ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಕಿಕೊಟ್ಟ ದಾರಿಯಲ್ಲಿ ನಡೆಯೋಣ
ಯುವ ಭಾರತ ಸುದ್ದಿ ಗೋಕಾಕ :
ಜ್ಞಾನಯೋಗಿ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮಿಗಳ ಅಮೃತ ಹಸ್ತದಿಂದ ಪ್ರಾರಂಭವಾದ ರೋಟರಿ ರಕ್ತ ಭಂಡಾರ ನಿರಾತಂಕವಾಗಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ರೋಟರಿ ಸೇವಾ ಸಂಘದ ಚೆರಮನ್ ಮಲ್ಲಿಕಾರ್ಜುನ ಕಲ್ಲೋಳಿ ಹೇಳಿದರು.
ಬುಧವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾಂಗಣದಲ್ಲಿ ರೋಟರಿ ಪರಿವಾರದವರು ಹಮ್ಮಿಕೊಂಡ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಈ ರಕ್ತ ಭಂಡಾರದ ಮೇಲೆ ಪೂಜ್ಯರು ವಿಶ್ವಾಸವಿಟ್ಟು ಮುಖ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಆರ್ಶಿವದಿಸುತ್ತಿರುವುದನ್ನು ಸ್ಮರಿಸಿದ ಅವರು ಶ್ರೀಗಳು ಹಾಕಿ ಕೊಟ್ಟ ಮಾರ್ಗದಲ್ಲಿ ಸಂಸ್ಥೆಯನ್ನು ಸಮಾಜಮುಖಿಯಾಗಿ ನಾವೆಲ್ಲಾ ಮುನ್ನಡೆಸುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಘೋಡಗೇರಿಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಮಾತನಾಡುತ್ತಾ ೧೨ನೇ ಶತಮಾನದಲ್ಲಿ ಎಲ್ಲರ ನಡಿಗೆ ಅನುಭವ ಮಂಟಪದ ಕಡೆಗೆ ಇತ್ತು. ೨೧ನೇ ಶತಮಾನದಲ್ಲಿ ಎಲ್ಲರ ನಡಿಗೆ ವಿಜಯಪುರ ಕಡೆಗೆ ಇತ್ತು. ಇದಕ್ಕೆ ಕಾರಣ ಶ್ರೀ ಸಿದ್ದೇಶ್ವರ ಸ್ವಾಮಿಜಿ ಅವರು ನಿರ್ಸಗವನ್ನು ಪ್ರೇಮಿಸಿದರು ಅವರನ್ನು ನಿರ್ಸಗ ಪ್ರೇಮಿಸಿತ್ತು. ಅವರ ಆದರ್ಶಗಳು ಎಲ್ಲರ ಮನದಲ್ಲಿ ನೆಲಿಸಿ ಅವರು ಎಲ್ಲರಲ್ಲಿಯೂ , ಎಲ್ಲರ ಹೃದಯಗಳಲ್ಲಿಯೂ ಅಮರರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಈರಣ್ಣ ಕಡಾಡಿ, ಸೋಮಶೇಖರ್ ಮಗದುಮ್ಮ, ಸತೀಶ ನಾಡಗೌಡ, ಮಲ್ಲಿಕಾರ್ಜುನ ಈಟಿ, ಸತೀಶ ಬೆಳಗಾವಿ,ವಿದ್ಯಾ ಮಗದುಮ್ಮ, ಆರತಿ ನಾಡಗೌಡ, ಚಂದ್ರಶೇಖರ್ ಅಕ್ಕಿ, ಅಶೋಕ್ ಪೂಜಾರಿ, ರಜನಿ ಜಿರಗ್ಯಾಳ, ಜಯಾ ಚುನಮರಿ ನರೇಂದ್ರ ಪುರಂದರೆ, ಪ್ರೋ.ಎಂ.ಬಿ.ಕುದರಿ, ಪುಷ್ಪ ಮರುಗೋಡ, ಪ್ರೋ.ಜಿ.ವ್ಹಿ.ಮಳಗಿ ಮಾತನಾಡಿ ಪೂಜ್ಯರೊಂದಿಗಿನ ಅವಿಸ್ಮರಣೀಯ ಕ್ಷಣಗಳನ್ನು ಸ್ಮರಣೆ ಮಾಡಿದರು.
ವಿವಿಧ ಮಹಿಳಾ ಸಂಘದ ಸದಸ್ಯೆಯರು ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ಸ್ವರ ನಮನ ಸಲ್ಲಿಸಿದರು.