Breaking News

ರಮೇಶ ಜಾರಕಿಹೊಳಿ ಬೆಂಬಲಕ್ಕೆ ಲಿಂಗಾಯತ ಸಮಾಜ

Spread the love

ರಮೇಶ ಜಾರಕಿಹೊಳಿ ಬೆಂಬಲಕ್ಕೆ ಲಿಂಗಾಯತ ಸಮಾಜ

ಯುವ ಭಾರತ ಸುದ್ದಿ ಗೋಕಾಕ :
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಬೆಂಬಲಿಸಲು ಇಲ್ಲಿನ ವೀರಶೈವ ಲಿಂಗಾಯತ ಸಮಾಜ ನಿರ್ಧರಿಸಿದೆ.
ಶುಕ್ರವಾರ ಗೋಕಾಕನಲ್ಲಿ ನಡೆದ ವೀರಶೈವ ಲಿಂಗಾಯತ ಸಮಾಜದ ಸಭೆಯಲ್ಲಿ ಮಾತನಾಡಿದ ಲಿಂಗಾಯತ ಸಮಾಜದ ಮುಖಂಡರು ಈ ನಿರ್ಧಾರ ಪ್ರಕಟಿಸಿದ್ದಾರೆ.

ಲಿಂಗಾಯತ ಸಮಾಜದ ಮುಖಂಡ ಹಾಗೂ ಘಟಪ್ರಭಾ ಶುಗರ್ಸ್ ಅಧ್ಯಕ್ಷ ಅಶೋಕ ಪಾಟೀಲ ಮಾತನಾಡಿ, ಕಳೆದ 40 ವರ್ಷಗಳಿಂದ ರಮೇಶ ಜಾರಕಿಹೊಳಿಯವರು ಲಿಂಗಾಯತ ಸಮಾಜದ ಅಭ್ಯುದಯಕ್ಕೆ ಶ್ರಮಿಸುತ್ತಾ ಬಂದಿದ್ದಾರೆ. ಸಮಾಜದ ಯಾವುದೇ ಕೆಲಸ ಕಾರ್ಯಗಳು ಇರಲಿ, ಅದಕ್ಕೆ ತಕ್ಷಣ ಸ್ಪಂದಿಸುತ್ತಾ ಬಂದಿರುವ ರಮೇಶ ಜಾರಕಿಹೊಳಿ ಅವರು ಲಿಂಗಾಯತ ಸಮಾಜದ ಬಗ್ಗೆ ಅಪಾರ ಕಾಳಜಿ ಹಾಗೂ ಕಳಕಳಿ ಹೊಂದಿದ್ದಾರೆ. ಸಮಾಜದ ಯಾವುದೇ ಕೆಲಸ ಕಾರ್ಯಗಳು ಇರಲಿ, ಅವರ ಬಳಿ ತೆಗೆದುಕೊಂಡು ಹೋದ ತಕ್ಷಣ ಅವುಗಳನ್ನು ಮಾಡುತ್ತಾರೆ. ಈ ದಿಸೆಯಲ್ಲಿ ರಮೇಶ ಜಾರಕಿಹೊಳಿ ಅವರು ರಾಜ್ಯದ ಇತರ ಶಾಸಕರಿಗೆ ಮೇಲ್ಪಂಕ್ತಿಯಾಗಿ ನಿಂತಿದ್ದಾರೆ. ಈ ಸಲವೂ ಅವರನ್ನು ಅತ್ಯಂತ ದೊಡ್ಡ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ರಮೇಶ ಜಾರಕಿಹೊಳಿ ಅವರು ಲಿಂಗಾಯತ ಸಮಾಜದ ಕಟ್ಟಾಳುವಿನಂತೆ ಕೆಲಸ ಮಾಡುತ್ತಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವಲ್ಲಿ ಅವರು ತೋರುತ್ತಿರುವ ಕಾಳಜಿ ಅನನ್ಯವಾವಾದದ್ದು. ಅವರು ಈ ಬಾರಿಯೂ ಅತ್ಯಂತ ದೊಡ್ಡ ಅಂತರದಿಂದ ಗೆಲ್ಲುವುದು ಎಲ್ಲರ ಕನಸು. ಈ ನಿಟ್ಟಿನಲ್ಲಿ ಗೋಕಾಕ ಮತಕ್ಷೇತ್ರದ ಲಿಂಗಾಯತ ಸಮಾಜ ಬಾಂಧವರು ಒಗ್ಗಟ್ಟಾಗಿ ನಿಂತು ಅವರನ್ನು ಗೆಲ್ಲಿಸಬೇಕು. ಈ ಮೂಲಕ ರಾಜ್ಯದ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಬರಲು ಮುನ್ನುಡಿ ಬರೆಯಬೇಕು. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಸದಾ ವೀರಶೈವ ಲಿಂಗಾಯತ ಸಮಾಜದ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದು ಈ ಬಾರಿಯೂ ಸಮಾಜ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

ಗೋಕಾಕನಲ್ಲಿಂದು ಜಾತ್ರೆಯಂತೆ ಜನಸಾಗರವೇ ಸೇರಿದೆ. ರಮೇಶ ಜಾರಕಿಹೊಳಿಯವರ ಪ್ರೀತಿ-ವಿಶ್ವಾಸದಿಂದ ನಾವು ಇಲ್ಲಿ ಸೇರಿದ್ದೇವೆ. 40 ವರ್ಷಗಳಿಂದ ಅವರೊಂದಿಗೆ ಒಡನಾಟದಲ್ಲಿ ನಾನು ಇದ್ದೇನೆ. ಅವರು ಎಂದೂ ಜಾತಿಯತೆಯನ್ನು ಮಾಡಿಲ್ಲ. 1983 ರಲ್ಲಿ ಗೋಕಾಕ ನಗರಸಭೆಯಿಂದ ಅವರು ರಾಜಕೀಯವನ್ನು ಆರಂಭಿಸಿದರು. ಆಗ ಸೀಮಿತ ಸಂಖ್ಯೆಯಲ್ಲಿ ಇದ್ದ ನಾವು ಗುಂಪು ರಚಿಸಿಕೊಂಡೆವು. ಆಗ ಅವರ ಸೇವೆ ಆರಂಭವಾಯಿತು. ಎಲ್ಲಾ ಸಹೋದರರು ಅವರಿಗೆ ಸಾಥ್ ಕೊಟ್ಟರು. 1990 ರಲ್ಲಿ ನಾವು ನಗರಸಭೆಯ ಚುಕ್ಕಾಣಿ ಹಿಡಿದವು. ವಿರೋಧ ಪಕ್ಷದಲ್ಲಿ ಇದ್ದ ನಾವು ಆಡಳಿತ ಪಕ್ಷಕ್ಕೆ ಬಂದಾಗ ಬಹಳ ಖುಷಿ ಪಟ್ಟವು. ನನ್ನನ್ನೇ ನಗರಸಭೆಯ ಅಧ್ಯಕ್ಷರನ್ನಾಗಿ ಮಾಡಿದರು. ನಂತರದ ದಿನಗಳಲ್ಲಿ ಶಂಕರ ಮಗೆನ್ನವರ, ಜಯಾನಂದ ಹುಣಶ್ಯಾಳಿ ಸೇರಿದಂತೆ ಅನೇಕ ಲಿಂಗಾಯತರಿಗೆ ನಗರಸಭೆ, ಡಿಸಿಸಿ ಬ್ಯಾಂಕ್ ಸೇರಿದಂತೆ ಇತರ ಸಂಘ-ಸಂಸ್ಥೆಗಳಲ್ಲಿ ಅವರು ಅವಕಾಶ ನೀಡಿದರು. ಲಿಂಗಾಯತರಿಗೆ ಅಗ್ರ ಪ್ರಾಶಸ್ತ್ಯ ಕೊಟ್ಟವರಲ್ಲಿ ಜಾರಕಿಹೊಳಿ ಸಹೋದರರೇ ಮೊದಲಿಗರೆನಿಸಿಕೊಂಡಿದ್ದಾರೆಎಂದು ಅವರು ಅಭಿಮಾನ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಗಳಿಗೆ ಮೊದಲು ಹೆಚ್ಚಿನ ಅನುದಾನ ಸಿಗುತ್ತಿರಲಿಲ್ಲ. ಆದರೆ, ನಂತರದ ದಿನಗಳಿಂದ ಅನುದಾನ ಬರಲು ಆರಂಭವಾಯಿತು. ಗೋಕಾಕಗೆ ಸರಕಾರದಿಂದ ಸಾಕಷ್ಟು ಅನುದಾನ ಸಿಕ್ಕಿದ್ದರಿಂದ ಬೀದಿ ದೀಪ, ವಾಣಿಜ್ಯ ಸಂಕೀರ್ಣ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ರಮೇಶ್ ಜಾರಕಿಹೊಳಿಯವರು ಮಾಡಿಕೊಟ್ಟಿದ್ದಾರೆ. ಅವರಿಂದಾಗಿ ಗೋಕಾಕ ಇಂದು ದೊಡ್ಡ ನಗರವಾಗಿ ಬೆಳೆದಿದೆ ಎಂದು ಹೇಳಿದರು.

ಮೊದಲಿನಿಂದಲೂ ಲಿಂಗಾಯತ ಸಮಾಜದ ಜೊತೆ ಅವರು ಸಂಪರ್ಕ ಹೊಂದಿದ್ದಾರೆ. ಮಠಮಾನ್ಯಗಳಿಗೆ ಅವರ ಕೊಡುಗೆ ಅಪಾರವಾಗಿದೆ. ಮಮದಾಪುರ, ಶೂನ್ಯ ಸಂಪಾದನಾ ಮಠ, ಬಸವ ಮಂದಿರ ಸೇರಿದಂತೆ ಇತರ ಮಠಮಾನ್ಯಗಳಿಗೆ ಅಗತ್ಯವಾದ ಅನುದಾನ, ಜಾಗ ಮುಂತಾದವುಗಳನ್ನು ದೊರಕಿಸಿ ಕೊಟ್ಟಿದ್ದಾರೆ. ಅವರು ನಮ್ಮ ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಹೇಳುತ್ತಾ ಹೋದರೆ ಬೆಳಗಿನವರೆಗೂ ಸಾಗುತ್ತದೆ. ಮಹಾಭಾರತದಂತೆ ಅದು ಮುಂದುವರಿಯುತ್ತದೆ ಎಂದು ರಮೇಶ ಜಾರಕಿಹೊಳಿಯವರು ಲಿಂಗಾಯತ ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಬಿಜೆಪಿಯಿಂದ ಮಾತ್ರ ಲಿಂಗಾಯತ ಸಮಾಜದವರಿಗೆ ಮುಖ್ಯಮಂತ್ರಿ ಪಟ್ಟ ಸಿಗಲು ಸಾಧ್ಯ. ಬಿಜೆಪಿ ಮೊದಲಿನಿಂದಲೂ ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡುತ್ತಾ ಬಂದಿದೆ. ಗೋಕಾಕ ಮತಕ್ಷೇತ್ರದಲ್ಲಿ ಲಿಂಗಾಯತ ಬಾಂಧವರು ಜಾರಕಿಹೊಳಿ ಸಹೋದರರನ್ನು ಸದಾ ಗೆಲ್ಲಿಸುತ್ತಾ ಬಂದಿದ್ದಾರೆ. ರಮೇಶ ಜಾರಕಿಹೊಳಿ ಅವರು ಸಹ ನಮ್ಮ ಸಮಾಜಕ್ಕೆ ಎಲ್ಲಿಲ್ಲದ ಮಹತ್ವ ಕೊಡುತ್ತಾ ಬಂದಿದ್ದಾರೆ. ಅವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಇಷ್ಟು ಸಲ ಲಿಂಗಾಯತ ಸಮಾಜದವರು ಅವರಿಗೆ ಮುಕ್ತವಾಗಿ ಆಶೀರ್ವಾದ ಮಾಡಿದ್ದಾರೆ. ಮೇ ತಿಂಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲೂ ಗೆಲ್ಲಿಸಬೇಕು. ಈಗ ಇಲ್ಲಿ ಸೇರಿರುವ ಜನಸ್ತೋಮ ನೋಡಿದರೆ ಬಹು ದೊಡ್ಡ ಅಂತರದಲ್ಲಿ ಗೆದ್ದು ಬರುತ್ತಾರೆ ಎಂಬ ನೋಟ ಗಮನಿಸಬಹುದು ಎಂದು ಹೇಳಿದರು.

ಗೋಕಾಕ ಮತಕ್ಷೇತ್ರದಲ್ಲಿ ನಡೆದಿರುವ ಜಾರಕಿಹೊಳಿ ಸಹೋದರರ ಕೆಲಸ ಕಾರ್ಯಗಳಲ್ಲಿ ಅವರ ಅಳಿಯ ಅಂಬಿರಾವ್ ಪಾಟೀಲ ಹಾಗೂ ಪುತ್ರ ಅಮರನಾಥ ಜಾರಕಿಹೊಳಿಯವರ ಸೇವೆಯನ್ನು ನೆನಪಿಸಿದ ಅವರು ಅಂಬಿರಾವ್ ಪುಣ್ಯಕೋಟಿಯಂತೆ. ಅವರು ಯಾವುದಕ್ಕೂ ಮುಂದೆ ಬರಲ್ಲ. ಹಿಂದೆ ನಿಂತು ಕೆಲಸ ಮಾಡುತ್ತಾರೆ. ಕೆಎಂಎಫ್ ಅಧ್ಯಕ್ಷರಾಗಿರುವ ಅಮರನಾಥ ಜಾರಕಿಹೊಳಿಯವರು ಸಹ ಸಮಾಜ ಸೇವೆಯಲ್ಲಿ ಸದಾ ಮುಂದಿರುತ್ತಾರೆ ಎಂದು ಹೇಳಿದರು.

ಎಲ್ಲಾ ಕಡೆ ಜಾತಿ ಕಲಹ ನಡೆಯುತ್ತದೆ. ಆದರೆ ಗೋಕಾಕನಲ್ಲಿ ಮಾತ್ರ ಎಂಥ ಜಾತಿ ಕಲಹ ಎಂದಿಗೂ ಸಾಧ್ಯವಿಲ್ಲ. ಆದರೂ ಅವರ ಬಗ್ಗೆ ಹೊಟ್ಟೆ ಕಡಿಯುವುದರಿಂದ ಕೆಲವರು ಅವರ ಬಗ್ಗೆ ಹೇಳಬಹುದು. ಆದರೆ, ಅವುಗಳಿಗೆ ಯಾರು ಸಹಾ ಕಿವಿಗೊಡಬೇಡಿ. ಮೊದಲಿನಿಂದಲೂ ಅವರನ್ನು ಆಶೀರ್ವದಿಸುತ್ತಾ ಬಂದಿದ್ದೀರಿ. ಅವರ ಸೇವೆಗೆ, ಅಭಿವೃದ್ಧಿಗೆ ಕೈಜೋಡಿಸಿದ್ದೀರಿ. ನಿಮ್ಮ ಆಶೀರ್ವಾದ ಸದಾ ಅವರ ಮೇಲಿರಲಿ. ರಮೇಶ ಜಾರಕಿಹೊಳಿಯವರು ಕರ್ನಾಟಕದಲ್ಲಿಯೇ ಪ್ರಚಂಡ ಬಹುಮತದಿಂದ ಗೆಲ್ಲುವಂತೆ ಆಗಬೇಕು. ಈ ನಿಟ್ಟಿನಲ್ಲಿ ನಮ್ಮೆಲ್ಲರ ಶ್ರೀರಕ್ಷೆ ಅವರ ಮೇಲಿರಬೇಕು. ಪ್ರತಿಯೊಬ್ಬರಿಗೂ ಅವರು ಮಾಡಿರುವ ಕೆಲಸ ಕಣ್ಣಿಗೆ ಕಾಣುತ್ತದೆ. ಹೀಗಾಗಿ ಅವರು ರಾಜ್ಯದೆಲ್ಲೆಡೆ ಸಂಚರಿಸಬೇಕು. ಈಗಿನ ಬಿಜೆಪಿ ಸರಕಾರ ಬರಲು ರಮೇಶ ಜಾರಕಿಹೊಳಿಯವರೇ ಕಾರಣರಾಗಿದ್ದಾರೆ. 4೦ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದರು. ಅಲ್ಲಿನ ಭಿನ್ನಮತದಿಂದ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ಅವರು ಬಿಜೆಪಿಗೆ ಬಂದದ್ದು ಬಹಳ ಅನುಕೂಲವಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಕೇಂದ್ರ ವರಿಷ್ಠರ ಜತೆ ನೇರವಾಗಿ ಸಂಪರ್ಕವನ್ನು ಅವರು ಹೊಂದಿದ್ದಾರೆ. ಇಂಥ ನಾಯಕನನ್ನು ದೊಡ್ಡ ಅಂತರದಿಂದ ಗೆಲ್ಲಿಸೋಣ. ಅವರ ಸೇವೆಗೆ ಆಸ್ಪದ ಕೊಡೋಣ ಎಂದು ಅವರು ಮನವಿ ಮಾಡಿದರು.

ಘಟಪ್ರಭಾದ ರಾಮಣ್ಣ ಹುಕ್ಕೇರಿ ಮಾತನಾಡಿ, ಯಾವುದೇ ನಾಡು, ರಾಜ್ಯ ಗೆಲ್ಲಬೇಕಾದರೆ ಸಂಘಟನೆ ಅಗತ್ಯ. ಗೋಕಾಕನಲ್ಲಿ ಬಲಿಷ್ಠವಾದ ಕೋಟೆ(ರಮೇಶ ಜಾರಕಿಹೊಳಿ) ಇದೆ. ಆ ಕೋಟೆಯನ್ನು ಇನ್ನಷ್ಟು ಬಲಪಡಿಸಲು ನಾವು ಶ್ರಮಿಸಬೇಕು. ಈ ಕ್ಷೇತ್ರದಲ್ಲಿ ಯಾವೊಂದು ಕೆಟ್ಟ ಕಾರ್ಯ ಆಗುವುದಿಲ್ಲ. ನಮ್ಮ ಹಾಗೂ ಅನ್ಯ ಸಮಾಜಕ್ಕೆ ಜಾರಕಿಹೊಳಿಯವರು ಎಂದೂ ಅನ್ಯಾಯ ಮಾಡಿಲ್ಲ. ಎಲ್ಲಾ ಸಮಾಜಕ್ಕೂ ಅವರು ನ್ಯಾಯ ದೊರಕಿಸಿ ಕೊಡುವ ಸರ್ವ ವ್ಯಾಪಿ, ಸಮರ್ಥ ನಾಯಕರಾಗಿದ್ದಾರೆ. ಎಲ್ಲರನ್ನೂ ಕಾಪಾಡುವ ಕೆಲಸವನ್ನು ರಮೇಶ ಜಾರಕಿಹೊಳಿಯವರು ಮಾಡುತ್ತಿದ್ದಾರೆ ಎಂದು ಹೇಳಿದರು.

ಗೋಕಾಕ ಮತಕ್ಷೇತ್ರದ ಸರ್ವಾಂಗೀಣ ಪ್ರಗತಿಯಲ್ಲಿ ಅಂಬಿರಾವ್ ಪಾಟೀಲ ಮಾಡುತ್ತಿರುವ ಸೇವಾ ಕಾರ್ಯವನ್ನು ನೆನಪು ಮಾಡಿಕೊಂಡ ಅವರು, ಅಂಬಿರಾವ್ ಪಾಟೀಲ ಒಬ್ಬರು ಉತ್ತಮ ಸೇನಾಧಿಕಾರಿಯಂತೆ ಕೆಲಸ ಮಾಡುತ್ತಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಗ್ರಾಮ ಸಡಕ್ ಯೋಜನೆಯನ್ನು ಅಕ್ಷರಶಃ ಗೋಕಾಕ ತಾಲೂಕಿನಲ್ಲಿ ಕಾರ್ಯಗತಗೊಳಿಸಿದ್ದಾರೆ. ಪ್ರತಿಯೊಂದು ಗ್ರಾಮದಲ್ಲೂ ರಸ್ತೆ, ಕಾಲುವೆ ಮುಂತಾದ ಸಕಲ ವ್ಯವಸ್ಥೆಯನ್ನು ಅವರು ಮಾಡಿಕೊಟ್ಟಿದ್ದಾರೆ. ಅವರು ನಮ್ಮ ಪಾಲಿನ ಅಮಿತ್ ಶಾರಂತೆ ಇದ್ದಾರೆ ಎಂದು ಅವರು ಹೇಳಿದರು.

ಗೋಕಾಕ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿಯ ಕೋಟೆ ಸದಾ ಗಟ್ಟು ಮುಟ್ಟಾಗಿರಬೇಕು. ಚೀನಾದ ಗೋಡೆಯಂತೆ ಗಟ್ಟಿ ಮುಟ್ಟಾಗಿದ್ದರೆ ಅನುಕೂಲ. ನಮ್ಮ ಸಮಾಜದ ಬೆಂಬಲ ಸದಾ ಅವರಿಗೆ ಇರಲಿದೆ. ಹೆಗಲಿಗೆ ಹೆಗಲು ಕೊಟ್ಟು ಅವರನ್ನು ಈ ಬಾರಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸೋಣ. ಇವರು ನಮ್ಮ ಮನೆ ಮಗನೆಂದು ಭಾವಿಸಿ ರಾಜ್ಯಕ್ಕೆ ಮಾದರಿಯಾದ ರೀತಿಯಲ್ಲಿ ಅವರನ್ನು ಗೆಲ್ಲಿಸೋಣ. ರಾಜ್ಯದಲ್ಲಿ ಯಡಿಯೂರಪ್ಪ ಅವರ ನಂತರ ರಮೇಶ ಜಾರಕಿಹೊಳಿ ಅವರು ಅತಿ ಹೆಚ್ಚು ಅನುದಾನವನ್ನು ಗೋಕಾಕ ಮತಕ್ಷೇತ್ರಕ್ಕೆ ತಂದುಕೊಟ್ಟ ಹಿರಿಮೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಶಿವಾಪುರದ ಬಸಗೌಡ ಪಾಟೀಲ ಮಾತನಾಡಿ, ವೀರಶೈವ ಲಿಂಗಾಯತ ಸಮಾಜಕ್ಕೆ ರಮೇಶ ಜಾರಕಿಹೊಳಿ ಅವರ ಕೊಡುಗೆ ಬಹಳ ದೊಡ್ಡದು. ಶಾಸಕರಾಗಿ ಆಯ್ಕೆಯಾದ ಆರಂಭದಿಂದ ಇಂದಿನವರೆಗೂ ಅವರು ಲಿಂಗಾಯತ ಸಮಾಜಕ್ಕೆ ನೀಡಿರುವ ಪ್ರಾಧಾನ್ಯತೆ ಅನುಪಮ ಎಂದು ಶ್ಲಾಘಿಸಿದರು.


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

18 − 8 =