ಮೂಡಲಗಿ : ಧರ್ಮಟ್ಟಿ ಪಿಕೆಪಿಎಸ್‍ನಲ್ಲಿ ಈಗಾಗಲೇ 2 ಕೋಟಿ ರೂ.ಗಳ ಪತ್ತನ್ನು 3.50 ಕೋಟಿ ರೂ.ಗಳಿಗೆ ಹೆಚ್ಚಿಸಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುವುದು ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಧರ್ಮಟ್ಟಿ ಗ್ರಾಮದ ಲಕ್ಷ್ಮೀ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದ ಬಳಿಕ ಸಾರ್ವಜನಿಕರನ್ನುದ್ಧೇಶಿಸಿ ಮಾತನಾಡಿದ ಅವರು, ರೈತರಿಗೆ ಪಿಕೆಪಿಎಸ್ ಗಳು ಜೀವನಾಡಿಯಾಗಿವೆ ಎಂದು ಹೇಳಿದರು.
ಧರ್ಮಟ್ಟಿ ಪಿಕೆಪಿಎಸ್‍ನಿಂದ ರೈತರಿಗೆ ಅನುಕೂಲವಾಗಲು ಸಾಲವನ್ನು ನೀಡಲು ಕ್ರಮ ಕೈಗೊಳ್ಳಲು ಆಡಳಿತ ಮಂಡಳಿಗೆ ಸೂಚಿಸಿದ್ದೇನೆ. ಈಗಿರುವ ಪತ್ತಿನ ಜೊತೆಗೆ ಹೆಚ್ಚುವರಿಯಾಗಿ 1.50 ಕೋಟಿ ರೂ.ಗಳ ಪತ್ತನ್ನು ಬಿಡಿಸಿಸಿ ಬ್ಯಾಂಕ್‍ನಿಂದ ಸೊಸಾಯಿಟಿಗೆ ನೀಡಿ ರೈತ ಸಮುದಾಯಕ್ಕೆ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ನೀಡಲು ಸೂಚಿಸಲಾಗಿದೆ. ಖಾಸಗಿ ಬ್ಯಾಂಕುಗಳು ರೈತರಿಗೆ ಅಧಿಕ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿವೆ. ಆದರೆ ಪಿಕೆಪಿಎಸ್ ಮಾತ್ರ ರೈತರಿಗೆ ಯಾವುದೇ ಬಡ್ಡಿ ಹಣ ಪಡೆಯದೇ ಸಾಲ ನೀಡುತ್ತಿವೆ. ಇದರ ಸದ್ಬಳಕೆಯನ್ನು ರೈತ ವೃಂದ ಪಡೆದುಕೊಳ್ಳುವಂತೆ ತಿಳಿಸಿದರು.
ಗುರ್ಲಾಪೂರ ಕ್ರಾಸದಿಂದ ಮೂಡಲಗಿವರೆಗೆ ನೀರಾವರಿ ಇಲಾಖೆಯಿಂದ ರಸ್ತೆ ಸುಧಾರಣೆಗೆ 4.90 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ಮೂಡಲಗಿಯಿಂದ ಮಸಗುಪ್ಪಿವರೆಗೆ ಪಿಎಂಜಿಎಸ್‍ವಾಯ್ ಯೋಜನೆಯಡಿ 10 ಕಿ.ಮೀ. ರಸ್ತೆ ಕಾಮಗಾರಿಗೆ 8.86 ಕೋಟಿ ರೂ. ಬಿಡುಗಡೆಯಾಗಿದ್ದು, ಇದೂ ಸಹ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಚುನಾವಣೆ ಬಳಿಕ ತಮ್ಮಲ್ಲಿಯ ಸಣ್ಣಪುಟ್ಟ ಮನಸ್ತಾಪಗಳನ್ನು ಮರೆತು ಗ್ರಾಮದ ಅಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸುವಂತೆ ಅವರು ತಿಳಿಸಿದರು.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಮುಖಂಡ ಬಿ.ಬಿ. ಪೂಜೇರಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಪರಶುರಾಮ ಸನದಿ, ಗ್ರಾಪಂ ಅಧ್ಯಕ್ಷೆ ಮಕ್ತುಮಾ ಜಾತಗಾರ, ಉಪಾಧ್ಯಕ್ಷ ಕೆಂಚಪ್ಪ ತಿಗಡಿ, ಶ್ರೀಕಾಂತ ಮುತಾಲಿಕದೇಸಾಯಿ, ಪಿಕೆಪಿಎಸ್ ಅಧ್ಯಕ್ಷ ಶಿದ್ಲಿಂಗಪ್ಪ ಕೊರಕಪೂಜೇರಿ, ಲಕ್ಷ್ಮಣ ತೆಳಗಡೆ, ಲಕ್ಕಪ್ಪ ತೆಳಗಡೆ, ಲಗಮನ್ನಾ ಕುಟ್ರಿ, ಮಹಾದೇವ ಬಡ್ಡಿ, ಸದಾಶಿವ ಹಳ್ಳೂರ, ಬಸಪ್ಪ ಮನ್ನಿಕೇರಿ, ಗ್ರಾಪಂ ಸದಸ್ಯರು, ಪಿಕೆಪಿಎಸ್ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
YuvaBharataha Latest Kannada News