ನಾನು ಕೀಳು ರಾಜಕೀಯ ಮಾಡಿದ್ದರೆ ಕೊಲ್ಲಾಪುರ ಮಹಾಲಕ್ಷ್ಮೀ ನೋಡಿಕೊಳ್ತಾಳೆ..
ಯುವ ಭಾರತ ಸುದ್ದಿ ಬೆಳಗಾವಿ :
ನಾನು ಎಂದೂ ಕೀಳು ಮಟ್ಟದ ರಾಜಕೀಯ ಮಾಡಿಲ್ಲ. ಕೀಳು ಮಟ್ಟದ ರಾಜಕೀಯ ಮಾಡಿದ್ದರೆ ಆ ತಾಯಿ ಕೊಲ್ಲಾಪುರ ಮಹಾಲಕ್ಷ್ಮಿ ನೋಡಿಕೊಳ್ಳಲಿ. ಹೀಗೆಂದು ಎದುರಾಳಿ ಕಾಂಗ್ರೆಸ್ ಶಾಸಕರಿಗೆ ಸವಾಲು ಹಾಕಿದವರು ಗೋಕಾಕ ಶಾಸಕ ರಮೇಶ ಜಾರಕಿಹೊಳಿ.
ಬೆಳಗಾವಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ತಾಲೂಕಿನ ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಮಾರ್ಚ್ 2 ರಂದು ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಅದು ಬಿಜೆಪಿ ಕಾರ್ಯಕ್ರಮವಲ್ಲ ಸರಕಾರಿ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ನಾನು ಶಿವಾಜಿ ಪ್ರತಿಮೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ಎಂದಿಗೂ ಅಡ್ಡಿಪಡಿಸಲಿಲ್ಲ. ಈ ಬಗ್ಗೆ ಕಾಂಗ್ರೆಸ್ ಶಾಸಕರು ಮಾಡಿರುವ ಆರೋಪ ಸುಳ್ಳು. ಅಂದು ಪ್ರವಾಸೋದ್ಯಮ ಸಚಿವರಿಗೆ ನಾನು ಎಂದಿಗೂ ಈ ಬಗ್ಗೆ ಒತ್ತಡ ಹೇರಲಿಲ್ಲ. ನಾನು ಅಂತಹ ಕೀಳು ಮಟ್ಟದ ರಾಜಕೀಯವನ್ನು ಎಂದಿಗೂ ಮಾಡಲು ಹೋಗುವವನಲ್ಲ. ನಾನು ಅಂಥ ಕೆಲಸ ಮಾಡಿದ್ದೇನೆ ಎಂದರೆ ಆ ಕೊಲ್ಲಾಪುರ ತಾಯಿ ಲಕ್ಷ್ಮೀ ನೋಡಿಕೊಳ್ಳಲಿ ಎಂದು ಎದುರಾಳಿಗಳ ಆರೋಪಕ್ಕೆ ಪ್ರತಿಸವಾಲು ಹಾಕಿದರು. ರಾಜಹಂಸಗಡ ಶಿವಾಜಿ ಪ್ರತಿಮೆ ಕುರಿತು ನಾವು ಎಂದಿಗೂ ಮಾತನಾಡಲಿಲ್ಲ. ಆದರೆ ಕಾಂಗ್ರೆಸ್ ನವರು ಅದನ್ನು ಕಾಂಗ್ರೆಸ್ ಮಯ ಮಾಡಲು ತೀರ್ಮಾನಿಸಿದರು .ಆಗ ನಾವು ಅಲ್ಲಿಗೆ ಹೋಗಬೇಕಾಯಿತು ಎಂದು ಸ್ಪಷ್ಟಪಡಿಸಿದರು. ರಾಜಹಂಸಗಡ ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮ ಮಾರ್ಚ್ 2 ರಂದು ನಡೆಯುತ್ತಿರುವುದು ಬಿಜೆಪಿ ಕಾರ್ಯಕ್ರಮ ಅಲ್ಲ. ಸರಕಾರಿ ಕಾರ್ಯಕ್ರಮ. ಜಿಲ್ಲೆಯ ಎಲ್ಲಾ ಶಾಸಕರು ಶಿಷ್ಟಾಚಾರದಂತೆ ಬರಲಿದ್ದಾರೆ. ನಾನು ಸಹ ಬರಲಿದ್ದೇನೆ ಎಂದು ಹೇಳಿದರು.
ಮರಾಠಾ ಸಮಾಜದವರು ಬಹಳ ಬುದ್ಧಿವಂತರು. ಇಂತಹ ಭಾವನಾತ್ಮಕವಾಗಿ ಪ್ರಚೋದಿಸುವವರಿಗೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ. ಫೆಬ್ರವರಿ 27 ಹಾಗೂ ಮಾರ್ಚ್ 2ರ ಮಹತ್ವದ ಕಾರ್ಯಕ್ರಮ ಮುಗಿದ ನಂತರ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲಲು ಕಾರ್ಯತಂತ್ರ ಹೆಣೆಯಲಾಗುವುದು ಎಂದು ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದರು.