಇದ್ದರೂ ಬರವಣಿಗೆಯ ಮೂಲಕವೆ ಹೋರಾಟ ನಡೆಸಬೇಕು, ಎಂದ ಅವರು, ಸಾಮಾಜಿಕ, ರಾಜಕೀಯ, ಭೂಗೊಳಿಕವಾಗಿ ಬೆಳಗಾವಿಯ ಇತಿಹಾಸವನ್ನು ಎಲ್ಲ ತಾಲೂಕಿನ ಸರ್ವಾಧ್ಯಕ್ಷರು ತಿಳಿಸಿದ್ದಾರೆ, ಈ ಕುರಿತು ಎಲ್ಲ ಸಮ್ಮೇಳನಾಧ್ಯಕ್ಷರ ನುಡಿಗಳ ಕುರಿತು ಒಂದು ಪುಸ್ತಕ ತಯಾರಿಸಲಾಗುತ್ತಿದ್ದು ಇದು ಭವಿಷತ್ತಿನಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು.

ಕಸಾಪ ತಾಲೂಕಾಧ್ಯಕ್ಷ ಡಾ. ಎಸ್.ಬಿ. ದಳವಾಯಿ ಮಾತನಾಡಿ, ಇಷ್ಟು ಅಚ್ಚುಕಟ್ಟಾಗಿ ನಡೆಯುತ್ತಿರುವ ಈ ಸಮ್ಮೆಳನಕ್ಕೆ ಹಲವಾರು ದಾನಿಗಳು ಹಾಗೂ ಪದಾಧಿಕಾರಿಗಳು ಹಗಲಿರುಳೂ ಶ್ರಮಿಸಿರುವ ಕುರಿತು ಮಾಹಿತಿ ನೀಡಿದ್ದಲ್ಲದೆ ಸರ್ವಾಧ್ಯಕ್ಷ ಎಂ.ಎಂ. ಸಂಗಣ್ಣವರ ಕುರಿತು ಕಿರು ಪರಿಚಯ ಮಾಡಿದರು.

ನಂತರ ಸರ್ವಾಧ್ಯಕ್ಷ ಎಂ.ಎಂ.ಸಂಗಣ್ಣವರ ಹಾಗೂ 4 ದಶಕಗಳ ಕಾಲ ಕನ್ನಡ ದಿನ ಪತ್ರಿಕೆ ವಿತರಿಸಿ ಜಿಲ್ಲಾಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮಹಾದೇವ ತುರಮರಿಯವರನ್ನು ಸತ್ಕರಿಸಲಾಯಿತು.

ಇದಕ್ಕೂ ಮೊದಲು ಮಂಜುನಾಥ ಕಳಸಣ್ಣವರ ವಿರಚಿತ ಕಿತ್ತೂರು ಸಂಸ್ಥಾನದ ಮೌಖಿಕ ಕಥನಗಳು ಹಾಗೂ ಪ್ರಭಾವತಿ ಲದ್ದಿಮಠ ವಿರಚಿತ ದೃವತಾರೆ ಕವನ ಸಂಕಲನ ಮತ್ತು ಸ್ಮರಣ ಸಂಚಿಕೆಯನ್ನು ಡಾ.ಪ್ರಜ್ಞಾ ಮತ್ತಿಹಳ್ಳಿ ಬಿಡುಗಡೆಗೊಳಿಸಿದರು.

ರಾಜಗುರು ಸಂಸ್ಥಾನದ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿದ್ಯ ವಹಿಸಿದ್ದರು, ಕಿನಾವಿವ ಸಂಘದ ಚೇರಮನ್ ಎಂ.ಬಿ‌. ದಳವಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ನಿಕಟಪೂರ್ವ ಸಮ್ಮೆಳನಾಧ್ಯಕ್ಷೆ ಸುನಂದಾ ಎಮ್ಮಿ ಧ್ವಜ ಹಸ್ತಾಂತರಿಸಿದರು, ಬಿಇಒ ಆರ.ಟಿ.ಬಳಿಗಾರ, ಸಿಪಿಐ ಮಹಾಂತೇಶ ಹೊಸಪೇಟ, ಹಿರಿಯರಾದ ಚನ್ನಬಸಪ್ಪ ಮೊಕಾಶಿ, ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ, ಉಳವಪ್ಪ ಉಳ್ಳೆಗಡ್ಡಿ, ಶಂಕರ ಹೊಳಿ, ಡಾ. ಶೇಖರ ಹಲಸಗಿ ಸೇರಿದಂತೆ ಅನೇಕ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

17 − sixteen =