ಪಂಚ ನಾಯಕನಹಳ್ಳಿ ಲಕ್ಷ್ಮೀದೇವಿ ಜಾತ್ರೆ ಗುರುವಾರ
ಯುವ ಭಾರತ ಸುದ್ದಿ ಗೋಕಾಕ :
ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಪಂಚನಾಯಕನಹಟ್ಟಿ ಗ್ರಾಮದ ಶ್ರೀ ಲಕ್ಷ್ಮೀದೇವಿಯ 31 ನೇ ಜಾತ್ರಾ ಮಹೋತ್ಸವ ಗುರುವಾರ ಫೆಬ್ರವರಿ 2 ರಿಂದ 4 ರ ವರೆಗೆ ಅದ್ದೂರಿಯಿಂದ ನೆರವೇರಲಿದೆ.
2 ರಂದು ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಗಳು, ಅಭಿಷೇಕ, ಬುತ್ತಿ ಪೂಜೆ, ನೈವೇದ್ಯ, ಭಜನೆ, ಡೊಳ್ಳು ವಾಧ್ಯ ಕಾರ್ಯಕ್ರಮಗಳು ರಾತ್ರಿ 12 ರ ವರೆಗೆ ನಡೆಯಲಿವೆ. ಶುಕ್ರವಾರ ಫೆಬ್ರವರಿ 3 ರಂದು ಬೆಳಗ್ಗೆ 8 ಗಂಟೆಯಿಂದ ಜೋಡು ಕುದುರೆ ಮತ್ತು ಎತ್ತಿನ ಚಕ್ಕಡಿ ಶರ್ತು ನಡೆಯಲಿವೆ. ಚಕ್ಕಡಿ ಶರ್ತುಗಳಲ್ಲಿ ವಿಜೇತರಾದವರಿಗೆ 31 ಸಾವಿರ, 21 ಸಾವಿರ ಮತ್ತು 11 ಸಾವಿರ ರೂ. ನಗದು ಹಾಗೂ ಬೆಳ್ಳಿ ಪದಕ ಬಹುಮಾನ ಇಡಲಾಗಿದೆ. ಜೋಡು ಎತ್ತಿನ ಚಕ್ಕಡಿ ಶರ್ತು ವಿಜೇತರಿಗೆ 1 ಲಕ್ಷ ರೂ. ನಗದು ಬೆಳ್ಳಿ ಪದಕ, ಪ್ರಥಮ ಬಹುಮಾನ, 75 ಸಾವಿರ ರೂ. ನಗದು ಬೆಳ್ಳಿ ಪದಕದ ದ್ವೀತಿಯ ಬಹುಮಾನ ಹಾಗೂ 50 ಸಾವಿರ ನಗದು, 15 ಬೆಳ್ಳಿ ಪದಕದ ಮೂರನೇ ಬಹುಮಾನ ಇಡಲಾಗಿದೆ. ಕುದುರೆ ಚಕ್ಕಡಿ ಶರ್ತಿಗೆ ಪ್ರವೇಶ ಶುಲ್ಕ 3,100 ರೂ. ಹಾಗೂ ಎತ್ತಿನ ಚಕ್ಕಡಿ ಶರ್ತಿಗೆ ಪ್ರವೇಶ ಶುಲ್ಕ 10 ಸಾವಿರ ರೂ. ನಿಗದಿ ಮಾಡಲಾಗಿದೆ.
ಶುಕ್ರವಾರ ಸಂಜೆ 4 ಗಂಟೆಗೆ ರಥೋತ್ಸವ ಜರುಗಲಿದ್ದು ಅದಕ್ಕೂ ಮೊದಲು ಮದ್ಯಾಹ್ನ 12 ಗಂಟೆಗೆ ಸಾಮೂಹಿಕ ವಿವಾಗಳು ನಡೆಯಲಿವೆ. ರಾತ್ರಿ 10 ಗಂಟೆಗೆ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಶನಿವಾರ ಫೆಬ್ರವರಿ 5 ರಂದು ಬೆಳಗ್ಗೆ 8 ಗಂಟೆಗೆ 35 ಗ್ರಾಮಗಳ ದೇವರುಗಳ ಪಲ್ಲಕ್ಕಿ ಉತ್ಸವ ನಡೆಯಲಿದೆ. ಈ ಜಾತ್ರಾ ಮಹೋತ್ಸವದ ಸ್ಪರ್ಧೆಗಳ ವಿವರಗಳನ್ನು ಲಕ್ಷ್ಮೀದೇವಿ ಜಾತ್ರಾ ಕಮೀಟಿಯಿಂದ ಪಡೆಯಬಹುದಾಗಿಯೆಂದು ಸಂತೋಷ ನಾಯಕ ತಿಳಿಸಿದ್ದಾರೆ.