Breaking News

ಮೇಡಂ ನಿಮಗೆ ನಾನು ಜಗದೀಪ, ಉಪರಾಷ್ಟ್ರಪತಿಯಲ್ಲ : ತನಗೆ ಕಲಿಸಿದ್ದ 83 ವರ್ಷದ ಶಾಲಾ ಶಿಕ್ಷಕಿಗೆ ಹೇಳಿದ ಉಪರಾಷ್ಟ್ರಪತಿ

Spread the love

ಮೇಡಂ ನಿಮಗೆ ನಾನು ಜಗದೀಪ, ಉಪರಾಷ್ಟ್ರಪತಿಯಲ್ಲ : ತನಗೆ ಕಲಿಸಿದ್ದ 83 ವರ್ಷದ ಶಾಲಾ ಶಿಕ್ಷಕಿಗೆ ಹೇಳಿದ ಉಪರಾಷ್ಟ್ರಪತಿ

ನವದೆಹಲಿ:
ಭಾರತದಲ್ಲಿ, ಶಿಕ್ಷಕ-ವಿದ್ಯಾರ್ಥಿ ನಡುವಿನ ಸಂಬಂಧವನ್ನು ಸಂಸ್ಕೃತ ಶ್ಲೋಕಗಳು ಮತ್ತು ವೇದ ಶ್ಲೋಕಗಳಲ್ಲಿ ದೈವತ್ವದ ಕಲ್ಪನೆಗಳೊಂದಿಗೆ ವಿವರಿಸಲಾಗಿದೆ.
ಭಾರತೀಯ ವಿದ್ಯಾರ್ಥಿಗಳು ತಮ್ಮ ಜೀವನಕ್ಕೆ ತಮ್ಮ ಶಿಕ್ಷಕರ ಕೊಡುಗೆಯನ್ನು ಸ್ಮರಿಸಲು ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಾರೆ.
ಭಾರತದ ಉಪರಾಷ್ಟ್ರಪತಿ 72 ವರ್ಷದ ಜಗದೀಪ ಧನಕರ ಅವರು ಕೇರಳದಲ್ಲಿ ತಮ್ಮ
83 ವರ್ಷದ ಶಾಲಾ ಟೀಚರ್‌ ರತ್ನಾ ನಾಯರ್‌ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಇದು ವಿದ್ಯಾರ್ಥಿ ಹಾಗೂ ಶಿಕ್ಷಕ ನಡುವಿನ ಸಂಬಂಧವನ್ನು ಮತ್ತೊಮ್ಮೆ ನೆನಪಿಸಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಉಪರಾಷ್ಟ್ರಪತಿಯಾದ ಜಗದೀಪ ಧನಕರ ಅವರು ಮೇ 22 ರಂದು ಸೋಮವಾರ ಕೇರಳ ರಾಜ್ಯದ ಚಂಪಾಡ್ ಗ್ರಾಮಕ್ಕೆ ಭೇಟಿ ನೀಡಿದ್ದರು.
ಭಾರತದ ಉಪರಾಷ್ಟ್ರಪತಿ ಚಂಪಾಡ್‌ನಲ್ಲಿ ತಾನು ವಿದ್ಯಾರ್ಥಿಯಾಗಿದ್ದಾಗ ಶಾಲಾ ಶಿಕ್ಷಕಿಯಾಗಿದ್ದ 83 ವರ್ಷದ ರತ್ನಾ ನಾಯರ್‌ ಅವರನ್ನು ಭೇಟಿಯಾದರು. ರಾಜಸ್ಥಾನದ ಚಿತ್ತೂರ್‌ಗಢ ಜಿಲ್ಲೆಯಲ್ಲಿದ್ದ ಸೈನಿಕ್‌ ಸ್ಕೂಲ್‌ನಲ್ಲಿ ರತ್ನಾ ನಾಯರ್‌ ಶಿಕ್ಷಕಿಯಾಗಿದ್ದಾಗ ಧನಕರ ಅವರು ಅಲ್ಲಿ ವಿದ್ಯಾರ್ಥಿಯಾಗಿದ್ದರು. 55 ವರ್ಷಗಳ ಬಳಿಕ ಧನಕರ ಅವರು, ತಮ್ಮ ಶಿಕ್ಷಕಿಯನ್ನು ಭೇಟಿಯಾಗಿದ್ದಾರೆ. 2022 ರ ಆಗಸ್ಟ್‌ 11 ರಂದು ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಅವರು ನನಗೆ ಆಹ್ವಾನ ನೀಡಿದ್ದರು. ಅವರಿಗೆ ಶಿಕ್ಷಕರಾಗಿದ್ದವರ ಪೈಕಿ ಇಬ್ಬರು ಮಾತ್ರವೇ ಜೀವಂತವಾಗಿದ್ದೇವೆ. ಆದರೆ, ಅನಾರೋಗ್ಯದ ಕಾರಣದಿಂದಾಗಿ ನನಗೆ ದೆಹಲಿಗೆ ಹೋಗಲು ಆಗಿರಲಿಲ್ಲ ಎಂದು ಜಗದೀಪ ಧನಕರ ಅವರು ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ದಿನವನ್ನು ಶಿಕ್ಷಕಿ ರತ್ನಾ ನಾಯರ್‌ ನೆನಪಿಸಿಕೊಂಡಿದ್ದಾರೆ.

ಜಗದೀಪ ಧನಕರ ಅವರು ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಅಂದು ಸಂಜೆ, ನಾನು ಏಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಲು ಅವರಿಗೆ ಕರೆ ಮಾಡಿ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ. ಜಗದೀಪ ಅವರು ಪರವಾಗಿಲ್ಲ, ಮುಂದಿನ ಕೇರಳ ಭೇಟಿಯ ವೇಳೆ ನಿಮ್ಮನ್ನು ಭೇಟಿಯಾಗಲು ಬರುವುದಾಗಿ ನನಗೆ ಹೇಳಿದರು. ಅವರು ನನಗೆ ಹೇಳಿದರು, ‘ಮೇಡಂ, ನಿಮಗೆ, ನಾನು ಜಗದೀಪ, ಭಾರತದ ಉಪರಾಷ್ಟ್ರಪತಿ ಅಲ್ಲ. ನೀವು ನನ್ನ ಗುರು. (ನನ್ನ ಹೆಸರಿನಿಂದ) ಕರೆಯುವುದು ನಿಮ್ಮ ಹಕ್ಕು ಎಂದು ಅವರು ಹೇಳಿದ್ದರು. ಆದರೆ ದೇಶದ ಪ್ರಜೆಯಾಗಿ ನಾನು ನನ್ನ ಕರ್ತವ್ಯ ಮತ್ತು ನನ್ನ ಹಕ್ಕುಗಳ ನಡುವೆ ವ್ಯತ್ಯಾಸವನ್ನು ತೋರಿಸಬೇಕು ಎಂದು ನಾನು ಅವರಿಗೆ ಹೇಳಿದೆ ಎಂದು ಶಿಕ್ಷಕಿ ರತ್ನಾ ನಾಯರ್‌ ನೆನಪಿಸಿಕೊಂಡಿದ್ದಾರೆ.

ಸೋಮವಾರ ಕಣ್ಣೂರು ಜಿಲ್ಲೆಯ ಪಣಿಯಣ್ಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ರತ್ನಾ ನಾಯರ್‌ ಮನೆಗೆ ಜಗದೀಪ ಧನಕರ ಅವರು ತಮ್ಮ ಪತ್ನಿ ಡಾ. ಸುದೇಶಾ ಧನಕರ್‌ ಅವರೊಂದಿಗೆ ಭೇಟಿ ನೀಡಿದರು. ಕಾರಿನಿಂದ ಇಳಿಯುತ್ತಿದ್ದಂತೆ ಅವರು ಶಿಕ್ಷಕಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ರತ್ನಾ ನಾಯರ್‌, ‘ನನಗೆ ಇದಕ್ಕಿಂತ ದೊಡ್ಡ ಗುರುದಕ್ಷಿಣೆ ಬೇಕಿಲ್ಲ’ ಎಂದು ಧನಕರ ಅವರಿಗೆ ತಿಳಿಸಿದ್ದಾರೆ. ಉಪರಾಷ್ಟ್ರಪತಿಯೊಂದಿಗೆ ಮಾತನಾಡುವ ವೇಳೆ, ಜಗದೀಪ್‌ ಧನಕರ ಅವರು ವಿದ್ಯಾರ್ಥಿಯಾಗಿದ್ದಾಗ ಖಾಕಿ ಬಣ್ಣದ ಸಮವಸ್ತ್ರ ತೊಟ್ಟು ಮುಂದಿನ ಬೆಂಚ್‌ನಲ್ಲಿ ಏಕಾಗ್ರತೆಯಿಂದ ಕುಳಿತುಕೊಳ್ಳುತ್ತಿದ್ದುದನ್ನು ನೆನಪಿಸಿಕೊಂಡರು.
‘ಆತ ತುಂಬಾ ಚಟುವಟಿಕೆಯಿಂದ ಇದ್ದ. ಶಿಸ್ತು ಹಾಗೂ ವಿಧೇಯ ವಿದ್ಯಾರ್ಥಿ. ಕ್ಲಾಸ್‌ನ ಹೊರಗೂ ಕ್ಲಾಸ್‌ನ ಒಳಗೂ ಒಂದೇ ರೀತಿಯಲ್ಲಿ ಇರುತ್ತಿದ್ದ. ಚರ್ಚಾ ಸ್ಪರ್ಧೆಗಳಲ್ಲಿ ಮುಂದಿರುತ್ತಿದ್ದ. ಕಲಿಯುವುದರಲ್ಲೂ ಮುಂದಿದ್ದ’ ಎಂದು ರತ್ನಾ ನಾಯರ್‌ ನೆನಪಿಸಿಕೊಂಡಿದ್ದಾರೆ.

ಚಿತ್ತೂರ್‌ಗಢದ ಸೈನಿಕ್‌ ಶಾಲೆ ವಸತಿ ಶಾಲೆಯಾಗಿತ್ತು. ವರ್ಷದಲ್ಲಿ ಅಂದಾಜು 9 ತಿಂಗಳು ಅವರು ಶಿಕ್ಷಕರೊಂದಿಗೆ ಇರಬೇಕಿತ್ತು. ಇದರಿಂದಾಗಿ ಶಿಕ್ಷಕರ ಜೊತೆ ಉತ್ತಮ ಬಾಂಧವ್ಯಗಳನ್ನು ಬೆಳೆಸಿಕೊಳ್ಳುತ್ತಿದ್ದರು. ಪೋಷಕರು ಆಗಾಗ ಶಾಲೆಗೆ ಭೇಟಿ ನೀಡುತ್ತಿದ್ದರು. ಜಗದೀಪ ಅವರ ತಂದೆ ಸಾಮಾನ್ಯವಾಗಿ ಶಾಲೆಗೆ ಭೇಟಿ ನೀಡುತ್ತಿದ್ದರು. ಪ್ರತಿ ತಿಂಗಳು ಶಾಲೆಗೆ ಬರುತ್ತಿದ್ದ ಅವರು, ತಮ್ಮ ಇಬ್ಬರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸುತ್ತಿದ್ದರು.
ತಮ್ಮ ಮನೆಗೆ ಬಂದ ಉಪರಾಷ್ಟ್ರಪತಿ ಧನಕರ ಅವರಿಗೆ ರತ್ನಾ ನಾಯರ್‌ ಕುಟುಂಬ ಎಳನೀರು ನೀಡಿದ್ದಲ್ಲದೆ, ಮನೆಯಲ್ಲಿಯೇ ತಯಾರಿಸಿದ ಇಡ್ಲಿ ಹಾಗೂ ಬಾಳೆಹಣ್ಣಿನ ಚಿಪ್ಸ್‌ ನೀಡಿದ್ದಾರೆ. ಸೈನಿಕ್‌ ಶಾಲೆಯ ಹಲವು ವಿದ್ಯಾರ್ಥಿಗಳು ಸೇನೆಯಲ್ಲಿದ್ದರೆ, ದೇಶದ ಉಪರಾಷ್ಟ್ರಪತಿಯಂಥ ಸ್ಥಾನಕ್ಕೇರಿದ ವ್ಯಕ್ತಿ ಧನಕರ ಮಾತ್ರವೇ ಆಗಿದ್ದಾರೆ.

2019 ರಲ್ಲಿ ಪಶ್ಚಿಮ ಬಂಗಾಳ ರಾಜ್ಯದ ರಾಜ್ಯಪಾಲರಾಗಿ ಧನಕರ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಗುರು-ಶಿಷ್ಯರು ಮತ್ತೆ ಪರಸ್ಪರ ಸಂಪರ್ಕಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.
ನಾಯರ್ ಅವರು ತಮ್ಮ ಕೇರಳದ ಮನೆಯಿಂದ ರಾಜ್ಯಪಾಲರ ಕಚೇರಿಗೆ ಕರೆ ಮಾಡಿದರು. ಆಗ ಅವರು ಸಿಗಲಿಲ್ಲ. ಆದರೆ ಹತ್ತು ನಿಮಿಷಗಳ ನಂತರ, ರತ್ನಾ ನಾಯರ್‌ ಅವರಿಗೆ ತಿರುಗಿ ಕರೆ ಬಂದಿತು. “ಕೇರಳದಿಂದ ಮಹಿಳೆಯೊಬ್ಬರು ಕರೆ ಮಾಡಿದ್ದಾರೆ ಎಂದು ಅವರಿಗೆ ತಿಳಿಸಿದಾಗ, ರತ್ನ ನಾಯರ್ ಇರಬೇಕು ಎಂದು ತನಗೆ ಖಚಿತವಾಯಿತು” ಎಂಬುದಾಗಿ ಜಗದೀಪ ಅವರು ಹೇಳಿದ್ದಾರೆ ಎಂದು ಶಿಕ್ಷಕಿ ನೆನಪಿಸಿಕೊಂಡಿದ್ದಾರೆ.
ವಕೀಲ ಹಾಗೂ ರಾಜಕಾರಣಿಯಾಗಿದ್ದ ಜಗದೀಪ್ ಧನಕರ ಅವರು ಆಗಸ್ಟ್ 2022 ರಲ್ಲಿ ಭಾರತದ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು 2019 ರಿಂದ 2022 ರವರೆಗೆ ಪಶ್ಚಿಮ ಬಂಗಾಳ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.
ಅವರು 1990 ರಿಂದ 1991 ರವರೆಗೆ ಮಾಜಿ ಪ್ರಧಾನಿ ಚಂದ್ರಶೇಖರ ಅವರ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು 1989 ರಿಂದ 1991 ರವರೆಗೆ ಲೋಕಸಭೆಯ ಸದಸ್ಯರಾಗಿದ್ದರು ಮತ್ತು ನಂತರ 1993 ರಿಂದ 1998 ರವರೆಗೆ ರಾಜಸ್ಥಾನ ವಿಧಾನಸಭೆಯ ಸದಸ್ಯರಾಗಿದ್ದರು.


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

1 × 2 =