Breaking News

ತೆರೆಮರೆಯ ಬಹುದೊಡ್ಡ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ

Spread the love

ತೆರೆಮರೆಯ ಬಹುದೊಡ್ಡ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ

ಪ.ರಾಮಕೃಷ್ಣ ಶಾಸ್ತ್ರಿಯವರು ಕನ್ನಡ ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿದವರು. ಯಾವುದೇ ಪತ್ರಿಕೆ ತೆರೆಯಲಿ, ಅದರಲ್ಲಿ ಅವರಲ್ಲಿ ಲೇಖನ ಸದಾ ಕಂಡು ಬರುತ್ತಿತ್ತು. ಸಾಹಿತ್ಯ, ಪರಿಸರ, ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅವರ ಬರವಣಿಗೆ ಜನರ ಮನ ಸೆಳೆಯುತ್ತಿತ್ತು.

ಅದರಲ್ಲೂ ಪ್ರತಿ ಭಾನುವಾರ ಪತ್ರಿಕೆಗಳಲ್ಲಿ ಮೂಡಿಬರುವ ಪುರವಣಿಗಳಲ್ಲಿ ರಾಮಕೃಷ್ಣ ಶಾಸ್ತ್ರಿ ಅವರ ಬರಹ ಇದ್ದೇ ಇರುತ್ತಿತ್ತು. ದಶಕಗಳಿಂದ ಅವರ ಬರಹಗಳನ್ನು ಓದದವರೆ ವಿರಳ ಎನ್ನಬಹುದು.
ಅವರು ಕನ್ನಡ ಸಾರಸ್ವತ ಲೋಕದಲ್ಲಿ ಬಹುದೊಡ್ಡ ಹೆಸರು ಮಾಡಿದವರು. ಪುಟ್ಟ ಹಳ್ಳಿಯಲ್ಲಿ ಇದ್ದು ಸಾಹಿತ್ಯ ಕೃಷಿ ಮಾಡಿದ ಅವರ ಸಾಧನೆ ಅತ್ಯಂತ ದೊಡ್ಡದು.

ಬೆಳ್ತಂಗಡಿ ತಾಲೂಕಿನ ಮಚ್ಚಿನದ ಸದ್ಯ ತೆಂಕಕಾರಂದೂರು ನಿವಾಸಿಯಾಗಿರುವ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರಿಗೆ ಈ ಜುಲೈಗೆ 70ನೇ ವರ್ಷದ ಹುಟ್ಟುಹಬ್ಬ.

ಮಹಾರಾಷ್ಟ್ರ ಸರ್ಕಾರದ ಕನ್ನಡ ಪಠ್ಯದಲ್ಲಿ, ಮಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ಲೇಖನ, ಕಥೆಗಳು ಅಡಕವಾಗಿವೆ. ಬೆಳ್ತಂಗಡಿ ತಾಲೂಕಿನಲ್ಲಿ ಇಷ್ಟು ಬರಹ ಬರೆದವರು ಇಲ್ಲ ಎನ್ನುವುದು ಹೆಗ್ಗಳಿಕೆ.

ಸಾಹಿತ್ಯ ಸರಸ್ವತಿಯ ಮಾನಸ ಪುತ್ರರಂತಿರುವ ರಾಮಕೃಷ್ಣ ಶಾಸ್ತ್ರಿ ಅವರಿಗೆ ಇಂದು ಮಧ್ಯಾಹ್ನ ಬೆಳ್ತಂಗಡಿಯಲ್ಲಿ ಅವರ ಅಭಿಮಾನಿಗಳಿಂದ ಬಹುದೊಡ್ಡ ಪ್ರಮಾಣದಲ್ಲಿ ಗೌರವಾರ್ಪಣೆ ಸನ್ಮಾನ ನಡೆಯಲಿದೆ.

*ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿಅವರಿಗೆ ಅಭಿನಂದನೆ ಇಂದು*

ರಾಜ್ಯದ ವಿವಿಧ ಪತ್ರಿಕೆಗಳಲ್ಲಿ 12 ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ, 194 ಪುಸ್ತಕಗಳನ್ನು ಹೊರತಂದ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರ ಸಪ್ತತಿ ಪ್ರಯುಕ್ತ ಸಾರ್ವಜನಿಕ ಅಭಿನಂದನ ಸಮಾರಂಭ ಜು.8 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆಯಲಿದೆ ಎಂದು ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದ ಸಮಿತಿ ಸಂಚಾಲಕ ಸಂಪತ್ ಬಿ. ಸುವರ್ಣ ತಿಳಿಸಿದ್ದಾರೆ.
1953 ರಲ್ಲಿ ಪುತ್ತೂರಿನ ಪೋಳ್ಯದಲ್ಲಿ ಜನಿಸಿದ ರಾಮಕೃಷ್ಣ ಶಾಸ್ತ್ರಿಅವರು ಎಳವೆಯಲ್ಲಿಯೇ ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ನೆಲೆಸಿದ್ದು ತನ್ನ 11 ನೆಯ ವಯಸ್ಸಿನಲ್ಲಿ ಬರವಣಿಗೆ ಆರಂಭಿಸಿದ್ದರು. 7 ನೆಯ ತರಗತಿವರೆಗೆ ಮಾತ್ರ ಶಾಲಾ ವಿದ್ಯಾಭ್ಯಾಸ ಮಾಡಿದ್ದರೂ ಶಾಲೆ, ಪದವಿ ತರಗತಿಗೆ ಪಠ್ಯವಾಗುವಷ್ಟು ಸಮಗ್ರ ಬರವಣಿಗೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಆ ದಿನ ಅಪರಾಹ್ನ 2 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು ಕಾರ್ಯಕ್ರಮಕ್ಕೆ ಚಾಲನೆಯನ್ನು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನ ಪ್ರಾಚಾರ್ಯ ಡಾ| ಎನ್. ಎಂ. ಜೋಸೆಫ್ ನೀಡಲಿದ್ದಾರೆ. ಯಕ್ಷಗಾನಾಮೃತದಲ್ಲಿ ಭಾಗವತರಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಯಪದವು, ಹಿಮ್ಮೇಳದಲ್ಲಿ ಕೃಷ್ಣಪ್ರಕಾಶ ಉಳಿತ್ತಾಯ, ಶಿತಿಕಂಠ ಭಟ್ ಉಜಿರೆ, ನಿರೂಪಣೆಯಲ್ಲಿ ಬಿ. ಎನ್. ಗಿರೀಶ್ ಹೆಗ್ಡೆ ಧರ್ಮಸ್ಥಳ ಭಾಗವಹಿಸುತ್ತಾರೆ.
ಅಪರಾಹ್ನ 3.30 ರಿಂದ ಪ. ರಾಮಕೃಷ್ಣ ಶಾಸ್ತ್ರಿಗಳ ಸಾಹಿತ್ಯ ಅವಲೋಕನದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಎಂ. ಪಿ. ಶ್ರೀನಾಥ್ ಉಜಿರೆ ವಹಿಸಲಿದ್ದಾರೆ. ಪತ್ರಿಕಾ ಲೇಖನ ವಿಷಯದ ಕುರಿತು ಉದಯವಾಣಿ ನಿವೃತ್ತ ಹಿರಿಯ ಉಪಸಂಪಾದಕ ನಿತ್ಯಾನಂದ ಪಡ್ರೆ ಮಣಿಪಾಲ, ಸಮಗ್ರ ಸಾಹಿತ್ಯ ಕುರಿತು ಸ.ಪ್ರ.ದ.ಕಾಲೇಜು ಬೆಳ್ತಂಗಡಿ ಉಪನ್ಯಾಸಕ ಡಾ| ಕೃಷ್ಣಾನಂದ ಪಿ.ಎಂ. ಗರ್ಡಾಡಿ, ಮಕ್ಕಳ ಸಾಹಿತ್ಯ ಕುರಿತು ಬೆಳ್ತಂಗಡಿಯವರೇ ಆದ ಸಾಹಿತಿ ಡಾ| ದೀಪಾ ಪಡ್ಕೆ ಬೆಂಗಳೂರು ಮಾತನಾಡಲಿದ್ದಾರೆ.
ಸಂಜೆ 5 ರಿಂದ ಅಭಿನಂದನ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು ಪುಸ್ತಕ ಬಿಡುಗಡೆ, ಅಭಿನಂದನೆ, ಗೌರವ ಸಾನ್ನಿಧ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಲಿದ್ದು,
ಅಧ್ಯಕ್ಷತೆಯನ್ನು ಜನಪದ ವಿವಿ ಹಾವೇರಿಯ ವಿಶ್ರಾಂತ ಕುಲಪತಿ ಡಾ| ಕೆ. ಚಿನ್ನಪ್ಪ ಗೌಡ ವಹಿಸಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಕೆ. ಪ್ರತಾಪಸಿಂಹ ನಾಯಕ್, ಪಾವಂಜೆ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್, ಅಭಿನಂದಿತರಾಗುವ ಪ.ರಾಮಕೃಷ್ಣ ಶಾಸ್ತ್ರಿಮಚ್ಚಿನ, ಅವರ ಪತ್ನಿ ಶಾರದಾ ಆರ್. ಶಾಸ್ತ್ರಿಉಪಸ್ಥಿತರಿರುತ್ತಾರೆ. ಸಮಾರಂಭದಲ್ಲಿ ಲಕ್ಷ್ಮೀ ಮಚ್ಚಿನ ಬರೆದ ಬದುಕು ಬರಹ ಬವಣೆ: ಪ. ರಾಮಕೃಷ್ಣ ಶಾಸ್ತ್ರಿಹೆಜ್ಜೆ ಗುರುತುಗಳು, ಪ. ರಾಮಕೃಷ್ಣ ಶಾಸ್ತ್ರಿ ಅವರು ಬರೆದ – ಮಳೆ ಮಳೆ (ಲೇಖನಗಳ ಸಂಗ್ರಹ), ನಟನ ಮನೋಹರಿ (ಕಾದಂಬರಿ), ರೋಚಕ ಲೋಕ (ತರಂಗ ಲೇಖನಗಳ ಸಂಗ್ರಹ), ಪ್ರಪಂಚದ ಸೋಜಿಗಗಳು (ತರಂಗ ಲೇಖನಗಳ ಸಂಗ್ರಹ) ಪುಸ್ತಕಗಳು ಬಿಡುಗಡೆಯಾಗಲಿವೆ ಎಂದರು.

ಮಕ್ಕಳ ಕತೆ ಇವರ ಜನಪ್ರಿಯ ಮಾಧ್ಯಮವಾದರೂ ಕತೆ, ಲೇಖನ, ಕಾದಂಬರಿ, ಕವಿತೆ, ವಿಡಂಬನೆ, ನಾಟಕ, ಹನಿಗವನ ಹೀಗೆ ಎಲ್ಲ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಕಾಶವಾಣಿ, ದೂರದರ್ಶನದಲ್ಲೂ ಕಾರ್ಯಕ್ರಮಗಳು ಪ್ರಸಾರವಾಗಿವೆ. ಲೇಖನಗಳು, ಕತೆಗಳು ತುಳು, ಇಂಗ್ಲಿಷ್, ಮಲಯಾಳ, ಹಿಂದಿ ಭಾಷೆಗೆ ಅನುವಾದಗೊಂಡಿವೆ. ಸಮಾಜಸೇವೆ, ಅಭಿವೃದ್ಧಿಯ ಪುರೋಗಾಮಿ ಚಿಂತನೆ, ಸಹಕಾರಿ ಕ್ಷೇತ್ರದಲ್ಲೂ ಅನುಭವ, ಯಕ್ಷಗಾನ ಕ್ಷೇತ್ರದಲ್ಲೂ ಭಾಗವಹಿಸುವಿಕೆ ಇದೆ. ಹೀಗೆ ಎಲ್ಲ ರಂಗದಲ್ಲಿ ತೊಡಗಿಸಿಕೊಂಡವರು. ಈ ನಿಟ್ಟಿನಲ್ಲಿ ಅವರ ಅಭಿನಂದನ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ನಡೆಸಬೇಕೆಂಬ ಇರಾದೆಯಿಂದ ಆತ್ಮೀಯರು ಒಟ್ಟಾಗಿ ಈ ಸಮಾರಂಭ ಆಯೋಜಿಸಲಾಗಿದೆ. ಶಾಸ್ತ್ರಿಯವರ ಒಡನಾಡಿಗಳು, ಆತ್ಮೀಯರು, ಬಂಧುಗಳು, ಸಾಹಿತ್ಯದ ಪರಿಚಾರಕರು, ಸಾರ್ವಜನಿಕರು ಈ ಸಮಾರಂಭದಲ್ಲಿ ಭಾಗವಹಿಸಿ ಸಾಹಿತ್ಯ ಪರಿಚಾರಕರ ಈ ಸಮಾರಂಭವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಬೇಕೆಂದು ಸಮಿತಿಯ ಸರ್ವಸದಸ್ಯರ ಅಪೇಕ್ಷೆಯಾಗಿದೆ ಎಂದು ತಿಳಿಸಿದ್ದಾರೆ.


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

seventeen − three =